ಚಾಮರಾಜನಗರ (ಏ.16); ಸದ್ಯದ ಪರಿಸ್ಥಿತಿಯ ಪ್ರಕಾರ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗು ಪಿಯುಸಿ ಪರೀಕ್ಷೆಗಳು ನಡೆಯುತ್ತವೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜೂನ್ 21 ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಗದಿಯಾಗಿದೆ. ಅಂದರೆ ಇನ್ನೂ ಎರಡು ತಿಂಗಳ ಮೇಲೆ ಒಂದು ವಾರ ಇದೆ. ಪರೀಕ್ಷೆ ನಡೆಸಲು ಕಳೆದ ವರ್ಷ ಆರೋಗ್ಯ ಇಲಾಖೆ ಎಸ್. ಓ.ಪಿ. ನೀಡಿತ್ತು. ಅದನ್ನೇ ಅಳವಡಿಸಿಕೊಳ್ಳಬಹುದೇ ಅಥವಾ ಇನ್ನೂ ಏನಾದರು ಸುಧಾರಣೆ ಮಾಡಬೇಕೆ ಎಂಬ ಬಗ್ಗೆ ಪರಿಶೀಲಿಸಿ ಎಸ್.ಓ.ಪಿ. ನೀಡುವಂತೆ ಆರೋಗ್ಯ ಇಲಾಖೆಯನ್ನು ಕೇಳಿದ್ದೇವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಪರೀಕ್ಷೆ ನಡೆಸುವಂತೆ ಎಲ್ಲಾ ಕಡೆಯಿಂದ ಒತ್ತಾಯ ಬರುತ್ತಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹ ಪರೀಕ್ಷೆಗಳನ್ನು ನಡೆಸುವಂತೆ ಪತ್ರ ಬರೆದಿದ್ದಾರೆ. ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವುದರಿಂದ, ಆಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುರೇಶ್ ಕುಮಾರ್ ಅವರು ತಿಳಿಸಿದರು.
1 ರಿಂದ 9 ನೇ ತರಗತಿಗಳಿಗೆ ಪರೀಕ್ಷೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ನಿನ್ನೆ ಚರ್ಚೆ ನಡೆಸಲಾಗಿದೆ. 1 ರಿಂದ 5 ನೇ ತರಗತಿಗಳಿಗೆ ಏನು ಮಾಡಬೇಕು, 6 ರಿಂದ 9 ನೇ ತರಗತಿಗಳಿಗೆ ಏನು ಮಾಡಬೇಕು ಎಂಬ ಬಗ್ಗೆ ಒಂದು ಸ್ಥೂಲ ರೂಪ ಬಂದಿದ್ದು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಇದನ್ನು ಓದಿ: CM BS Yediyurappa | ಮತ್ತೆ ಕೊರೋನಾ ಸೋಂಕಿಗೆ ತುತ್ತಾದ ಸಿಎಂ ಬಿಎಸ್ ಯಡಿಯೂರಪ್ಪ; ಮಣಿಪಾಲ್ ಆಸ್ಪತ್ರೆಗೆ ದಾಖಲು
ಏಪ್ರಿಲ್ 18 ರಂದು ಮುಖ್ಯಮಂತ್ರಿಗಳು ಭಾನುವಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸದೇ ಇರಲು ತೀರ್ಮಾನ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೊರೋನಾ ಒಂದು ದೊಡ್ಡ ವಿಪತ್ತು ಇದನ್ನು ಎಲ್ಲರು ಒಟ್ಟಿಗೆ ಸೇರಿ ಎದುರಿಸಬೇಕು. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿಗಳಾಗಿದ್ದರೂ ನಮಗೆಲ್ಲ ಕೊರೋನಾವೇ ದೊಡ್ಡ ಶತ್ರುವಾಗಿದೆ. ಹಾಗಾಗಿ ನಮ್ಮ ನಮ್ಮಲ್ಲಿನ ವಿರೋಧಗಳನ್ನು ಬದಿಗೊತ್ತಿ ಭಾಗವಹಿಸಬೇಕು ಎನ್ನುವ ಮೂಲಕ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರಿಗೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಗೆ ನೀಡುವ ರೆಮ್ ಡೆಸಿವಿರ್ ಚುಚ್ಚುಮದ್ದು ಕೊರತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಇನ್ನು ಮೂರ್ನಾಲ್ಕು ದಿನಗಳಿಗಾಗುವಷ್ಟು ಮಾತ್ರ ರೆಮ್ ಡೆಸಿವಿರ್ ಚುಚ್ಚುಮದ್ದು ನಮ್ಮಲ್ಲಿ ದಾಸ್ತಾನಿದೆ. ಹಾಗಾಗಿ ಅಗತ್ಯ ಸಂಖ್ಯೆಯ ರೆಮ್ ಡೆಸಿವಿರ್ ಚುಚ್ಚು ಮದ್ದು ಕಳಿಸಿಕೊಡುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳನ್ನು ಕೇಳಿದ್ದೇನೆ. ರೆಮ್ ಡೆಸಿವಿರ್ ಪರ್ಯಾಯವಾಗಿ ಮತ್ತೊಂದು ಚುಚ್ಚುಮದ್ದು ಬಂದಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಪೂರೈಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇನೆ ಎಂದರು.
ವರದಿ: ಎಸ್.ಎಂ.ನಂದೀಶ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ