ಆಕಲಬುರ್ಗಿ; ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಎನಿಸಿಕೊಂಡ ಕಲಬುರ್ಗಿ ಯಲ್ಲಿದ್ದ ಕೆಲ ಕಛೇರಿಗಳು ಸ್ಥಳಾಂತರಗೊಂಡದ್ದು ಒಂದು ಕಡೆಯಾದ್ರೆ, ಬರಬೇಕಿದ್ದ ಸಂಸ್ಥೆಗಳೂ ಬೇರೆಡೆ ವರ್ಗವಾಗ್ತಿರೋದು ಮತ್ತೊಂದು ಕಡೆ. ವಿಭಾಗೀಯ ಕೇಂದ್ರ ಎನಿಸಿಕೊಂಡ ಕಲಬುರ್ಗಿಗೆ ಒಂದೊಂದೇ ಕೈ ತಪ್ಪುತ್ತಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಏಮ್ಸ್ ಕೈ ತಪ್ಪಿರೋದಕ್ಕೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸಿದ್ದರೆ, ಟ್ವಿಟ್ಟರ್ ಮೂಲಕ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದಿಂದ ಕಲಬುರ್ಗಿ ಜಿಲ್ಲೆಗೆ ಅತಿ ಹೆಚ್ಚು ಅನ್ಯಾಯವಾಗಿದ್ದು, ಏನೇ ಪತ್ರ ಬರೆದರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ಕನ್ನಡ ಪರ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ನಡೆಸಿವೆ. ಅಖಿಲ ಭಾರತ ಮೆಡಿಕಲ್ ಸೈನ್ಸ್ ಸಂಸ್ಥೆ ಕೈ ತಪ್ಪಿರೋದಕ್ಕೆ ಕಲಬುರ್ಗಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಲಬುರ್ಗಿಯ ಇ.ಎಸ್.ಐ. ಯಲ್ಲಿ ಸ್ಥಾಪಿಸಬೇಕಾದ ಏಮ್ಸ್ ಸಂಸ್ಥೆಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುತ್ತಿರುವ ಕುರಿತು ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿರೋ ಮಲ್ಲಿಕಾರ್ಜುನ ಖರ್ಗೆ, ಹುಬ್ಬಳ್ಳಿಗೆ ಸ್ಥಳಾಂತರಿಸೋದು ಸರಿಯಲ್ಲ. ಈಗಾಗಲೇ ಇ.ಎಸ್.ಐ. ಯಲ್ಲಿ ಏಮ್ಸ್ ಗೆ ಅಗತ್ಯವಿರೋ ಕಟ್ಟಡ ಸೇರಿ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿದೆ. ಕಲಬುರ್ಗಿಯಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸಹ ಬಿಜೆಪಿ ಕಾರ್ಯವೈಖರಿಯನ್ನು ಖಂಡಿಸಿದ್ದಾರೆ. ಕ
ಲಬುರ್ಗಿ ಬಿಟ್ಟು ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಮುಂದಾಗಿರೋ ಕೇಂದ್ರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅತಿ ಹೆಚ್ಚು ಅನ್ಯಾಯಕ್ಕೊಳಗಾಗಿರೋ ಜಿಲ್ಲೆ ಅಂದ್ರೆ ಅದು ಕಲಬುರ್ಗಿಯಾಗಿದೆ. ಕಲಬುರ್ಗಿಗೆ ಬಿಜೆಪಿಯ ಮಲತಾಯಿ ಧೋರಣೆ ಮಿತಿ ಮೀರಿದೆ. ಈ ಮುಂಚೆ ರೈಲ್ವೆ ವಲಯ, ನಿಮ್ಜ್ ಮತ್ತು ಜವಳಿ ಪಾರ್ಕ್ ಕೈ ತಪ್ಪಿತು. ಈಗ ಏಮ್ಸ್ ಸಹ ಕಲಬುರ್ಗಿ ಜಿಲ್ಲೆಯ ಕೈ ತಪ್ಪುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಸ್ಥಾಪಿಸಬೇಕಿದ್ದ ಸೆಂಟರ್ ಆಫ್ ಎಕ್ಸಲೆನ್ಸಿ ಸಹ ಬೆಂಗಳೂರು ಪಾಲಾಗಿದೆ. ಕಲಬುರ್ಗಿಯ ಹಲವು ಕಛೇರಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಇಲ್ಲಿಗೆ ಬರಬೇಕಿರೋ ಸಂಸ್ಥೆಗಳನ್ನೂ ಕಿತ್ತುಕೊಂಡು ಬೇರೆ ಕಡೆ ಕೊಡಲಾಗುತ್ತಿದೆ. ಪ್ರತಿ ಬಾರಿ ಅನ್ಯಾಯವಾದಾಗಲೂ ಸಿಎಂ ಮತ್ತು ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಆದ್ರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತಹ ಸ್ಥಿತಿ ಇದೆ ಎಂದು ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಪ್ಪ ಚರ್ಮದ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸೋಕೆ ಹೋರಾಟವೊಂದೇ ಮುಂದಿರೋ ಮಾರ್ಗ ಎಂದಿರೋ ಪ್ರಿಯಾಂಕ್ ಖರ್ಗೆ, ಕಲಬುರ್ಗಿ ಜಿಲ್ಲೆಗೆ ಆಗಿರೋ ಅನ್ಯಾಯ ಕೂಡಲೇ ಸರಿಪಡಿಸಬೇಕು. ಇಲ್ಲದೇ ಇದ್ದಲ್ಲಿ ಬೀದಿಗಳಿದು ಹೋರಾಟ ಮಾಡೋದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮೂಲಕ ಪ್ರಿಯಾಂಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೇಡಿಕೆ ಈಡೇರದ ಹಿನ್ನೆಲೆ ಸಾರಿಗೆ ನೌಕರರಿಂದ ಇಂದು ಮತ್ತೆ ಪ್ರತಿಭಟನೆ: ಉಗ್ರ ಹೋರಾಟದ ಎಚ್ಚರಿಕೆ!
ಏಮ್ಸ್ ಕೈ ತಪ್ಪಿದ್ದಕ್ಕೆ ಪ್ರತಿಭಟನೆ;
ಕಲಬುರ್ಗಿಯಲ್ಲಿ ಸ್ಥಾಪಿಸಬೇಕಿದ್ದ ಏಮ್ಸ್ ಹುಬ್ಬಳ್ಳಿಗೆ ಸ್ಥಳಾಂತರಿಸಿರೋದಕ್ಕೆ ಕನ್ನಡಪರ ಸಂಘಟನೆಗಳು ಖಂಡಿಸಿವೆ. ಕಲಬುರ್ಗಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ