ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಗಮ ಸಂಚಾರಕ್ಕಿಲ್ಲ ಭಾಗ್ಯ; ನಡೆಯುತ್ತಿದೆ ಶೂನ್ಯ ಫಲಿತಾಂಶದ ದುರಸ್ತಿ ಕಾಮಗಾರಿ

ಹೊಂಡ-ಗುಂಡಿಗಳಲ್ಲಿ ಏಳುತ್ತಾ, ಬೀಳುತ್ತಾ, ತೂರಾಡುತ್ತಾ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಈ ಹೆದ್ದಾರಿಯ ಪ್ರಯಾಣಿಕರದ್ದಾಗಿದೆ. ಹೆದ್ದಾರಿಯ ಈ ದುರಾವಸ್ಥೆಯನ್ನು ಖಂಡಿಸಿ ಈಗಾಗಲೇ ಹಲವು ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ನಡೆಸಿವೆ. ಕೋಟಿ ವೆಚ್ಚ ಮಾಡಿ ನಡೆಸುತ್ತಿರುವ ಕಾಮಗಾರಿಯ ಫಲಿತಾಂಶ ಮಾತ್ರ ಈವರೆಗೆ ಶೂನ್ಯ ಎನ್ನುವ ಆರೋಪವೂ ಇದೀಗ ಕೇಳಿ ಬರಲಾರಂಭಿಸಿದೆ.

ರಾಷ್ಟ್ರೀಯ ಹೆದ್ದಾರಿ 75 ಗುಂಡು ಬಿದ್ದು, ಹದಗೆಟ್ಟಿರುವುದು.

ರಾಷ್ಟ್ರೀಯ ಹೆದ್ದಾರಿ 75 ಗುಂಡು ಬಿದ್ದು, ಹದಗೆಟ್ಟಿರುವುದು.

  • Share this:
ಪುತ್ತೂರು; ರಾಜಧಾನಿ ಬೆಂಗಳೂರು ಹಾಗೂ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ದುರಾವಸ್ಥೆ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣ ತೋರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಸುಮಾರು 75 ಕಿಲೋ ಮೀಟರ್ ವ್ಯಾಪ್ತಿಯ ರಸ್ತೆ ಸಂಪೂರ್ಣ ಹೊಂಡ-ಗುಂಡಿಗಳಿಂದ ಮುಚ್ಚಿದ್ದು, ಇದರ ದುರಸ್ತಿ ಕಾಮಗಾರಿ ಆರಂಭಗೊಂಡು 20 ದಿನಗಳು ಸಮೀಪಿಸುತ್ತಿದೆ. ಆದರೆ ಕಾಮಗಾರಿ ನಡೆಸಿರುವ ಫಲಿತಾಂಶ ಮಾತ್ರ ರಸ್ತೆಯಲ್ಲಿ ಕಂಡು ಬರುತ್ತಿಲ್ಲ.

ಭಾರೀ ಪ್ರಮಾಣದ ಹೊಂಡ-ಗುಂಡಿಗಳಿರುವ ಸ್ಥಳಗಳನ್ನು ಮಾತ್ರ ಮುಚ್ಚಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತಿದ್ದು, ಉಳಿದ ಕಡೆಗಳಲ್ಲಿರುವ ಹೊಂಡ-ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಬಿ.ಸಿ.ರೋಡ್, ಪಾಣಿಮಂಗಳೂರು, ಮೆಲ್ಕಾರ್, ದಾಸರಕೋಡಿ, ಸೂರಿಕುಮೇರು, ಉಪ್ಪಿನಂಗಡಿ, ನೆಲ್ಯಾಡಿ ಭಾಗದಲ್ಲಿ ಅತೀ ಹೆಚ್ಚು ಹಾನಿಯಾಗಿದ್ದ ಪ್ರದೇಶಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು, ಉಳಿದ ಕಡೆಗಳಲ್ಲಿ ಕಾಮಗಾರಿಯನ್ನು ನಡೆಸಿಲ್ಲ. ನರಹರಿ ಬೆಟ್ಟ, ಕಲ್ಲಡ್ಕ, ಮಾಣಿ ಭಾಗದಲ್ಲಿ ಹಲವು ಹೊಂಡ-ಗುಂಡಿಗಳು ಈಗಲೂ ಕಂಡು ಬರುತ್ತಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಈ ಗುಂಡಿಗಳನ್ನು ಹಾಗೆಯೇ ಬಿಟ್ಟು ಹೋಗಿರುವುದು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ಓದಿ: ಪಟಾಕಿ ನಿಷೇಧಕ್ಕೆ ಸರ್ಕಾರ ನಿರ್ಧಾರ; ಶೀಘ್ರದಲ್ಲೇ ಆದೇಶ: ಸಿಎಂ ಯಡಿಯೂರಪ್ಪ

ಮಂಗಳೂರಿನ ಪಡೀಲ್ ನಿಂದ ಅಡ್ಡಹೊಳೆವರೆಗಿನ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಗಾಗಿ ಹೆದ್ದಾರಿ ಇಲಾಖೆ ಈಗಾಗಲೇ 16 ಕೋಟಿ ರೂಪಾಯಿಗಳ ಯೋಜನೆಯನ್ನು ಹಾಕಿಕೊಂಡಿದೆ. ಈ ಕಾಮಗಾರಿಯನ್ನು ಜೆ.ಎಸ್.ಆರ್ ಮತ್ತು ಹಿಂದುಸ್ತಾನ್ ಹೆಸರಿನ ಎರಡು ಕಂಪನಿಗಳಿಗೆ ಗುತ್ತಿಗೆಯನ್ನೂ ನೀಡಲಾಗಿದೆ. 20 ದಿನಗಳ ಹಿಂದೆಯೇ ಈ ಕಾಮಗಾರಿಯನ್ನು ಎರಡೂ ಕಂಪನಿಗಳೂ ಕೈಗೆತ್ತಿಕೊಂಡಿವೆ. ಆದರೆ  ಅತೀ ಹೆಚ್ಚು ಹೊಂಡ-ಗುಂಡಿಗಳಿರುವ ಕೆಲವೇ ಆಯ್ದ ಸ್ಥಳಗಳಲ್ಲಿ ಮಾತ್ರ ಹೊಂಡ ಮುಚ್ಚಿರುವ ಕಂಪನಿಗಳು ಉಳಿದ ಕಡೆಗಳನ್ನು ಹಾಗೆಯೇ ಬಿಟ್ಟು ಹೋಗಿವೆ. ಹೆದ್ದಾರಿ ಇಲಾಖೆಯ ಪ್ರಕಾರ ಕಾಮಗಾರಿ ವಹಿಸಿಕೊಂಡ ಕಂಪನಿಗಳು ಮೊದಲ ಹಂತದಲ್ಲಿ ಹೆದ್ದಾರಿಯಲ್ಲಿರುವ ಎಲ್ಲಾ ಹೊಂಡ-ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ಮುಂದಿನ ಹಂತದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಮರು ಡಾಂಬರೀಕರಣವನ್ನೂ ಮಾಡುವಂತೆ ಸೂಚಿಸಲಾಗಿದೆ.

ಕಾಮಗಾರಿ ಆರಂಭಗೊಂಡು ಇಪ್ಪತ್ತು ದಿನಗಳ ಕಳೆಯುತ್ತಿದ್ದರೂ, ಹಲವು ಕಡೆಗಳಲ್ಲಿ ಗುಂಡಿಗಳಿಂದ ವಾಹನ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ಈ ಹೊಂಡ-ಗುಂಡಿಗಳಲ್ಲಿ ಏಳುತ್ತಾ, ಬೀಳುತ್ತಾ, ತೂರಾಡುತ್ತಾ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಈ ಹೆದ್ದಾರಿಯ ಪ್ರಯಾಣಿಕರದ್ದಾಗಿದೆ. ಹೆದ್ದಾರಿಯ ಈ ದುರಾವಸ್ಥೆಯನ್ನು ಖಂಡಿಸಿ ಈಗಾಗಲೇ ಹಲವು ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ನಡೆಸಿವೆ. ಕೋಟಿ ವೆಚ್ಚ ಮಾಡಿ ನಡೆಸುತ್ತಿರುವ ಕಾಮಗಾರಿಯ ಫಲಿತಾಂಶ ಮಾತ್ರ ಈವರೆಗೆ ಶೂನ್ಯ ಎನ್ನುವ ಆರೋಪವೂ ಇದೀಗ ಕೇಳಿ ಬರಲಾರಂಭಿಸಿದೆ.
Published by:HR Ramesh
First published: