ನೀರಾವರಿ ನಿಗಮದ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ : ಮಹದಾಯಿ ಮಾದರಿ ಹೋರಾಟದ ಎಚ್ಚರಿಕೆ

ಯಾವುದೇ ಕಾರಣಕ್ಕೂ ಕಚೇರಿ ಸ್ಥಳಾಂತರ ಮಾಡುವುದು ಬೇಡ. ರಾಜ್ಯ ಸರ್ಕಾರದ ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ರೈತ ಸಂಘಟನೆಗಳ ನೇತ್ರತ್ವದಲ್ಲಿ ಮಹದಾಯಿ ಹೋರಾಟದ ಮಾದರಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ.

ರೈತ ಮುಖಂಡರು

ರೈತ ಮುಖಂಡರು

  • Share this:
ಹುಬ್ಬಳ್ಳಿ(ಜುಲೈ.29): ಧಾರವಾಡದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರೈತ ಸೇನಾ ಮುಖಂಡ ವೀರೇಶ್ ಸೊಬರದಮಠ ರಾಜ್ಯ ಸರ್ಕಾರದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸರ್ಕಾರಿ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಕುರಿತು ತೀರ್ಮಾನ ಮಾಡಲಾಗಿದೆ. ನಂಜುಂಡಪ್ಪ ವರದಿಯ ಪ್ರಕಾರ 9 ಪ್ರಮುಖ ಕಚೇರಿಗಳನ್ನು ಈಗಾಗಲೇ ಸ್ಥಳಾಂತರಿಸಬೇಕಿತ್ತು. ಆದರೆ, ಇದುವರೆಗೂ ಯಾವ ಕಚೇರಿಗಳನ್ನೂ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಿಲ್ಲ. ಮಾಡಬೇಕಾದ ಕೆಲಸ ಬಿಟ್ಟು ಈಗ ಧಾರವಾಡದಲ್ಲಿರುವ ನೀರಾವರಿ ನಿಗಮದ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ನೀರಾವರಿ ನಿಗಮದ ಕಚೇರಿ ಸ್ಥಳಾಂತರಿಸದಂತೆ ಈ ಹಿಂದೆ ಜಗದೀಶ್ ಶೆಟ್ಟರ್ ಮತ್ತು ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದರು. ಅಂದಿನ ಸಿಎಂ ಕುಮಾರಸ್ವಾಮಿ ಯವರಿಗೆ ಪತ್ರ ಬರೆದು ಕಚೇರಿ ಸ್ಥಳಾಂತರ ಬೇಡ ಎಂದು ಒತ್ತಡ ಹೇರಿದ್ದರು. ಈಗ ಅವರದ್ದೇ ಸರ್ಕಾರವಿದ್ದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ. ನೀರಾವರಿ ನಿಗಮದ ಕಚೇರಿಯನ್ನು ಧಾರವಾಡದಲ್ಲಿಯೇ ಮುಂದುವರಿಸಬೇಕು‌. ಯಾವುದೇ ಕಾರಣಕ್ಕೂ ಕಚೇರಿ ಸ್ಥಳಾಂತರ ಮಾಡುವುದು ಬೇಡ. ರಾಜ್ಯ ಸರ್ಕಾರದ ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ರೈತ ಸಂಘಟನೆಗಳ ನೇತ್ರತ್ವದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು. ಮಹದಾಯಿ ಹೋರಾಟದ ಮಾದರಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಕಚೇರಿ ಎತ್ತಂಗಡಿ ಮಾಡುವುದರ ಹಿಂದೆ ದುರುದ್ದೇಶವಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕಚೇರಿ ತೆರೆಯಲಾಗಿತ್ತು. ಈಗ ಕಚೇರಿ ಸ್ಥಳಾಂತರದಿಂದ ಸ್ಥಳೀಯ ಗುತ್ತಿಗೆ ನೌಕರರ ಬದುಕು ಅತಂತ್ರವಾಗುತ್ತೆ.‌ ಧಾರವಾಡದಲ್ಲಿರುವ ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಮಾಡುವುದು ಸರಿಯಲ್ಲ. ರೈತರು ಮತ್ತು ಸ್ಥಳೀಯ ಗುತ್ತಿಗೆದಾರರಿಗೆ ಅನಾನುಕೂಲತೆ ಆಗುತ್ತದೆ. ಅಧಿವೇಶನದ ಸಂದರ್ಭದಲ್ಲಿ ಕಚೇರಿಗೆ ಭೇಟಿ ನೀಡಲು ಜನಸಾಮಾನ್ಯರಿಗೆ ಸಾಧ್ಯವಾಗಲ್ಲ. ಬೆಂಗಳೂರಿನಲ್ಲಿರುವ ಎಂ‌ಡಿ ಕಚೇರಿಯನ್ನು ಕೂಡಲೆ ಸುವರ್ಣ ಸೌಧಕ್ಕೆ ತರಬೇಕು. ಅಂದಾಗ ಮಾತ್ರ ಸೂಕ್ತ ನ್ಯಾಯ ಒದಗಿಸಿದಂತೆ ಆಗುತ್ತದೆ ಎನ್ನುವುದು ರೈತ ಮುಖಂಡರ ವಾದ.

ಇನ್ನೊಂದೆಡೆ ಕೊರೋನಾ ಸಂದರ್ಭದಲ್ಲಿ ಇಡೀ ಕಚೇರಿ ಸ್ಥಳಾಂತರ ಮಾಡುತ್ತಿರುವುದು ನೀರಾವರಿ ನಿಗಮದ ಸಿಬ್ಬಂಧಿಗಳ ಆತಂಕಕ್ಕೆ ಕಾರಣವಾಗಿದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಕುಟುಂಬಗಳನ್ನು ಕಟ್ಟಿಕೊಂಡು ಹೇಗೆ ಶಿಫ್ಟ್ ಆಗಬೇಕು ಎನ್ನುವ ಚಿಂತೆ ನಿರಾವರಿ ನಿಗಮದ ಉದ್ಯೋಗಿಗಳನ್ನು ಕಾಡುತ್ತಿದೆ‌. ಕೆಲವು ಮೇಲಧಿಕಾರಿಗಳ ಸ್ವಹಿತಾಸಕ್ತಿಯಿಂದಾಗಿ ತರಾತುರಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕೂಡ ಕಚೇರಿ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರವಾಡದ ಸರ್ಕಾರಿ ಕಟ್ಡದಲ್ಲಿಯೇ ನೀರಾವರಿ ನಿಗಮದ ಕಚೇರಿ ಇರಲು ವ್ಯವಸ್ಥೆ ಆಗಬೇಕು ಎನ್ನುತ್ತಿದ್ದಾರೆ. ಆದರೆ, ಕೆಲ ಅಧಿಕಾರಿಗಳು ಶಾಸಕರ ಮಾತನ್ನು ಕಿವಿಗೆ ಹಾಕಿಕೊಂಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಗೆ ಕಚೇರಿ ಸ್ಥಳಾಂತರಿಸಲು ಮನಸ್ಸಿಲ್ಲ‌. ತಮ್ಮನ್ನು ಭೇಟಿಯಾದ ರೈತ ಮುಖಂಡರ ಬಳಿ ಈ ಕುರಿತು ಹೇಳಿಕೊಂಡಿದ್ದಾರೆ. ಆದರೆ ರಾಜಕೀಯ ಕಾರಣಕ್ಕಾಗಿ ಬಹಿರಂಗವಾಗಿ ಮಾತನಾಡುತ್ತಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ : ಪಠ್ಯದಿಂದ ಟಿಪ್ಪು ಅಧ್ಯಾಯ ಕೈಬಿಟ್ಟ ಸರ್ಕಾರಕ್ಕೆ ಅಭಿನಂದನೆಗಳು‘ - ಶಾಸಕ ಅಪ್ಪಚ್ಚು ರಂಜನ್​​

ರಾಜ್ಯ ಸರ್ಕಾರ ವಿಧಾನಸೌಧದಲ್ಲಿನ ಪ್ರಮುಖ ಕಚೇರಿಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸಲಿ. ಅದನ್ನು ಬಿಟ್ಟು ಉತ್ತರ ಕರ್ನಾಟಕದಲ್ಲಿನ ಕಚೇರಿಗಳನ್ನೇ ಸ್ಥಳಾಂತರಿಸಿ ಜಗಳ ಹಚ್ಚುವ ಕೆಲಸ ಮಾಡಬಾರದು. ಇದರಿಂದ ಪ್ರಾದೇಶಿಕ ಅಸಮಾನತೆ ಹೇಗೆ ನಿವಾರಣೆ ಆಗುತ್ತೆ. ನಂಜುಂಡಪ್ಪ ವರದಿ ಸಮರ್ಪಕ ಅನುಷ್ಠಾನ ಹೇಗಾಗುತ್ತೆ ಎಂದು ಈ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ಕಳಕಳಿ ಇರುವ ಸಿಎಂ ಯಡಿಯೂರಪ್ಪನವರು ಆದಷ್ಟು ಬೇಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಈಗಿರುವ ಕರ್ನಾಟಕ ನೀರಾವರಿ ನಿಗಮದ ಕಚೇರಿಯನ್ನು ಧಾರವಾಡದಲ್ಲಿಯೇ ಮುಂದುವರಿಸಲಿ. ಎಂ‌ಡಿ ಕಚೇರಿಯನ್ನು ಸುವರ್ಣ ಸೌಧಕ್ಕೆ ತರಲಿ ಎಂದು ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.
Published by:G Hareeshkumar
First published: