ವಿಜಯಪುರ (ಡಿ. 5); ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ವಿಜಯಪುರದಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು. ಬಂದ್ ಕರೆ ವಿರೋಧಿಸುವಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಕರೆ ನೀಡಿದ್ದರು. ವ್ಯಾಪಾರಿಗಳು, ಬೀದಿ ಬದಿ ಮಾರಾಟಗಾರರು ನಿರ್ಭಿತಿಯಿಂದ ಕೆಲಸ ಮಾಡಿ. ಬಲವಂತವಾಗಿ ಬಂದ್ ಮಾಡಿಸಲು ಬಂದರೆ ನಮಗೆ ಕರೆ ಮಾಡಿ. ಅವರನ್ನು ಹಿಡಿದು ಪೊಲೀಸರಿಗೆ ಕೊಡುತ್ತೇವೆ ಎಂದು ಅಭಯ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಜನಜೀವನ ಸಾಮಾನ್ಯವಾಗಿತ್ತು. ನಸುಕಿನ ಜಾವದಿಂದಲೇ ವಿಜಯಪುರ ಎಪಿಎಂಸಿಯಲ್ಲಿ ತರಕಾರಿ ಹರಾಜು, ಮಾರಾಟ ಮತ್ತು ಆವಕ, ಜಾವಕ ಎಂದಿನಂತೆ ಮಾಮೂಲಿಯಾಗಿ ನಡೆಯಿತು.
ಬಸ್ ಸಂಚಾರ ಕೂಡ ಎಂದಿನಂತಿತ್ತು. ಬೆಳಿಗ್ಗೆಯಿಂದಲೇ ವಿಜಯಪುರ ನಗರ, ಗ್ರಾಮೀಣ ಮತ್ತು ಇತರ ಸಾರಿಗೆ ಬಸ್ಸುಗಳ ಓಡಾಟ ಎಂದಿನಂತೆ ನಡೆಯಿತು. ಬೇರೆ ಊರುಗಳಿಂದ ವಿಜಯಪುರಕ್ಕೆ, ವಿಜಯಪುರದಿಂದ ಬೇರೆ ಊರುಗಳಿಗೆ ಪ್ರಯಾಣಿಕರು ಓಡಾಟ ನಡೆಸಿದರು. ರಸ್ತೆ ಬದಿ ಅಂಗಡಿಗಳು, ಟೀ ಸ್ಟಾಲ್ ಗಳು, ಹೋಟೆಲುಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು, ಪೆಟ್ರೋಲ್ ಬಂಕ್ ಗಳು ಎಂದಿನಂತೆ ತೆರೆದಿದ್ದವು. ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ, ಕಿರಾಣಾ ಬಜಾರ, ಸರಾಫ್ ಬಜಾರ್ ಸೇರಿದಂತೆ ಎಲ್ಲ ಪ್ರಮುಖ ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಬಂದ್ ತಕ್ಕ ಮಟ್ಟಿಗಾದರೂ ಯಶಸ್ವಿಗೊಳಿಸಲು ಕರವೇ ಪ್ರಯತ್ನ ಮಾಡಿತಾದರೂ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ಈ ಮಧ್ಯೆ ಬಂದ್ ಗೆ ವಿರೋಧವಾಗಿ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಬಲವಂತದ ಬಂದ್ ತಡೆಯಲು ಈ ಟಾಸ್ಕ್ ಫೋರ್ಸ್ ಸದಸ್ಯರು ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ದಿನವಿಡೀ ಕುಳಿತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವ ಅಣ್ಣಿಗೇರಿ, ಕರ್ನಾಟಕ ಬಂದ್ ವಿಫಲವಾಗಿದೆ. ಇಂದು ವಾಟಾಳ ನಾಗರಾಜ ಅವರ ರಾಜಕೀಯದ ಅಂತ್ಯದ ದಿನ. ವಾಟಾಳ ನಾಗರಾಜ, ಸಾ. ರಾ. ಗೋವಿಂದ, ನಾರಾಯಣಗೌಡ ಕರ್ನಾಟಕದ ಜನರ ಕ್ಷಮೆ ಕೋರಬೇಕು. ಬಂದ್ ವಿಫಲ ಹಿನ್ನೆಲೆ ಕೈಗೆ ಬಳೆ ಹಾಕಿಕೊಳ್ಳಲಿ. ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಜನಜೀವನ ಸಾಮಾನ್ಯವಾಗಿದೆ. ಶಾಸಕ ಯತ್ನಾಳ ಬಂದ್ ವಿಫಲ ಕರೆಗೆ ಜನ ಸ್ಪಂದಿಸಿದ್ದಾರೆ. ಬಂದ್ ಕರೆ ನೀಡಿರುವವರು ಹೇಡಿಗಳು. ಬಲವಂತದ ಬಂದ್ ತಡೆಯಲು ಟಾಸ್ಕ್ ಫೋರ್ಸ್ ರಚಿಸಿಸಿದ್ದೇವೆ. ಪೊಲೀಸರೊಂದಿಗೆ ನಾವಿದ್ದೇವೆ. ಕರವೇಯವರಿಗಿಂತ ಹೆಚ್ಚು ಜನ ಟಾಸ್ಕ್ ಫೋರ್ಸ್ ಸದಸ್ಯರಿದ್ದಾರೆ ಎಂದು ಹೇಳಿದರು.
ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಸ್ತೆಯ ಮೇಲೆ ಕುಳಿತು ಘೋಷಣೆ ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರೂ ಅಂಬೇಡ್ಕರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇದನ್ನು ಓದಿ: Karnataka Bandh LIVE: ಬೆಂಗಳೂರಿನ ಹಲವೆಡೆ ಶುರುವಾದ ಮಳೆ; ಮಳೆಯ ಮಧ್ಯೆಯೂ ಮುಂದುವರೆದ ಪ್ರತಿಭಟನೆ
ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಕೈಯಲ್ಲಿ ಕನ್ನಡ ಧ್ವಜ ಹಿಡಿದಿದ್ದ ಕಾರ್ಯಕರ್ತರು ಸಿಎಂ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿದರು.
ಬಂದ್ ಕರೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಲವಂತವಾಗಿ ಯಾರೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಂತಿಲ್ಲ. ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡುವಂತಿಲ್ಲ. ಬಂದ್ ಗೆ ಅವಕಾಶ ಇಲ್ಲ. ವ್ಯಾಪಾರ ವಹಿವಾಟು, ವಾಹನಗಳ ಸಂಚಾರ ಎಂದಿನಂತಿರಲಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ನಿನ್ನೆಯೇ ಸ್ಪಷ್ಟಪಡಿಸಿದ್ದರು. ವಿಜಯಪುರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 139 ಜನ ಪೊಲೀಸ್ ಅಧಿಕಾರಿಗಳು, 671 ಪೊಲೀಸ್ ಸಿಬ್ಬಂದಿ, 3 ಐಆರ್ಬಿ, 7 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ