ರೈತರಲ್ಲದವರು ಪಡೆಯುತ್ತಿದ್ದಾರೆ ಕಿಸಾನ್ ಸಮ್ಮಾನ್ ಯೋಜನೆಯ ಫಲ; ಹಣ ಹಿಂದಿರುಗಿಸುವಂತೆ ನೊಟೀಸ್ ನೀಡಿದ ಅಧಿಕಾರಿಗಳು

ಪಿಎಂ‌ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದವರಲ್ಲಿ ವ್ಯಾಪಾರಸ್ಥರು, ಸರ್ಕಾರಿ ನೌಕರರೂ ಸಹ ಇರುವುದು ಬೆಳಕಿಗೆ ಬಂದಿದೆ. ಈಗಾಗಲೇ ಮೊದಲ‌ ಹಂತವಾಗಿ ಅಂತಹವರಿಗೆ ನೊಟೀಸ್ ಜಾರಿಗೊಳಿಸಿ, ಹಣ ಕಟ್ಟುವಂತೆ ಸೂಚನೆ ನೀಡಲಾಗುತ್ತಿದ್ದು, ಹಣ ಕಟ್ಟದವರಿಗೆ ಮುಂದಿನ ದಿನಗಳಲ್ಲಿ ಇಲಾಖೆಯ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರವಾರ; ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ. ಕೃಷಿಯನ್ನೇ ಅವಲಂಬಿಸಿರುವ ಬಡ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6 ಸಾವಿರ ಹಣವನ್ನು ನೀಡುವುದು ಯೋಜನೆಯ ಉದ್ದೇಶ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ತೆರಿಗೆ ಪಾವತಿ ಮಾಡುವವರೂ ಸಹ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವಂತಾಗಿದೆ.

ಕಷ್ಟಪಟ್ಟು ಕೃಷಿಕಾರ್ಯ ನಡೆಸುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಗಳು ರೈತಪರ ಯೋಜನೆಗಳ ಮೂಲಕ ಬೆಂಬಲ ಒದಗಿಸುವ ಕೆಲಸ ಮಾಡುತ್ತವೆ. ಅದರಂತೆ ರೈತರ ಖಾತೆಗೆ ಸರ್ಕಾರವೇ ವರ್ಷಕ್ಕೆ 6 ಸಾವಿರದಂತೆ ಹಣ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ಲಾಭವನ್ನು ಬಡ ರೈತರಲ್ಲದಿರುವವರು ಸಹ ಪಡೆದುಕೊಳ್ಳುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

ಪಿಎಂ ಕಿಸಾನ್ ಯೋಜನೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 72 ಸಾವಿರ ಮಂದಿ ರೈತರು ಅರ್ಜಿ‌ ಸಲ್ಲಿಸಿದ್ದರು. ಅವರಲ್ಲಿ 1 ಲಕ್ಷದ 64 ಸಾವಿರ ಮಂದಿ ರೈತರ ಪಟ್ಟಿಯನ್ನು ಕೃಷಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಅದರಲ್ಲಿ ಈವರೆಗೆ ಮೂರು ಕಂತುಗಳಂತೆ 6 ಸಾವಿರ ರೂಪಾಯಿಯ ಐದು ಕಂತುಗಳಲ್ಲಿ ಹಣ ರೈತರ ಖಾತೆಗೆ ಜಮೆಯಾಗಿದೆ. ಆದರೆ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದ ಪಟ್ಟಿಯಲ್ಲಿ ರೈತ ಕುಟುಂಬದ ತೆರಿಗೆ ಪಾವತಿದಾರರು ಸಹ ಇದ್ದು ಸುಮಾರು 3201 ಮಂದಿಯ ಪಟ್ಟಿಯನ್ನು ಕೃಷಿ ಇಲಾಖೆ ಸಿದ್ದಪಡಿಸಿದೆ. ಬಡ ರೈತರಿಗಾಗಿ ರೂಪಿಸಲಾಗಿದ್ದ ಯೋಜನೆಯ ಲಾಭವನ್ನು ತೆರಿಗೆ ಪಾವತಿ ಮಾಡುವವರೂ ಪಡೆದುಕೊಂಡಿದ್ದು, ಅಂತಹವರಿಗೆ ಇದೀಗ ಹಣ ವಾಪಸ್ ಕಟ್ಟುವಂತೆ ಇಲಾಖೆ ನೊಟೀಸ್ ನೀಡಲು ಮುಂದಾಗಿದೆ.

ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಬಿತ್ತನೆ ಬೀಜ, ಕೃಷಿ ಪರಿಕರಗಳ ಖರೀದಿಗೆ ಅನುಕೂಲವಾಗಲೀ ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಆದರೆ ರೈತ ಕುಟುಂಬದಲ್ಲಿನ ತೆರಿಗೆ ಪಾವತಿದಾರರೂ ಸಹ ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇದರಿಂದಾಗಿ ಒಂದೆಡೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದರೆ, ಇನ್ನೊಂದೆಡೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದಂತಾಗಿದೆ. ಹೀಗಾಗಿ ಇಂತಹ ಫಲಾನುಭವಿಗಳನ್ನು ಗುರುತಿಸಿ ಅವರಿಂದ ಹಣ ವಾಪಸ್ ಪಡೆದುಕೊಳ್ಳುವ ಕೆಲಸಕ್ಕೆ ಕೃಷಿ ಇಲಾಖೆ ಮುಂದಾಗಿದೆ. ಇನ್ನು ಸರ್ಕಾರ ಒಳ್ಳೆಯ ಉದ್ದೇಶದೊಂದಿಗೆ ಯೋಜನೆ ರೂಪಿಸಿದ್ದು ತೆರಿಗೆ ಪಾವತಿದಾರರು ಹಣ ಪಡೆದುಕೊಂಡಿದ್ದಲ್ಲಿ ವಾಪಸ್ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಇದನ್ನು ಓದಿ: ರೈತರೊಂದಿಗೊಂದು ದಿನ; ಅನ್ನದಾತರ ಜೊತೆ ಕಳೆಯಲು ಕೃಷಿ ಸಚಿವ ಬಿ.ಸಿ. ಪಾಟೀಲ ವಿನೂತನ ಕಾರ್ಯಕ್ರಮ

ಇನ್ನು ಪಿಎಂ‌ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದವರಲ್ಲಿ ವ್ಯಾಪಾರಸ್ಥರು, ಸರ್ಕಾರಿ ನೌಕರರೂ ಸಹ ಇರುವುದು ಬೆಳಕಿಗೆ ಬಂದಿದೆ. ಈಗಾಗಲೇ ಮೊದಲ‌ ಹಂತವಾಗಿ ಅಂತಹವರಿಗೆ ನೊಟೀಸ್ ಜಾರಿಗೊಳಿಸಿ, ಹಣ ಕಟ್ಟುವಂತೆ ಸೂಚನೆ ನೀಡಲಾಗುತ್ತಿದ್ದು, ಹಣ ಕಟ್ಟದವರಿಗೆ ಮುಂದಿನ ದಿನಗಳಲ್ಲಿ ಇಲಾಖೆಯ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೇ ಸರ್ಕಾರವೇನೋ ಬಡ ರೈತರ ಅನುಕೂಲಕ್ಕೆಂದು ಯೋಜನೆ ರೂಪಿಸಿದೆ. ಆದರೆ ಈ ಯೋಜನೆಯನ್ನು ಉಳ್ಳವರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ.
Published by:HR Ramesh
First published: