ಬಿಜೆಪಿಗನ ಕೊಲೆಗೆ 3 ವರ್ಷ, ಈಗ ಸಿಕ್ಕಿದೆ ಸುಳಿವು, ಕ್ರೈಂ ಥ್ರಿಲ್ಲರ್​ಗೇನು ಕಡಿಮೆಯಿಲ್ಲ ಇದು

ಬಿಜೆಪಿ ಮುಖಂಡ ಕೊಲೆಯಾಗಿ ಮೂರು ವರ್ಷ ಕಳೆದ್ರು ಪತ್ತೆಯಾಗಿಲ್ಲ ಆರೋಪಿಗಳು,ಮೂರು ವರ್ಷದ ಬಳಿಕ ಮತ್ತೆ ಚುರುಕು ಪಡೆದ ಕೊಲೆ ಪ್ರಕರಣದ ತನಿಖೆ, ಮೂರು ದಿನಗಳಿಂದ ಚಿಕ್ಕಮಗಳೂರಿನಲ್ಲೇ ಮೊಕ್ಕಾಂ ಹೂಡಿದ ಸಿಐಡಿ ಅಧಿಕಾರಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು : ಕಾಫಿನಾಡನ್ನ ಬೆಚ್ಚಿಬೀಳಿಸಿದ ಬಿಜೆಪಿ ಮುಖಂಡನ ಕೊಲೆಯಾಗಿ 3 ವರ್ಷ 2 ತಿಂಗಳು ಕಳೆದಿದ್ರು ಪ್ರಕರಣ ಭೇದಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಸದ್ಯ ಬಿಜೆಪಿ ಮುಖಂಡನ ಕುಟುಂಬಸ್ಥರ ತಾಳ್ಮೆ ಕಳೆದುಕೊಂಡು ದಯಾಮರಣಕ್ಕೆ ಅರ್ಜಿ ಸಲ್ಲಿಸೋಕೆ ಸಿದ್ದರಾಗಿದ್ದಾರೆ.ಆದ್ರೆ ಆಗಸ್ಟ್ 15ರಂದು ಜಿಲ್ಲೆಗೆ ಬಂದಿದ್ದ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಕುಟುಂಬಸ್ಥರಿಗೆ ತಾಳ್ಮೆ ಕಳೆದುಕೊಳ್ಳದಂತೆ ಭರವಸೆ ನೀಡಿ ಆರೋಪಿಗಳನ್ನ ಸದ್ಯದಲ್ಲೇ ಬಂಧಿಸೋ ಭರವಸೆ ನೀಡಿದ್ರು. ಈ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಕಾಫಿನಾಡಿಗೆ ಆಗಮಿಸಿದ್ದು ಮತ್ತೆ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. 

ಜೂನ್ 22. 2018 ರಂದು ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಅನ್ವರ್ ಗೌರಿಕಾಲುವೆಯ ಗುಡ್‍ಮಾರ್ನಿಂಗ್ ಶಾಪ್ ಬಳಿ ಕೊಲೆಯಾಗಿದ್ದ. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕೂಡ ಆಗಿದ್ದ ಅನ್ವರ್ನನ್ನ ದುಷ್ಕರ್ಮಿಗಳು ಡ್ರ್ಯಾಗನ್‍ನಿಂದ ದೇಹದ ಆರು ಕಡೆ ಚುಚ್ಚಿ ಕೊಲೆಗೈದಿದ್ರು.ಮರುದಿನ ಚಿಕ್ಕಮಗಳೂರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಎಸ್ಪಿ ಅಣ್ಣಾಮಲೈ ಪರಿಸ್ಥಿತಿ ನಿಯಂತ್ರಿಸುವಲ್ಲಿ ಗೆದ್ರು, ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಸೋತಿದ್ರು. ತನಿಖೆ ನಡೆಯುತ್ತಿದೆ, ಅನುಮಾನ ಬಂದಿದೆ, ಗೊತ್ತಾಗಿದೆ, ಬಂಧಿಸ್ತಿವಿ ಎಂದೇಳ್ತಾನೆ ವರ್ಗಾವಣೆಯಾದ್ರು. ಕೊಲೆಗಾರರನ್ನ ಬಂಧಿಸಲೇ ಇಲ್ಲ. ಆಮೇಲೆ ಎರಡ್ಮೂರು ಎಸ್ಪಿಗಳು ಬಂದ್ರೂ ಆರೋಪಿಗಳು ಮಾತ್ರ ಸಿಕ್ಲೇ ಇಲ್ಲ.

ಆರೋಪಿಗಳನ್ನ ಬಂಧಿಸುವಂತೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಕುಟುಂಬಸ್ಥರು ಉಪವಾಸನೂ ಕೂತಿದಾಯ್ತು. 2019ರಲ್ಲಿ ಪ್ರಕರಣವನ್ನ ಸಿಬಿಐ ಅಥವಾ ಎಸ್ಐಟಿಗೆ ವಹಿಸುವಂತೆ ಪಟ್ಟು ಹಿಡಿದಾಗ ಅನ್ವರ್ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಯ್ತು. ಇಷ್ಟಾದ್ರೂ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ನಡೆಯದಿದ್ದರಿಂದ ಮೊನ್ನೆ ಗೃಹ ಮಂತ್ರಿಗಳು ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ದಯಾಮರಣಕ್ಕೆ ಸಿದ್ದರಿರುವುದಾಗಿ ತಿಳಿಸಿದ್ರು. ಈ ವೇಳೆ ಮೃತ ಅನ್ವರ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಪ್ರಕರಣವನ್ನ ಚುರುಕುಗೊಳಿಸಲು ಸಿಐಡಿಗೆ ಸೂಚಿಸುವುದಾಗಿ ತಿಳಿಸಿದ್ರು. ಈ ಬೆನ್ನಲ್ಲೇ ಜಿಲ್ಲೆಗೆ ಆಗಮಿಸಿರೋ ಸಿಐಡಿ ಅಧಿಕಾರಿಗಳು ಪ್ರಕರಣದಲ್ಲಿ ಅನುಮಾನವಿರುವ ಹಲವು ವ್ಯಕ್ತಿಗಳನ್ನ ಕರೆದು ವಿಚಾರಣೆ ನಡೆಸುತ್ತಿದ್ದಾರೆ.

ಅಂದು ರಾತ್ರಿ 8.30 ಸಮಯದಲ್ಲಿ ಚಿಕ್ಕಮಗಳೂರು ನಗರದಲ್ಲಿ ರಾಜಾರೋಷವಾಗಿ ಕೊಲೆ ಮಾಡಿದ ಆರೇಳು ಮಂದಿಯ ತಂಡ ಎಸ್ಕೇಪ್ ಆಗಿತ್ತು. ಚಿಕ್ಕಮಗಳೂರು ನಗರದಲ್ಲೇ ಕೊಲೆ ಮಾಡಿದ್ರೂ ಆರೋಪಿಗಳನ್ನ ಹುಡುಕಲು ಸಾಧ್ಯವಾಗದ್ದಕ್ಕೆ ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಈ ಮಧ್ಯೆ ಸಿಐಡಿ ತಂಡ ಅನ್ವರ್ ಕೊಲೆ ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದಂತೆ ಕಾಣ್ತಿದೆ. ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ನಗರದಲ್ಲೇ ಮೊಕ್ಕಾಂ ಹೂಡಿರೋ ಸಿಐಡಿ ಅಧಿಕಾರಿಗಳು ಸೂಕ್ತ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರೋ ಮೃತ ಅನ್ವರ್ ಪುತ್ರ, ನನ್ನ ತಂದೆಯ ಕೊಲೆ ಮಾಡಿದ ಆರೋಪಿಗಳನ್ನ ಕೂಡಲೇ ಬಂಧಿಸಿ, ನ್ಯಾಯ ಕೊಡಿಸಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

ಸಿಐಡಿ ತನಿಖೆಯನ್ನ ಚುರುಕುಗೊಳಿಸುವುದಾಗಿ ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ದಯಾಮರಣಕ್ಕೆ ಸಿದ್ದವಾಗಿದ್ದ ಮೃತ ಅನ್ವರ್ ಕುಟುಂಬಸ್ಥರಲ್ಲಿ ಚಿಕ್ಕ ಭರವಸೆಯೊಂದು ಮೂಡಿದ್ದು, ಸದ್ಯದ ಬೆಳವಣಿಗೆಗಳು ಆಶಾದಾಯಕವಾಗಿದ್ದು ದಯಾಮರಣಕ್ಕೆ ನಾವು ಅರ್ಜಿ ಹಾಕಲ್ಲ ಅಂತಾ ಅನ್ವರ್ ಕುಟುಂಬಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ರೂ ಜಿಲ್ಲಾ ಬಿಜೆಪಿಯ ಅಲ್ಪಸಂಖ್ಯಾತ ಮುಖಂಡನ ಕೊಲೆ ಪ್ರಕರಣವನ್ನ ಭೇದಿಸಲು ಸಾಧ್ಯವಾಗದಿದ್ದಕ್ಕೆ ಸರ್ಕಾರ-ಪೊಲೀಸ್ ಇಲಾಖೆ, ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿರೋದಂತೂ ಸತ್ಯ.
Published by:Sharath Sharma Kalagaru
First published: