• Home
  • »
  • News
  • »
  • district
  • »
  • ಕೊಡಗಿನ ಕೋಪಟ್ಟಿ ಗ್ರಾಮಕ್ಕೆ ಈಗಲೂ ಇಲ್ಲದ ಸಂಪರ್ಕ ರಸ್ತೆ; ಹೊಳೆ ದಾಟಿಯೇ ಹೋಗುತ್ತಿರುವ ಜನರು!

ಕೊಡಗಿನ ಕೋಪಟ್ಟಿ ಗ್ರಾಮಕ್ಕೆ ಈಗಲೂ ಇಲ್ಲದ ಸಂಪರ್ಕ ರಸ್ತೆ; ಹೊಳೆ ದಾಟಿಯೇ ಹೋಗುತ್ತಿರುವ ಜನರು!

ಹೊಳೆ ದಾಟಿ ಹೋಗುತ್ತಿರುವ ಜನರು.

ಹೊಳೆ ದಾಟಿ ಹೋಗುತ್ತಿರುವ ಜನರು.

ಮಳೆಗಾಲ ಬಂತೆಂದರೆ ನಾಲ್ಕೈದು ತಿಂಗಳು ಸಂಪರ್ಕ ಕಳೆದುಕೊಂಡು ಪರದಾಡುವ ಗ್ರಾಮಕ್ಕೆ ಇನ್ನಾದರೂ ಸೇತುವೆ ನಿರ್ಮಿಸಿ ಬವಣೆ ನೀಗಿಸಬೇಕು ಎನ್ನೋದು ಜನರ ಆಗ್ರಹ.

  • Share this:

ಕೊಡಗು (ಜೂನ್ 26): ಹೊರ ನೋಟಕ್ಕೆ ಕೊಡಗು ಜಿಲ್ಲೆ ಎಂದರೆ ಭೂ ಲೋಕದ ಸ್ವರ್ಗ, ಸುಖದ ತಾಣ ಎಂದು ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಭಾವಿಸಿರುತ್ತಾರೆ. ಆದರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗಮನಿಸಿದರೆ ಜಿಲ್ಲೆಯ ನೈಜ ಚಿತ್ರಣ ತಿಳಿಯುತ್ತದೆ. ಹೌದು ಜಿಲ್ಲೆಯ ಎಷ್ಟೋ ಗ್ರಾಮೀಣ ಪ್ರದೇಶಗಳಿಗೆ ಇಂದಿಗೂ ಸಂಪರ್ಕ ರಸ್ತೆ ಇಲ್ಲ ಎನ್ನೋದನ್ನೂ ಕೊಡಗು ಜಿಲ್ಲೆ ಎಂದರೆ ಸ್ವರ್ಗ ತಾಣ  ಎಂದುಕೊಂಡಿರುವ ನೀವು ನಂಬಲೇಬೇಕು.


ಹೌದು ಮಡಿಕೇರಿ ತಾಲ್ಲೂಕಿನ ಕೋಪಟ್ಟಿ ಗ್ರಾಮಕ್ಕೆ ಇಂದಿಗೂ ಕಾಲು ಸಂಕ ಅಥವಾ ಸ್ಥಳೀಯ ಭಾಷೆಯಲ್ಲಿ ಹೇಳುವ ಪಾಲೇ ಸಂಪರ್ಕ ಸೇತುವೆ ಆಗಿದೆ. ಕೋಪಟ್ಟಿ ಬೆಟ್ಟದಿಂದ ಹರಿಯುವ ಹೊಳೆ 45 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮವನ್ನು ಸುತ್ತುವರಿದು  ಹರಿಯುತ್ತದೆ. ಗ್ರಾಮದಿಂದ ಮಕ್ಕಳು ಅಂಗನವಾಡಿಗೆ ಹೋಗುವ ಪುಟ್ಟ ಪುಟ್ಟ ಮಕ್ಕಳು,  ಶಾಲೆಗೆ ಹೋಗುವ ವಿದ್ಯಾರ್ಥಿಗಳು ಈ ಹೊಳೆಯಲ್ಲಿ ಹರಿಯುವ ನೀರನ್ನು ದಾಟಿ ಹೋಗಬೇಕು. ಅಷ್ಟೇ ಯಾಕೆ ಗ್ರಾಮದ ಯಾರೇ ಅನಾರೋಗ್ಯದಿಂದ ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದರು ಈ ಹೊಳೆಯನ್ನು ದಾಟಿಯೇ ಹೋಗಬೇಕು.


ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾದಾಗ ತುಂಬಿ ಹರಿಯುವ ಹೊಳೆ ಸೆಪ್ಟೆಂಬರ್ ಕೊನೆಯವರೆಗೂ ಅಂದರೆ ನಾಲ್ಕು ತಿಂಗಳ ಕಾಲ ಇದೇ ರೀತಿ  ತುಂಬಿ ಬೋರ್ಗರೆದು ಹರಿಯುತ್ತದೆ. ಈ ಹೊಳೆಯನ್ನು ದಾಟಿಯೇ ಇಲ್ಲಿನ ಜನ ನಿತ್ಯ ತಮ್ಮ ಕೃಷಿ ಚಟುವಟಿಕೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳಿಗೆ ಹೊರ ಹೋಗಬೇಕು. ಅದರಲ್ಲೂ ಹೆಂಗಸರು, ಮಕ್ಕಳು ಮತ್ತು ವೃದ್ಧರು ಹೊಳೆ ದಾಟಿಿ ಹೋಗುವಾಗ ಜೀವ ಕೈಯಲ್ಲಿ ಹಿಡಿದೇ ಹೋಗಬೇಕು. ಒಂದು ವೇಳೆ ಹೇಗೋ ಹೊಳೆ ದಾಟಿ ಹೊರಗೆ ಹೋಗಿದ್ದಾರೆಂದರೆ ಅವರು ವಾಪಸ್ ಬರುವ ಸಮಯಕ್ಕೂ ಮೊದಲೇ ಮನೆಯ ಗಂಡಸರು ಅಲ್ಲಿಗೆ ಹೋಗಿ ಕಾದು ಕುಳಿತುಕೊಳ್ಳಬೇಕು. ಒಂದು ವೇಳೆ ಹೊರಗೆ ಹೋದವರು ಹೊಳೆ ಬಳಿಗೆ ಬರುವುದು ಹತ್ತು ನಿಮಿಷ ತಡವಾದರೂ ಏನು ಅನಾಹುತವಾಗಿದೆಯೋ ಎನ್ನೋ ಆತಂಕ ಶುರುವಾಗುತ್ತದೆ ಎನ್ನೋದು ಪಂಚಾಯಿತಿ ಸದಸ್ಯರಾದ ದಿನೇಶ್ ಅವರ ಅಳಲು.


ಮಳೆಗಾಲ ಆರಂಭವಾಯಿತು ಅಂದರೆ ಗ್ರಾಮದವರೇ ಪ್ರತೀ ವರ್ಷ ಮರದ ದಿಮ್ಮಿಗಳನ್ನು ಇಟ್ಟು ಪಾಲು ಸಿದ್ಧ ಮಾಡುತ್ತೇವೆ. ಆದರೆ ಹೊಳೆಯಲ್ಲಿ ನೀರಿನ ಪ್ರಮಾಣ ಮಿತಿಮೀರಿದಾಗ ಮರದ ದಿಮ್ಮಿಗಳೇ ಕೊಚ್ಚಿ ಹೋಗುತ್ತವೆ. ತುಂಬಿ ಹರಿಯುವ ಹೊಳೆ ದಾಟಲು ಹೋಗಿ ನಮ್ಮ ಅಣ್ಣನೇ ತೇಲಿ ಹೋಗಿ ಪ್ರಾಣ ಕಳೆದುಕೊಂಡ. ಎರಡು ದಿನಗಳ ಬಳಿಕ ಅವನನ್ನು ಶವವಾಗಿ ನೋಡಬೇಕಾಯಿತು ಎನ್ನೋದು ಅಣ್ಣನನ್ನು ಕಳೆದುಕೊಂಡ ತಮ್ಮ ನೀಲಕಂಠ ಅವರ ನೋವಿನ ನುಡಿ. ಅದಕ್ಕಾಗಿಯೇ ಶಾಶ್ವತವಾದ ಸೇತುವೆ ನಿರ್ಮಿಸುವಂತೆ ನಾಲ್ಕೈದು ದಶಕಗಳಿಂದಲೂ ಮನವಿ ಮಾಡುತ್ತಿದ್ದರೂ ಶಾಸಕರು, ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎನ್ನೋದು ಇಲ್ಲಿನವರ ಆಕ್ರೋಶ.


ಇದನ್ನು ಓದಿ: ಕಾಂಗ್ರೆಸ್ ಬಣ ಜಗಳ; ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸಭೆಯಿಂದ 15 ನಿಮಿಷದಲ್ಲೇ ಎಕ್ಸಿಟ್ ಆಗಿದ್ದು ಏಕೆ?


ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ನಾಲ್ಕೈದು ತಿಂಗಳು ಸಂಪರ್ಕ ಕಳೆದುಕೊಂಡು ಪರದಾಡುವ ಗ್ರಾಮಕ್ಕೆ ಇನ್ನಾದರೂ ಸೇತುವೆ ನಿರ್ಮಿಸಿ ಬವಣೆ ನೀಗಿಸಬೇಕು ಎನ್ನೋದು ಜನರ ಆಗ್ರಹ.


ನ್ಯೂಸ್​​​ 18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: