Koppal: ಕೊಪ್ಪಳದಲ್ಲಿ ಈ ಕುಟುಂಬಗಳಿಗಿಲ್ಲ ಪಡಿತರ ಚೀಟಿ; ಲಾಕ್​ಡೌನ್​ ವೇಳೆ ಆಹಾರ ಧಾನ್ಯಕ್ಕಾಗಿ ಪರದಾಟ

ನಮ್ಮ ಕುಟುಂಬಕ್ಕೆ ಪಡಿತರ ಚೀಟಿ ಇಲ್ಲ. ನಮಗೆ ಓದು ಬರಹ ಬರಲ್ಲ. ಎಲ್ಲಿ ಹೋಗಿ ತಗೋಬೇಕು ಗೊತ್ತಾಗುತ್ತಿಲ್ಲ. ಈಗ ಲಾಕ್‌ಡೌನ್ ಆಗಿದ್ದರಿಂದ ದುಡಿಮೆಯೂ ಇಲ್ಲ. ಪಡಿತರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಪಡಿತರ ಚೀಟಿ ಇಲ್ಲದ   ಗಂಗವ್ವ ಸೀರಾಳಕೊಪ್ಪ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಕುಂಚಿಕೊರ್ ಕುಟುಂಬಗಳು

ಕುಂಚಿಕೊರ್ ಕುಟುಂಬಗಳು

  • Share this:
ಕೊಪ್ಪಳ(ಮೇ 23): ಒಂದು ಕಡೆ ದುಡಿಮೆ ಇಲ್ಲ, ದುಡಿಮೆಗಾಗಿ ಮನೆಯಿಂದ ಹೊರಗೆ ಹೋಗುವಂತಿಲ್ಲ, ಮನೆಯಲ್ಲಿಯೇ ಇದ್ದರೆ ಉಪವಾಸವಿರಬೇಕು. ಸರಕಾರ ಪಡಿತರ ಹೆಚ್ಚಿಸಿ ಬಡವರಿಗೆ ಪಡಿತರ ನೀಡುವುದಾಗಿ ಹೇಳಿದೆ. ಆದರೆ ಇವರಿಗೆ ಮಾತ್ರ ಪಡಿತರ ಚೀಟಿ ಇಲ್ಲ. ’ನಾವು ನಿತ್ಯವೂ ದುಡಿದರೆ ಮಾತ್ರ ಹೊಟ್ಟೆ ತುಂಬಬೇಕು. ಇಲ್ಲದಿದ್ದರೆ ನಮ್ಮ ಹೊಟ್ಟೆಗೆ  ತಣ್ಣೀರು  ಬಟ್ಟೆಯೇ  ಗತಿ. ಲಾಕ್‌ಡೌನ್ ಆಗಿದ್ದರಿಂದ ದುಡಿಮೆಯೂ ಇಲ್ಲದಂತೆ ಆಗಿದೆ. ನಮಗೆ  ಪಡಿತರ ಚೀಟಿಯೂ ಇಲ್ಲ. ಹೀಗಾಗಿ, ಸರ್ಕಾರ ಕೊಡುವ ಪಡಿತರವೂ ಸಿಗುತ್ತಿಲ್ಲ. ಆದ್ದರಿಂದ ನಮಗೆ ಪಡಿತರ ಚೀಟಿಯನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ.  ಪಡಿತರವನ್ನಾದರೂ ತಂದು  ಹೊಟ್ಟೆ ತುಂಬಿಸಿಕೊಳ್ಳುತ್ತೇವೆ’ ಎಂದು ಜಿಲ್ಲಾಕೇಂದ್ರ ಕೊಪ್ಪಳ ನಗರದಲ್ಲಿಯೇ ಇರುವ ಗಾಂಧಿನಗರದ 26 ಕುಂಚಿಕೊರ್ ಕುಟುಂಬಗಳು ಅಳಲು ತೋಡಿಕೊಂಡಿವೆ.

ಇವರ ಪಾಡು ಈ ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ. ಸರ್ಕಾರವೇನು ಪಡಿತರ ಚೀಟಿ ಇಲ್ಲದಿದ್ದರೂ ಪಡಿತರಕ್ಕೆ  ಅರ್ಜಿ ಕೊಟ್ಟಿದ್ದರೂ ಪಡಿತರ ನೀಡುವಂತೆ ಆದೇಶ ಮಾಡಿದೆ. ಆದರೆ,  ಇವರು ಪಡಿತರ  ಚೀಟಿಗಾಗಿ  ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ಆಗಿಲ್ಲ. ಓದು ಬರಹ ಇಲ್ಲದ ಈ ಕುಟುಂಬಗಳು,  ನಿತ್ಯವೂ ನಾನಾ ರೀತಿಯಲ್ಲಿ ದುಡಿಮೆ ಮಾಡಿಕೊಂಡೇ ಜೀವನ ನಡೆಸುತ್ತಿದ್ದರು. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ, ಪಡಿತರ ಚೀಟಿ ಪಡೆಯುವುದಕ್ಕೂ  ಆಗದಿರುವುದರಿಂದ ಇದುವರೆಗೂ  ಇವರಿಗೆ ಪಡಿತರ ಬರುತ್ತಿರಲಿಲ್ಲ.

ಇಷ್ಟು ದಿನಗಳ ಕಾಲ ಸಮಸ್ಯೆ ಇರಲಿಲ್ಲ. ದುಡಿದು ಹೇಗೋ ನಾವು ಜೀವನ ನಡೆಸುತ್ತಿದ್ದವು. ಆದರೆ, ಈಗ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಪಡಿತರ ಚೀಟಿ ಇದ್ದಿದ್ದರೆ  ಪಡಿತರವನ್ನಾದರೂ ತಂದು ತಿನ್ನುತ್ತಿದ್ದೆವು.  ನಮಗೆ ಅದೂ ಇಲ್ಲ ಎಂದು ಹೇಳುವ ಇವರ ಮಾತುಗಳನ್ನು ಕೇಳಿದರೆ ಎಂಥವರ ಕರುಳು ಚುರ್ ಎನ್ನುತ್ತದೆ.

ಇದನ್ನೂಓದಿ:Hubli: 200ಕ್ಕೂ ಹೆಚ್ಚು ಮೃತ ಸೋಂಕಿತರ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ವ್ಯಕ್ತಿ ಬಷೀರ್

ಈಗ ಕಚೇರಿ ಸುತ್ತಾಡುವುದಕ್ಕೂ ಯಾರು ಬಿಡುವುದಿಲ್ಲ.   ಈಗ ಅರ್ಜಿ ಸಲ್ಲಿಸಿದರೆ ಅಷ್ಟು ಸುಲಭವಾಗಿ  ಪಡಿತರ  ಚೀಟಿಯೂ ಬರುವುದಿಲ್ಲ. ಆದ್ದರಿಂದ  ಜಿಲ್ಲಾಡಳಿತವೇ ನಮ್ಮ ಸಹಾಯಕ್ಕೆ ಬರಬೇಕು. ನಾವು  ಉಪವಾಸ ಇರುವುದರಿಂದ ಕಾಪಾಡಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ತೆರವಾಗುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಹೀಗಾಗಿ, ಏನು ಮಾಡುವುದು ಎಂದು ತಿಳಿಯುತ್ತಿಲ್ಲ.  ತುತ್ತಿನ ಚೀಲ ತುಂಬಿಸಿಕೊಳ್ಳುವುದೇ  ಹರಸಾಹಸರವಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಗಾಂಧಿ ನಗರದಲ್ಲಿರುವ ಸುಮಾರು 26 ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಹೀಗಾಗಿ, ಈಗ ಲಾಕ್‌ಡೌನ್ ವೇಳೆಯಲ್ಲಿ ಅವರು ಜೀವನ ನಿರ್ವಹಣೆ ಕಷ್ಟವಾಗಿದೆ.  ಆದ್ದರಿಂದ ವಿಶೇಷ  ಪ್ರಕರಣದಡಿ ಇವರಿಗೆ ತುರ್ತಾಗಿ ಪಡಿತರ ವಿತರಣೆ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಬಡಾವಣೆಯ ಮುಖಂಡ ಗಾಳೆಪ್ಪ ಮುಂಗೋಲಿ.

ನಮ್ಮ ಕುಟುಂಬಕ್ಕೆ ಪಡಿತರ ಚೀಟಿ ಇಲ್ಲ. ನಮಗೆ ಓದು ಬರಹ ಬರಲ್ಲ. ಎಲ್ಲಿ ಹೋಗಿ ತಗೋಬೇಕು ಗೊತ್ತಾಗುತ್ತಿಲ್ಲ. ಈಗ ಲಾಕ್‌ಡೌನ್ ಆಗಿದ್ದರಿಂದ ದುಡಿಮೆಯೂ ಇಲ್ಲ. ಪಡಿತರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಪಡಿತರ ಚೀಟಿ ಇಲ್ಲದ   ಗಂಗವ್ವ ಸೀರಾಳಕೊಪ್ಪ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಈ ಬಗ್ಗೆ ಕೊಪ್ಪಳ‌ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ, ಪಡಿತರ ಚೀಟಿ ಇಲ್ಲದವರು ತಹಸೀಲ್ದಾರರಿಗೆ ಮಾಹಿತಿ ನೀಡಿದರೆ ಅವರಿಗೆ ಪಡಿತರ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
Published by:Latha CG
First published: