• Home
  • »
  • News
  • »
  • district
  • »
  • ಶ್ರೀನಿವಾಸಪುರದ ಪ್ರಖ್ಯಾತ ಮಾವು ಮಾರುಕಟ್ಟೆಯಲ್ಲಿ ಜನರಿಗೆ ಕೊರೋನಾ ಭಯ ಇಲ್ಲ; ಹೇಳೋರು ಕೇಳೋರೂ ಇಲ್ಲ

ಶ್ರೀನಿವಾಸಪುರದ ಪ್ರಖ್ಯಾತ ಮಾವು ಮಾರುಕಟ್ಟೆಯಲ್ಲಿ ಜನರಿಗೆ ಕೊರೋನಾ ಭಯ ಇಲ್ಲ; ಹೇಳೋರು ಕೇಳೋರೂ ಇಲ್ಲ

ಶ್ರೀನಿವಾಸಪುರದ ಮಾವು ಮಾರುಕಟ್ಟೆ

ಶ್ರೀನಿವಾಸಪುರದ ಮಾವು ಮಾರುಕಟ್ಟೆ

ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಬಳಸಲೇಬೇಕು. ಇಲ್ಲವಾದಲ್ಲಿ ದಂಡ ವಿಧಿಸುವುದಾಗಿ ಶ್ರೀನಿವಾಸಪುರದ ಎಪಿಎಂಸಿ ಸೂಚನಾ ಫಲಕ ಹಾಕಿದ್ದರೂ ಲೆಕ್ಕಕ್ಕೆ ಇಲ್ಲದಂತಾಗಿದೆ.

  • Share this:

ಕೋಲಾರ(ಜೂನ್ 14): ಮಾವಿನ ಹಣ್ಣಿನ ನಗರ ಎಂದೇ ಖ್ಯಾತವಾಗಿರುವ ಕೋಲಾರದ ಶ್ರೀನಿವಾಸಪುರ ತಾಲೂಕಿನ ಮಾವು ಮಾರುಕಟ್ಟೆ ಏಷ್ಯಾದಲ್ಲೇ ಅತಿಹೆಚ್ಚು ಮಾವು ಮಾರಾಟವಾಗುವ ಕೇಂದ್ರವಾಗಿದೆ. ಮಹಾಮಾರಿ ಕೊರೊನಾ ಆತಂಕದ ನಡುವೆಯೂ ಪ್ರತಿವರ್ಷದಂತೆ ಈ ವರ್ಷವೂ ಇಲ್ಲಿ ಮಾವು ಮಾರುಕಟ್ಟೆಯನ್ನ ಆರಂಭಿಸಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತ ಹೇಳಿದಂತೆ ಯಾವೊಂದು ಕೊರೊನಾ ನಿಯಮಗಳನ್ನು ಪಾಲಿಸಲು ಇಲ್ಲಿವರೆಗೆ ಸಾಧ್ಯವಾಗಿಲ್ಲ. ಅರ್ಥಾತ್ ಜಿಲ್ಲಾಡಳಿತ ಕೊರೊನಾ ನಿಯಮಗಳನ್ನ ಕಟ್ಟು ನಿಟ್ಟಾಗಿ ಜಾರಿ ಮಾಡುವಲ್ಲಿ ವಿಫಲವಾಗಿದೆ ಎಂದು ಮಾರುಕಟ್ಟೆ ಸದಸ್ಯರೇ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗು ರೈತರು ವಿವಿಧ ವಾಹನಗಳಲ್ಲಿ ಮಾವು ತಂದು ಮಂಡಿಗಳಿಗೆ ಹಾಕಿದರೆ, ರಾತ್ರಿ 7 ರಿಂದ 11 ಗಂಟೆವರೆಗೆ ಹೊರರಾಜ್ಯದ ಲಾರಿಗಳಿಗೆ ನೂರಾರು ಕಾರ್ಮಿಕರಿಂದ ಮಾವನ್ನ ತುಂಬಲಾಗುತ್ತದೆ. ಇದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡದೆ ಮಾಸ್ಕ್ ಧರಿಸದೇ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ಎಪಿಎಂಸಿ ಸದಸ್ಯ ರಾಜೇಂದ್ರ ಪ್ರಸಾದ್ ಹಾಗೂ ಮಾವು ಬೆಳೆಗಾರರ ಸಂಘದ ಅಧ್ಯಕ್ಷ್ಯ ಚಿನ್ನಪ್ಪರೆಡ್ಡಿ ಆರೋಪಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ಕೋಲಾರ ಜಿಲ್ಲಾಡಳಿತ ಹಲವು ಸಭೆಗಳನ್ನ ನಡೆಸಿಯೇ ಮಾವು ಮಾರುಕಟ್ಟೆ ಆರಂಭಿಸಿದ್ದು. ಇಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಪ್ರತಿಯೊಬ್ಬರೂ ಮಾಸ್ಕ್ ಬಳಸಲೇಬೇಕು. ಇಲ್ಲವಾದಲ್ಲಿ ದಂಡ ವಿಧಿಸುವುದಾಗಿ ಎಪಿಎಂಸಿ ಸೂಚನಾ ಫಲಕ ಹಾಕಿದ್ದರೂ ಲೆಕ್ಕಕ್ಕೆ ಇಲ್ಲದಂತಾಗಿದೆ. ಆದರೆ ಮಾರುಕಟ್ಟೆ ಪ್ರಾಂಗಣದ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.

ಇದನ್ನೂ ಓದಿ: ಪೊಲೀಸರನ್ನೂ ಬಿಡದ ಕೊರೋನಾ ವೈರಸ್​​ - ಕೆಲಸ ಮಾಡಲು ಹಿಂದೇಟು ಹಾಕುತ್ತಿರೋ ಖಾಕಿಗಳು

ರಾತ್ರಿ ವೇಳೆ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್:

ನಿಜವಾಗಿಯು ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಕೊರೊನಾ ನಿಯಮಗಳನ್ನ ಪಾಲನೆ ಮಾಡಲಾಗುತ್ತಿದೆಯಾ? ಅಥವಾ ಅಧಿಕಾರಿಗಳು ಮತ್ತದೇ ತೇಪೆ ಹಚ್ಚುವ ಹೇಳಿಕೆಗಳನ್ನ ನೀಡ್ತಿದ್ದಾರಾ? ಎಂದು ಮಾಹಿತಿ ಪಡೆಯಲು ನ್ಯೂಸ್18 ಕನ್ನಡ ರಾತ್ರಿ 9 ಗಂಟೆಯಲ್ಲಿ ಮಾವು ಮಾರುಕಟ್ಟೆಗೆ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ, ಕೋಲಾರ ಜಿಲ್ಲಾಡಳಿತ ಹಾಗು ಎಪಿಎಂಸಿಯ ದಿವ್ಯನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಮುಖ್ಯ ದ್ವಾರದಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡುವವರನ್ನ ನಿಮ್ಮದು ಯಾವ ಊರಪ್ಪ ಎಂದು ವಿಚಾರಿಸೋಕೂ ಒಬ್ಬರೂ ಇರೊಲ್ಲ. ರಾತ್ರಿಹೊತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ತೆಯೂ ಇರಲ್ಲ. ಮಂಡಿಗಳಲ್ಲಿ ಸಾಮಾಜಿಕ ಅಂತರದ ಪಾಲನೆಯೂ ಇಲ್ಲ, ಕಡ್ಡಾಯ ಮಾಸ್ಕ್ ಬಳಕೆಯೂ ವಿರಳವಾಗಿದೆ. ಮಾವನ್ನು ಲಾರಿಗಳಿಗೆ ಸಾಗಿಸುವ ಕಾರ್ಮಿಕರು ಮಾಸ್ಕ್ ಧರಿಸದೆ ಇದುದ್ದು ಮತ್ತು ಮಂಡಿಗಳಲ್ಲಿ ಜನರು ಗುಂಪು ಗುಂಪಾಗಿ ಇದ್ದದ್ದು ನಮಗೆ ಕಂಡುಬಂತು. ಹೀಗೆ 120 ಕ್ಕೂ ಹೆಚ್ಚು ಮಂಡಿಗಳಿರುವ ಮಾವು ಮಾರುಕಟ್ಟೆಯಲ್ಲಿ ಹಿಂದೆಲ್ಲಾ ವಿಪರೀತ ಜನಸಂದಣಿ ಇರುತ್ತಿತ್ತು. ಆದರೆ, ಲಾಕ್​ಡೌನ್, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚು ಜನರು ಬರುತ್ತಿಲ್ಲ. ಇಲ್ಲವಾದಲ್ಲಿ ಇಲ್ಲಿ ಜನರೇ ತುಂಬಿಹೋಗುತ್ತಿದ್ದರು. ಅಂಥ ಸಂದರ್ಭದಲ್ಲಿ ಸಾಮಾಜಿಕ ಅಂತರ ಇತ್ಯಾದಿಯನ್ನು ಪಾಲನೆ ಮಾಡದೇ ಹೋಗಿದ್ದರೆ ಬಹಳ ಅಪಾಯ ಎದುರಾಗುತ್ತಿತ್ತು.ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯ ಮಾಸ್ಕ್ ಬಳಸುವುದು, ಬೇರೆ ರಾಜ್ಯದ ಕಾರ್ಮಿಕರನ್ನ ಬಳಕೆ ಮಾಡದಿರುವುದು ಇತ್ಯಾದಿ ನಿಯಮಗಳನ್ನ ಸೂಚಿಸಿ ಮಂಡಿ ಮಾಲೀಕರಿಗೆ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಆದರೆ ಇದ್ಯಾವುದೂ ಮಂಡಿಗಳಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇನ್ನಾದರೂ ರಾತ್ರಿ ಹೊತ್ತು ಮಾವು ಮಾರುಕಟ್ಟೆಯಲ್ಲಿ ನಿಗಾ ವಹಿಸಲು ವಿಶೇಷ ತಂಡದ ಅವಶ್ಯಕತೆಯಿದೆ. ಹೀಗೆ ನಿರ್ಲಕ್ಷ್ಯ ಮುಂದುವರೆದಲ್ಲಿ ಈ ಮಾರುಕಟ್ಟೆಯೇ ಕೊರೋನಾ ಹಾಟ್​ಸ್ಪಾಟ್ ಆಗಿಬಿಡಬಹುದು ಎಂದು ಶ್ರೀನಿವಾಸಪುರದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

First published: