ಡಿಕೆ ಶಿವಕುಮಾರ್ ವಿರುದ್ಧ ಕೇಸ್ ಹಾಕಿ ಬಿಜೆಪಿ ಚುನಾವಣೆ ಗೆಲ್ಲಬೇಕಿಲ್ಲ: ಜಗದೀಶ್ ಶೆಟ್ಟರ್

ಡಿಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದು ಸರಿಯಲ್ಲ. ಅವರ ಮೇಲೆ ಕೇಸ್ ಹಾಕಿ ಚುನಾವಣೆ ಗೆಲ್ಲಬೇಕಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಜಗದೀಶ್ ಶೆಟ್ಟರ್

ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಜಗದೀಶ್ ಶೆಟ್ಟರ್

  • Share this:
ಹುಬ್ಬಳ್ಳಿ: ಡಿ.ಕೆ. ಶಿವಕುಮಾರ್ ವಿರುದ್ಧ ಕೇಸ್ ಹಾಕಿ ಬಿಜೆಪಿ ಚುನಾವಣೆ ಗೆಲ್ಲಬೇಕಿಲ್ಲ‌. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಃ ಸಿದ್ಧ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಸಿಬಿಐ ಕಾನೂನಿನ ಅಡಿಯಲ್ಲಿ ಕೆಲಸ ಮಾಡಿದೆ. ಇದು ರಾಜಕೀಯ ಪ್ರೇರಿತ ದಾಳಿ ಅಲ್ಲ. ಕಾಂಗ್ರೆಸ್‌ನವರು ರಾಜಕೀಯ ಪ್ರೇರಿತ ದಾಳಿ ಅಂತಾ ಆರೋಪಿಸುವುದು ಸರಿಯಲ್ಲ. 15 ಕ್ಷೇತ್ರಗಳ ಉಪ ಚುನಾವಣೆ ವೇಳೆ ಯಾರ ಮೇಲೂ ದಾಳಿ ಮಾಡಿಸಿರಲಿಲ್ಲ. ಬಿಜೆಪಿ ಜನಾಶಿರ್ವಾದದಿಂದ ಗೆದ್ದಿದೆ. ಡಿಕೆ ಶಿವಕುಮಾರ್ ಅಕ್ರಮ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ, ಅದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಉತ್ತರ ಪ್ರದೇಶದ ಸಿಎಮ್ ಯೋಗಿ ಆದಿತ್ಯಾನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಳಹಂತದ ಭಾಷೆಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಕೆಳಮಟ್ಟದ ಮಾತನಾಡೋದು ಸಿದ್ದರಾಮಯ್ಯ ಸಂಸ್ಕೃತಿ. ಆ ರೀತಿ ಮಾತಾಡೋಕೆ ನಮಗೂ ಬರುತ್ತೆ‌.‌ ಆದರೆ ಕೀಳು ಮಟ್ಟಕ್ಕೆ ಇಳಿಯೋದು ನಮ್ಮ ಸಂಸ್ಕೃತಿ ಅಲ್ಲ ಎಂದವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಸಿಬಿಐ ದಾಳಿಗೆ ಹೆದರೋ ಮಗ ನಾನಲ್ಲ, ಉಪ ಚುನಾವಣೆಯಲ್ಲಿ ಉತ್ತರಿಸಿ – ಡಿಕೆ ಶಿವಕುಮಾರ್

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಬಿಐ ದಾಳಿ ನಡೆದಿದ್ದವು. ಆಗ ಕಾಂಗ್ರೆಸ್‌ನವರು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡಿದ್ರಾ?  ಸಿಬಿಐ ದುರ್ಬಳಕೆ ಮಾಡಿ ಜಗನ್‌ಮೋಹನ್ ರೆಡ್ಡಿ ಅವರನ್ನು ಎರಡು ವರ್ಷ ಜೈಲಿನಲ್ಲಿ ಇರಿಸಿದ್ರಾ? ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ‌.

ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್; ಭಕ್ತರಲ್ಲಿ ಸಂಭ್ರಮ

ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯದಿಂದ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ನೀಡಿರುವುದು ಭಕ್ತರಿಗೆ ಸಂತಸ ತಂದಿದೆ ಎಂದು ಸಚಿವ ಜಗದೀಶ್ ಶೆಟ್ಟರ್‌ ಹೇಳಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಸ್ವಾಮೀಜಿಗಳಿಗೆ ಅಭಿನಂಧನೆ ಸಲ್ಲಿಸಿ ಮಾತನಾಡುತ್ತಿದ್ದ ಅವರು, ಸ್ವಾಮೀಜಿಗಳ ಸಾಮಾಜಿಕ ಕಾರ್ಯಗಳಿಗೆ ಗೌರವ ಡಾಕ್ಟರೇಟ್ ಸಂದಿದೆ. ಇದರಿಂದ ಇನ್ನೂ ಹೆಚ್ಚಿನ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಲು ಪ್ರೇರಣೆಯಾಗಿದೆ. ಸ್ವಾಮೀಜಿಗಳಿಗೆ ದೇವರು ಆರೋಗ್ಯ ಆಯುಷ್ಯ ನೀಡಲಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್‌, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನ ಸಿದ್ದರಾಮಯ್ಯ ಬಿಡಲಿ: ಹೆಚ್.ಕೆ.ಕುಮಾರಸ್ವಾಮಿ

ಹುಬ್ಬಳ್ಳಿಯಲ್ಲಿ ಮಳೆಯ ಅವಾಂತರ:
ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗಬ್ಬೂರು ಬೈಪಾಸ್ ಬಳಿ ಹೆದ್ದಾರಿಗೆ ಚರಂಡಿ ನೀರು ನುಗ್ಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಿಬಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬೆಳೆ ಹಾನಿಯ ಆತಂಕ ಎದುರಾಗಿದ್ದು ರೈತರು ಕಂಗೆಡಿಸಿದೆ. ಕಟಾವಿಗೆ ಬಂದಿರುವ ಗೋವಿನಜೋಳ, ಸೋಯಾಬಿನ್, ಭತ್ತ ಮಳೆಯ ಹೊಡೆತಕ್ಕೆ ನಷ್ಟವಾಗುವ ಸಂಕಷ್ಟ ಎದುರಾಗಿದೆ.

ವರದಿ: ಪರಶುರಾಮ ತಹಶೀಲ್ದಾರ
Published by:Vijayasarthy SN
First published: