ಕುಮಾರಸ್ವಾಮಿ ವಿರುದ್ಧ ಮಾತನಾಡುವ ಅವಶ್ಯಕತೆ ಇಲ್ಲ, ಕಾಂಗ್ರೆಸ್ ಕಟ್ಟುತ್ತೇವೆ ಅಷ್ಟೇ: ಡಿ.ಕೆ. ಸುರೇಶ್

ಕೆಲವರು ತನಗೆ ಸ್ಲೋ ಪಾಯ್ಸನ್ ಆಗಿದ್ದಾರೆಂದು ಡಿಕೆ ಬ್ರದರ್ಸ್ ಹೆಸರು ಹೇಳದೇ ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ತನಗೆ ಕುಮಾರಸ್ವಾಮಿಯನ್ನು ಟೀಕಿಸುವ ಅವಶ್ಯಕತೆ ಇಲ್ಲ. ತಮ್ಮದೇನಿದ್ದರೂ ಪಕ್ಷ ಕಟ್ಟುವ ಕೆಲಸ ಎಂದಿದ್ದಾರೆ.

ಡಿಕೆ ಸುರೇಶ್ ಪತ್ರಿಕಾಗೋಷ್ಠಿ

ಡಿಕೆ ಸುರೇಶ್ ಪತ್ರಿಕಾಗೋಷ್ಠಿ

  • Share this:
ರಾಮನಗರ: ಪ್ರಧಾನಿ ಮೋದಿ ವಿರುದ್ಧ ಸಂಸದ ಡಿ.ಕೆ. ಸುರೇಶ್ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಸುರೇಶ್, ಜಿಲ್ಲೆಯ ಶಿಕ್ಷಕರು ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿಗಳು ಕಳೆದ ಆರುವರೆ ವರ್ಷದಿಂದ ನಾವು ಎಲ್ಲದರಲ್ಲೂ ಮುಂದು ಅಂತಾರೆ. ಆದರೆ ನಾವು ಎಲ್ಲಾ ಸೂಚ್ಯಾಂಕಗಳಲ್ಲಿಯೂ ಹಿಂದೆ ಇದ್ದೇವೆ. ಭಾರತ ಅತ್ಯಂತ ಕಳಪೆ ಪ್ರದರ್ಶನ ಕಂಡಿದೆ ಎಂದು ಕಿಡಿಕಾರಿದರು. ಬಡತನ, ಅಪೌಷ್ಟಿಕತೆ, ನಿರುದ್ಯೋಗ, ಆರ್ಥಿಕ ಕುಸಿತ ಸಮಸ್ಯೆ ಇದೆ. ಆದರೆ ಭಾವನಾತ್ಮಕ ವಿಚಾರಗಳಿಂದ ಜನರನ್ನ ಕೆರಳಿಸುತ್ತಿದ್ದಾರೆ. ಮುಂದೆ ಜನರು ಕೂಡ ಎಚ್ಚರಿಕೆಯಿಂದ ಇರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಕೆಲವರು ನನಗೆ ರಾಜಕೀಯವಾಗಿ ಸ್ಲೋ ಪಾಯ್ಸನ್ ಆಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಡಿ.ಕೆ. ಬ್ರದರ್ಸ್ ಹೆಸರೇಳದೆ ಟೀಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಸುರೇಶ್, ಯಾರು ಏನು ಬೇಕಾದರೂ ಮಾತನಾಡಬಹುದು. ಅವರ ಪಕ್ಷ ಕಟ್ಟೋಕೆ ಅವರ ವೇದಿಕೆಯಲ್ಲಿ ಮಾತನಾಡಬಹುದು. ನಮ್ಮದೇನು ತಕರಾರಿಲ್ಲ. ನಾವು ನಮ್ಮ ಪಕ್ಷ, ಕಾರ್ಯಕರ್ತರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತೇವೆ. ಅವರ ವಿರುದ್ಧ ನಾವು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಹಬ್ಬಗಳ ವೇಳೆ ನಿರ್ಲಕ್ಷ್ಯ ತೋರಿದರೆ ಒಂದೇ ತಿಂಗಳಲ್ಲಿ 26 ಲಕ್ಷ ಪ್ರಕರಣ: ತಜ್ಞರ ಸಮಿತಿ ಎಚ್ಚರಿಕೆ

ಈಗ ಕೊರೋನಾ ಇದೆ. ಹಾಗಾಗಿ ಜನರ ಜೊತೆ ಇದ್ದು ಕೆಲಸ ಮಾಡ್ತೇವೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಕಟ್ಟಬೇಕು. ಕುಮಾರಸ್ವಾಮಿ ಅವರು ಅವರ ಪಕ್ಷ ಕಟ್ಟಬೇಕು. ಈಗ ಯಾವ ಚುನಾವಣೆಯೂ ಇಲ್ಲ, ಚುನಾವಣೆ ಬಂದಾಗ ಮಾತನಾಡುತ್ತೇವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರೂ ಆದ ಅವರು ಹೇಳಿದರು.

ಡಿಕೆ ಬ್ರದರ್ಸ್ ಮತ್ತು ಕುಮಾರಸ್ವಾಮಿ ನಡುವಿನ ಈ ರಾಜಕೀಯ ಗುದ್ದಾಟಕ್ಕೆ ರಾಮನಗರ ಜಿಲ್ಲೆ ಈಗ ಕಾರಣವಾಗಿದೆ. ಇಷ್ಟು ವರ್ಷಗಳ ಕಾಲ ರಾಮನಗರ ಜಿಲ್ಲೆ ಜೆಡಿಎಸ್ ವಶದಲ್ಲಿತ್ತು. ಆದರೆ ಈಗ ಡಿಕೆ ಬ್ರದರ್ಸ್ ಕಾರ್ಯವೈಖರಿಗೆ ಮೆಚ್ಚಿ ಕೆಲ ಜೆಡಿಎಸ್​ನ ಪ್ರಮುಖ ಕಾರ್ಯಕರ್ತರು, ಮುಖಂಡರೇ ಕಾಂಗ್ರೆಸ್​ಗೆ ಬರುತ್ತಿದ್ದಾರೆ. ಇದರಿಂದ ಕಂಗೆಟ್ಟಿರುವ ಹೆಚ್ ಡಿ ಕುಮಾರಸ್ವಾಮಿ ಡಿಕೆ ಸಹೋದರರ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ ಡಿಕೆ ಬ್ರದರ್ಸ್ ಮಾತ್ರ ಹೆಚ್​ಡಿಕೆ ವಿರುದ್ಧ ಖಾರವಾಗಿ ಮಾತನಾಡದೇ ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಡಿಕೆ ಸುರೇಶ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ನ ಇತರ ಮುಖಂಡರಾದ ಸಿ.ಎಂ. ಲಿಂಗಪ್ಪ, ಮಾಗಡಿ ಬಾಲಕೃಷ್ಣ ಹಾಗೂ ಇತರರು ಇದ್ದರು.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: