ದಸರಾ ಗೊಂಬೆಗಳ ಪೂಜೆಗೂ ಕೊರೋನಾ ಕರಿನೆರಳು: ವಿಶೇಷ ಪೂಜೆಗೆ ನೆರೆ ಹೊರೆಯವರಿಗಿಲ್ಲ ಆಹ್ವಾನ 

ಪ್ರತೀ ವರ್ಷದಂತೆ ಈ ಬಾರಿಯೂ ಗೊಂಬೆಗಳ ನ್ನು ಕೂರಿಸಿ ಪೂಜಿಸುತ್ತಿದ್ದರು, ನೆಂಟರಿಷ್ಟರು ಅಥವಾ ನೆರೆಹೊರೆಯವರಿಗೂ ಆಹ್ವಾನವಿಲ್ಲ

ದಸರಾ ಗೊಂಬೆಗಳು

ದಸರಾ ಗೊಂಬೆಗಳು

  • Share this:
ಕೊಡಗು(ಅಕ್ಟೋಬರ್​. 26 ): ದಸರಾ ಹಬ್ಬವೆಂದರೆ ಅದು ಗೊಂಬೆಗಳ ಹಬ್ಬ. ದಸರಾಕ್ಕೂ ಗೊಂಬೆಗಳ ಪೂಜೆಗೂ ಅವಿನಾಭಾವ ಸಂಬಂಧವಿದೆ. ನವರಾತ್ರಿ ಪ್ರಮುಖ ಆಕರ್ಷಣೆಯೇ ದಸರಾ ಬೊಂಬೆಗಳನ್ನು ಇಟ್ಟು ಪೂಜಿಸುವುದು. ಇದು ಕರ್ನಾಟಕದ ಪ್ರತಿಯೊಬ್ಬರ ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಆಚರಣೆ. ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಆರಂಭವಾಯಿತು. ಅದು ಇಂದಿಗೂ ಚಾಚು ತಪ್ಪದೆ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ವಿಶ್ವಕ್ಕೆ ಒಕ್ಕರಿಸಿದ ಕೋವಿಡ್ ವೈರಸ್ ನಿಂದಾಗಿ ಗೊಂಬೆಗಳ ಇಟ್ಟು ಪೂಜಿಸುವ ಆಚರಣೆ ಮೇಲೂ ಕರಿನೆರಳು ಬಿದ್ದಿದೆ. ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ಬಿಂಬಿಸುವಂತೆ ದಸರಾ ಬೊಂಬೆಗಳನ್ನು ಕೂರಿಸಲಾಗುತ್ತದೆ. ಹಾಗೆ ಮಡಿಕೇರಿಯ ವೆಂಕಟೇಶ್ ಎಂಬುವವರ ಮನೆಯಲ್ಲಿ ತಲತಲಾಂತರಗಳಿಂದ ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸಿ ಪೂಜಿಸುತ್ತಿದ್ದರು. ನೆಂಟರಿಷ್ಟರು, ನೆರೆಹೊರೆಯ ಮುತ್ತೆಯರನ್ನು ಕರೆದು ಅರಿಶಿಣ, ಕುಂಕುಮ ಮತ್ತು ಬಾಗಿನ ಕೊಟ್ಟು ಹರಸುತ್ತಿದ್ದರು. ಆದರೆ ಈ ಬಾರಿ ಕೊರೋನಾ ಸೂತಕದ ಛಾಯೆ ಗೊಂಬೆಗಳ ಪೂಜೆ ಮೇಲೂ ಬೀರಿದೆ.

ಪ್ರತೀ ವರ್ಷದಂತೆ ಈ ಬಾರಿಯೂ ಗೊಂಬೆಗಳ ನ್ನು ಕೂರಿಸಿ ಪೂಜಿಸುತ್ತಿದ್ದರು, ನೆಂಟರಿಷ್ಟರು ಅಥವಾ ನೆರೆಹೊರೆಯವರಿಗೂ ಆಹ್ವಾನವಿಲ್ಲ. ಬದಲಾಗಿ ಮನೆ ಮಂದಿ ಮಾತ್ರವೇ ಸೇರಿ ಗೊಂಬೆಗಳ ಕೂರಿಸಿ ಪೂಜಿಸಲಾಗುತ್ತಿದೆ ಎನ್ನುತ್ತಾರೆ ಸವಿತಾ.

ಗೊಂಬೆಗಳನ್ನು 9 ಹಂತಗಳಲ್ಲಿ ಕೂರಿಸಲಾಗಿದೆ. ನವರಾತ್ರಿಯ ಮೊದಲ ದಿನವೇ ಚಂದನದಿಂದ ಮಾಡಿರುವ ಪಟ್ಟದ ಗೊಂಬೆಗಳನ್ನು ಕೂರಿಸಿ ಬಳಿಕ ಉಳಿದ ಹಂತಗಳಲ್ಲಿ ಅಷ್ಟಲಕ್ಷ್ಮಿಯರು, ಶಿವ ಪಾರ್ವತಿಯರು ಸೇರಿದಂತೆ ವಿವಿಧ ಗೊಂಬೆಗಳನ್ನು ಕೂರಿಸಿ ಪೂಜಿಸುತಿದ್ದಾರೆ. ಸೀತಾ ಕಲ್ಯಾಣದ ಜೋಡಿಗಳು, ವೈಕುಂಠ ಪ್ರದರ್ಶನದ ಬೊಂಬೆಗಳು, ಶಿವ-ಪಾರ್ವತಿಯರ ಕೈಲಾಸದ ಸೆಟ್ ಹೀಗೆ ಒಂದೊಂದು ಅಂತಸ್ತಿನಲ್ಲಿ ಒಂದೊಂದನ್ನು ಇಟ್ಟು ಅಲಂಕರಿಸಲಾಗಿದೆ.

ಇದನ್ನೂ ಓದಿ : Onion: ಈರುಳ್ಳಿಗೆ ಚಿನ್ನದ ಬೆಲೆ ; ಕಳ್ಳರ ಕಾಟ ಹೆಚ್ಚಳದಿಂದ ಅನ್ನದಾತ ಕಂಗಾಲು

ಚಾಮುಂಡೇಶ್ವರಿ ಹಬ್ಬದಲ್ಲಿ ಚಾಮುಂಡೇಶ್ವರಿಯ ವಿಶೇಷತೆ ಇರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೋವಿಡ್ ಆತಂಕದ ನಡುವೆಯೂ ಸರಳವಾಗಿ ಗೊಂಬೆಗಳನ್ನು ಇಟ್ಟು ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ್, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಲಾಗುತ್ತಿದೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಅವರಲ್ಲಿ ಅರಿವು ಮೂಡಿದಂತಾಗುತ್ತದೆ ಎನ್ನುತ್ತಾರೆ ವೆಂಕಟೇಶ್.
Published by:G Hareeshkumar
First published: