ಸಿಎಂ ಪುತ್ರ ವಿಜಯೇಂದ್ರ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ : ಶ್ರೀರಾಮುಲು

ಡ್ರಗ್ಸ್​​​ ಗೆ ಮುಖ್ಯವಾಗಿ ಯುವ ಸಮುದಾಯ ಬಲಿಯಾಗುತ್ತಿದೆ. ರಾಜ್ಯ ಸರ್ಕಾರ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಯಾರೇ ತಪ್ಪತಸ್ಥರಿದ್ದರೂ ಕ್ರಮ ಖಚಿತ. ಸಿನೆಮಾ ನಟರಿರಲಿ, ರಾಜಕಾರಣಿಗಳಿರಲಿ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಕಲಬುರ್ಗಿ(ಸೆಪ್ಟೆಂಬರ್​ 16): ಸಿಎಂ ಮಗ ವಿಜಯೇಂದ್ರ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯರು ಅವರ ಬಳಿ ಹೋಗಿದ್ದಾರೆಂದು ವಿಜಯೇಂದ್ರ ಅವರ ಜೊತೆ ಚರ್ಚೆ ಮಾಡಿದ್ದಾರೆ. ವೈದ್ಯರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ವಿಜಯೇಂದ್ರ ಇತ್ಯರ್ಥ ಮಾಡಬಹುದೆಂದರು. ಬೇರೆ ಯಾವ ಇಲಾಖೆಯಲ್ಲಿಯೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಸಿಎಂ ಮಗ ಎನ್ನುವ ಕಾರಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದಾರೆ. ವೈದ್ಯರಿಗೆ ಎರಡು ದಿನಗಳಲ್ಲಿ ಸಿಹಿ ಸುದ್ದಿ ಕೊಡುತ್ತೇವೆ. ವೈದ್ಯರ ಕೆಲ ಬೇಡಿಕೆಗಳನ್ನ ಈಡೇರಿಸುತ್ತೇವೆ. ವೈದ್ಯರು ಮುಷ್ಕರಕ್ಕೆ ಮುಂದಾಗಲ್ಲ ಎನ್ನುವ ಭರವಸೆಯಿದೆ ನನಗಿದೆ ಎಂದರು. ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗುವುದು ಅನುಮಾನ ಎಂದು ಶ್ರೀರಾಮುಲು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅತಿವೃಷ್ಟಿ ಮತ್ತು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತಿಲ್ಲ ಎಂದರು.

ಕೊರೋನಾ ಸೋಂಕಿತರ ಬಳಿ ಅಧಿಕ ಹಣ ವಸೂಲಿ ಆರೋಪ ಕೇಳಿ ಬರುತ್ತಿವೆ. ಅಧಿಕ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ. ಖಾಸಗಿ ಆಸ್ಪತ್ರೆ ಮಾನ್ಯತೆ ರದ್ದುಗೊಳಿಸುತ್ತೇವೆ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದರು.

ಡ್ರಗ್ಸ್ ಜಾಲದಲ್ಲಿ ಸಿನೆಮಾ ನಟರ ಭಾಗಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಸಿನೆಮಾ ನಟರು, ರಾಜಕಾರಣಿಗಳು ಭಾಗಿಯಾಗಿದಾರೆ ಎನ್ನುವ ಆರೋಪವಿದೆ. ಡ್ರಗ್ಸ್​​​ ಗೆ ಮುಖ್ಯವಾಗಿ ಯುವ ಸಮುದಾಯ ಬಲಿಯಾಗುತ್ತಿದೆ. ರಾಜ್ಯ ಸರ್ಕಾರ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಯಾರೇ ತಪ್ಪತಸ್ಥರಿದ್ದರೂ ಕ್ರಮ ಖಚಿತ. ಸಿನೆಮಾ ನಟರಿರಲಿ, ರಾಜಕಾರಣಿಗಳಿರಲಿ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ದತ್ತ ಸನ್ನಿಧಿಯಲ್ಲಿ ಶ್ರೀರಾಮುಲು ವಿಶೇಷ ಪೂಜೆ :

ಕಲಬುರ್ಗಿಗೆ ಆಗಮಿಸಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಭೇಟಿ ನೀಡಿದ್ದಾರೆ. ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀರಾಮುಲು, ವಿಶೇಷ ಪೂಜೆ ಸಲ್ಲಿಸಿದರು. ದತ್ತನ ಪಾದುಕೆ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಸುವರ್ಣ ಪಾದುಕೆ ಪೂಜೆ ಸಲ್ಲಿಸಿ ಇಷ್ಟಾರ್ಥಸಿದ್ಧಿಗೆ ಪ್ರಾರ್ಥಿಸಿದರು. ಬಿ.ಶ್ರೀರಾಮುಲುಗೆ ಸ್ಥಳೀಯ ನಾಯಕರು ಸಾಥ್ ನೀಡಿದರು

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದ ಸಚಿವ ಆರ್.ಅಶೋಕ್ :

ಸಿಎಂ ಬಿಎಸ್‌ವೈ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನಾಳೆ ನವದೆಹಲಿಗೆ ತೆರಳುತ್ತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗುತ್ತಿಲ್ಲ. ಸಂಪುಟ ಸೇರ್ಪಡೆ ಬಗ್ಗೆ ಮತ್ತು ವಿಸ್ತರಣೆ ಸದ್ಯಕ್ಕಿಲ್ಲ. ಅತಿವೃಷ್ಟಿ ಬಗ್ಗೆ ಚರ್ಚಿಸಿ ಹೆಚ್ಚಿನ ಪರಿಹಾರ ತರುವುದರ ಬಗ್ಗೆ ಚರ್ಚಿಸಲು ಸಿಎಂ ದೆಹಲಿಗೆ ತೆರಳುತ್ತಿದ್ದಾರೆ. ಜೊತೆಗೆ ದೆಹಲಿಯಲ್ಲಿ ಕರ್ನಾಟಕ ಭವನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಸಂಪುಟಕ್ಕೆ ಹೊಸಬರ ಸೇರ್ಪಡೆ ಮತ್ತು ಕೆಲ ಹಳಬರನ್ನ ತೆಗೆಯುವುದು ಸಿಎಂರ ಪರಮಾಧಿಕಾರ ಎಂದರು.

ಇದನ್ನೂ ಓದಿ :

ಸರ್ಕಾರ ರಚನೆಗೆ ಕಾರಣರಾದವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತ. ಆದರೆ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ. ಎಲ್ಲವೂ ಸಿಎಂ ಅವರ ವಿವೇಚನೆಗೆ ಬಿಟ್ಟದ್ದು ಎಂದರು.

ರಾಜ್ಯದಲ್ಲಿ ಅತಿಯಾದ ಮಳೆಯಿಂದ ಅತಿವೃಷ್ಟಿಯಾಗಿದ್ದು, ರಾಜ್ಯದ 130 ತಾಲೂಕುಗಳು ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಅತಿವೃಷ್ಟಿ ಪೀಡಿತ ತಾಲೂಕುಗಳ ಪಟ್ಟಿ ಕಳುಹಿಸಿಕೊಡಲಾಗಿದೆ. ಕೇಂದ್ರ ಸರ್ಕಾರ ಅತಿವೃಷ್ಟಿ ಪರಿಹಾರವಾಗಿ 395 ಕೋಟಿ ರೂಪಾ ಹಣ ಬಿಡುಗಡೆ ಮಾಡಿದೆ. ಈ ಹಣ ಸಾಕಾಗಲ್ಲ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ತಿಳಿಸಿದ್ದಾರೆ.
Published by:G Hareeshkumar
First published: