news18-kannada Updated:August 15, 2020, 5:52 PM IST
ಎಸ್.ಟಿ. ಸೋಮಶೇಖರ್
ಮೈಸೂರು(ಆ. 15): ಆಗಸ್ಟ್ ತಿಂಗಳು ಬಂತೆಂದರೆ ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ಚರ್ಚೆ ಆರಂಭವಾಗಿ, ಮೈಸೂರು ಅರಮನೆ ಅಂಗಳಕ್ಕೆ ಆನೆಗಳು ಹೆಜ್ಜೆ ಇಡಬೇಕಿತ್ತು. ಆದ್ರೆ ಈ ಬಾರಿ ಕೊರೋನಾದಿಂದಾಗಿ ಮೈಸೂರು ದಸರಾ ಆಚರಣೆ ಬಗ್ಗೆ ಸದ್ದು ಆಗಿಲ್ಲ. ಒಂದೇ ಒಂದು ಚರ್ಚೆಯೂ ಆರಂಭವಾಗಿಲ್ಲ. ಇತ್ತ ಮೈಸೂರು ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಕೊರೊನಾ ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆಯೇ ಹೆಚ್ಚು ಚರ್ಚೆ ನಡೆಸಿದ್ದೇವೆ. ದಸರಾ ಬಗ್ಗೆ ಚಿಂತನೆ ನಡೆಸಿಲ್ಲ ಎಂದಿದ್ದಾರೆ. ಉಸ್ತುವಾರಿ ಸಚಿವರ ಈ ಹೇಳಿಕೆ ಈ ಬಾರಿಯ ದಸರಾ ಮೇಲೆ ಕೊರೋನಾದ ಕರಿನೆರಳನ್ನ ಹಾಸಿದಂತೆ ಕಾಣುತ್ತಿದೆ.
ವಿಶ್ವವಿಖ್ಯಾತ ಮೈಸೂರು ದಸರಾ 2020ರ ಬಗ್ಗೆ ಏನೂ ತೀರ್ಮಾನ ಆಗಿಲ್ಲ ಅಂತ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನಾವು ಈ ಬಗ್ಗೆ ಸಿಎಂ ಗಮನಕ್ಕೂ ತಂದಿಲ್ಲ. ಸಿಎಂ ಸಹ ಆಸ್ಪತ್ರೆಯಲ್ಲಿದ್ದರು. ಈಗ ಮೈಸೂರಿನಲ್ಲೂ ಕೊರೋನಾ ಹೆಚ್ಚಾಗಿದೆ. ಕೊರೋನಾ ಸಾವು ಕೂಡ ಹೆಚ್ಚಾಗಿದೆ. ಮೊದಲು ಈ ಬಗ್ಗೆ ಹೆಚ್ಚಿನ ಗಮನಹರಿಸುತ್ತೇವೆ. ಮುಂದಿನವಾರ ಸಿಎಂ ನೇತೃತ್ವದಲ್ಲಿದಲ್ಲಿ ಕ್ಯಾಬಿನೆಟ್ ಸಭೆ ಇದೆ. ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಸದ್ಯಕ್ಕೆ ಕೊರೋನಾ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಆರ್.ಬಿ. ತಿಮ್ಮಾಪುರಗೆ ಇನ್ನೂ ಅಕಲದ ಹಲ್ಲು ಬಂದಿಲ್ಲ: ಡಿಸಿಎಂ ಗೋವಿಂದ ಕಾರಜೋಳ ಲೇವಡಿ
ಇದರ ಜೊತೆಗೆ ಸಂಪೂರ್ಣ ಭರ್ತಿಯಾಗಿರುವ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಆಗಸ್ಟ್ 21 ಸಿಎಂ ಬಿಎಸ್ವೈ ಬಾಗಿನ ಸಮರ್ಪಿಸಲಿದ್ದಾರೆ ಎಂದು ತಿಳಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಆಚರಣೆ ಹಾಗೂ ತಲಕಾಡು ಪಂಚಲಿಂಗ ದರ್ಶನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಆಗಸ್ಟ್ 20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ ಅವರೇ ಮೈಸೂರಿಗೆ ಬಂದಾಗ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಆದರೆ, ಈ ಸಮಯಕ್ಕೆ ಹೈಪವರ್ ಕಮಿಟಿ ಮೀಟಿಂಗ್ ನಡೆಯಬೇಕಿತ್ತು. ಜೊತೆಗೆ ಈ ಬಾರಿಯ ದಸರಾಗೆ ಎಷ್ಟು ಅನುದಾನ ಬೇಕು ಅನ್ನೋ ಬಗ್ಗೆ ಆರ್ಥಿಕವಾಗಿ ಅನುಮತಿ ಪಡೆಯಬೇಕಿತ್ತು. ಈ ಜೊತೆಗೆ ದಸರಾ ಆನೆಗಳ ಆಯ್ಕೆ ಹಾಗೂ ಅವುಗಳನ್ನ ಗಜಪಯಣದ ಮೂಲಕ ಕರೆತರುವ ಕೆಲಸವು ಆಗಬೇಕಿತ್ತು. ಕೊರೋನಾ ಮಹಾಮಾರಿಯಿಂದ ದಸರಾ ಕೆಲಸಗಳು ಇನ್ನೂ ಆರಂಭವೇ ಆಗಿಲ್ಲ. ಈ ಬಾರಿ ಯಾವ ರೀತಿ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದ್ದು, ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
Published by:
Vijayasarthy SN
First published:
August 15, 2020, 5:52 PM IST