HOME » NEWS » District » NO CUSTOMERS IN BYADGI CHILLI MARKET DUE TO CORONA PANDEMIC KVD

ಕೊರೋನಾ ಬೇಗೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ: ಗ್ರಾಹಕರು ದೂರ, ವ್ಯಾಪಾರಸ್ಥರಿಗೆ ಖಾರ..!

ಕೊರೋನಾ ಸೋಂಕು ಹರಡೋದನ್ನ ತಡೆಯಲು  ವಾರಕ್ಕೆರಡು ದಿನ ನಡೆಯುತ್ತಿದ್ದ ಮಾರುಕಟ್ಟೆಯನ್ನ ಸೋಮವಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

news18-kannada
Updated:April 22, 2021, 8:20 PM IST
ಕೊರೋನಾ ಬೇಗೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ: ಗ್ರಾಹಕರು ದೂರ, ವ್ಯಾಪಾರಸ್ಥರಿಗೆ ಖಾರ..!
no customers in byadgi chilli market due to corona pandemic
  • Share this:
ಹಾವೇರಿ (ಏ22): ಭಾರತೀಯ ಖಾದ್ಯಗಳಲ್ಲಿ ವಿಶೇಷ ಬಣ್ಣ ಹಾಗೂ ರುಚಿಯನ್ನು ನೀಡುವ ಬ್ಯಾಡಗಿ ಮೆಣಸಿನಕಾಯಿಗೆ ಪ್ರತ್ಯೇಕ ಸ್ಥಾನವಿದೆ. ಹೆಚ್ಚು ಖಾರ ನೀಡದೆ ತನ್ನದೇ ಆದ ರುಚಿಯನ್ನು ನೀಡುವ ಬ್ಯಾಡಗಿ ಮೆಣಸಿನಕಾಯಿ ಎಲ್ಲರ ಅಡುಗೆಮನೆಯ ಖಾಯಂ ಸದಸ್ಯ. ಇಂಥ ಪ್ರಸಿದ್ಧಿ ಗಿಟ್ಟಿಸಿಕೊಂಡಿರುವ ಹಾವೇರಿಯ ಬ್ಯಾಡಗಿ ಮೆಣಸಿನಕಾಯಿಯ ಮೇಲೂ ಈಗ ಹೆಮ್ಮಾರಿ ಸೋಂಕಿನ ಕರಿನೆರಳು ಚಾಚಿಕೊಂಡಿದೆ. ವಿದೇಶ ಸೇರಿದಂತೆ ಹೊರ ರಾಜ್ಯಗಳಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿರುವ ಬ್ಯಾಡಗಿ ಮೆಣಸಿಕಾಯಿ ವ್ಯಾಪಾರ ಈಗ ಫುಲ್​ ಡಲ್​ ಆಗಿದೆ.

ಕೊರೋನಾ 2ನೇ ಅಲೆ ಪ್ರಭಾವ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆಯ ಮೇಲೂ ಬಿದ್ದಿದೆ. ವ್ಯಾಪಾರವಿಲ್ಲದೇ ಮಾರುಕಟ್ಟೆಯ ವ್ಯಾಪಾರಸ್ಥರು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಮತ್ತು ಗುರುವಾರ ವಾರಕ್ಕೆರಡು ಬಾರಿ ಕೆಂಪು ಮೆಣಸಿನಕಾಯಿ ಮಾರುಕಟ್ಟೆ ನಡೀತಿತ್ತು. ಗುಂಟೂರು, ಬಳ್ಳಾರಿ, ಗದಗ, ಧಾರವಾಡ ಹೀಗೆ ರಾಜ್ಯ ಹಾಗೂ ಹೊರರಾಜ್ಯದ ವಿವಿಧೆಡೆಯಿಂದ ರೈತರು ಮಾರುಕಟ್ಟೆಗೆ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಿದ್ದರು. ಬೇರೆ ಬೇರೆ ಕಡೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಖರೀದಿದಾರರು ಮಾರುಕಟ್ಟೆಗೆ ಬರುತ್ತಿದ್ದರು. ಸೋಮವಾರ ಮತ್ತು ಗುರುವಾರ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು.

ಮಾರುಕಟ್ಟೆ ತುಂಬೆಲ್ಲಾ ಮೆಣಸಿನಕಾಯಿಯ ವ್ಯಾಪಾರದ ಘಾಟು ಜೋರಾಗೇ ಇರುತ್ತಿತ್ತು. ಆದರೆ ಈಗ ಕೊರೊನಾ ಕರಿನೆರಳು‌ ಬ್ಯಾಡಗಿ ಮೆಣಸಿನಕಾಯಿ ಮಾರ್ಕೆಟ್‌‌ ಮೇಲೆ‌ ಬಿದ್ದಿದೆ. ಕೊರೋನಾ ಸೋಂಕು ಹರಡೋದನ್ನ ತಡೆಯಲು  ವಾರಕ್ಕೆರಡು ದಿನ ನಡೆಯುತ್ತಿದ್ದ ಮಾರುಕಟ್ಟೆಯನ್ನ ಸೋಮವಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊರೋನಾ ಕಡಿಮೆ ಆಗದಿದ್ದರೆ ಇಡೀ ಮಾರುಕಟ್ಟೆಯನ್ನೆ ಬಂದ್ ಮಾಡುವ ವಿಚಾರ ಕೂಡ ವರ್ತಕರ ಸಂಘದ ಮುಂದಿದೆ.

ಕಳೆದ ವರ್ಷವೂ ಮಾರುಕಟ್ಟೆಗೆ ಕೊರೋನಾ ಮೊದಲನೇ‌ ಅಲೆಯ ಹೊಡೆತ ಬಿದ್ದಿತ್ತು. ಆಗ ಇಡೀ ಮಾರುಕಟ್ಟೆಯೇ ಬಂದ್ ಆಗಿ ರೈತರು, ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆ ಎದುರಾಗಿತ್ತು. ಈಗ ಮತ್ತೆ ಎಲ್ಲೆಲ್ಲೂ ಕೊರೋನಾ 2ನೇ ಅಲೆಯ ಅಬ್ಬರ ಶುರುವಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ತುಂಬು ತೆಗೆಯೋದು ಸೇರಿದಂತೆ ಮೆಣಸಿನಕಾಯಿ ಮಾರುಕಟ್ಟೆಯನ್ನೇ ನಂಬಿಕೊಂಡಿರುವ ಸಾವಿರಾರು ಕೂಲಿ ಕಾರ್ಮಿಕರ ಕೆಲಸಕ್ಕೆ ಪೆಟ್ಟು ಬೀಳುವ ಸಾಧ್ಯತೆ ದಟ್ಟವಾಗಿದೆ.

ಸದ್ಯ ವಾರಕ್ಕೊಮ್ಮೆ ನಡೆಯುತ್ತಿರುವ ಮಾರುಕಟ್ಟೆಯೂ ಭಣಗುಡುತ್ತಿದೆ. ವರ್ತಕರು ಮಾಸ್ಕ್​​ ಧರಿಸಿ, ಅಂತರ ಕಾಯ್ದುಕೊಂಡು ವ್ಯಾಪಾರಕ್ಕೆ ಮುಂದಾದರೂ ಕೊರೋನಾ ಭಯದಲ್ಲಿ ಜನ ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ. ಕರ್ಫ್ಯೂ, ನೈಟ್​ ಕರ್ಫ್ಯೂ ಹಿನ್ನೆಲೆಯಲ್ಲಿ  ಹೊರ ರಾಜ್ಯದ ವ್ಯಾಪಾರಕ್ಕೂ ಕತ್ತರಿ ಬಿದ್ದಿದೆ. ಹೊರ ರಾಜ್ಯಕ್ಕೆ ಬ್ಯಾಡಗಿ ಮೆಣಸಿಕಾಯಿ ಲೋಡ್​ ಸಾಗಾಟ ಮಾಡುವುದು ಕಷ್ಟವಾಗಿರೋದ್ರಿಂದ ಹೊಸ ಬೇಡಿಕೆಗಳು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ವರದಿ: ಮಂಜುನಾಥ್ ತಳವಾರ
Published by: Kavya V
First published: April 22, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories