ರಾಮನಗರ(ಚನ್ನಪಟ್ಟಣ): ರಾಮನಗರ - ಚನ್ನಪಟ್ಟಣ ನಗರಸಭೆ ಚುನಾವಣೆಗೆ ಇದೇ 27 ರಂದು ಮತದಾನ ನಡೆಯಲಿದೆ. ಇದೇ ತಿಂಗಳ 30 ಕ್ಕೆ ಮತ ಎಣಿಕೆ ಕಾರ್ಯ ಸಹ ನಡೆಯಲಿದೆ. ಈ ಹಿನ್ನೆಲೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಾಂಕ 15-04-2021 ರಂದು ಕೊನೆಯ ದಿನಾಂಕವಾಗಿತ್ತು. ಎರಡೂ ಕಡೆಗಳಿಂದ ಒಟ್ಟು 62 ವಾರ್ಡ್ ಗೆ ಎಲೆಕ್ಷನ್ ನಡೆಯುತ್ತಿದ್ದು, ಎರಡೂ ಕಡೆ ಹಲವು ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಕಣದಲ್ಲಿ ಇಲ್ಲ. ಹಾಗೆಯೇ ಮುಖ್ಯವಾಗಿ ಸಚಿವ ಸಿ.ಪಿ.ಯೋಗೇಶ್ವರ್ ತವರು ಕ್ಷೇತ್ರ ಚನ್ನಪಟ್ಟಣದಲ್ಲಿಯೇ 8 ನಗರಸಭಾ ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಕಣಕ್ಕಿಳಿಯದಿರುವುದು ಸಿ.ಪಿ.ಯೋಗೇಶ್ವರ್ ಗೆ ಭಾರೀ ಮುಖಭಂಗವಾಗಿದೆ.
ಹೆಚ್.ಡಿ.ಕುಮಾರಸ್ವಾಮಿ ಎದುರು ಸಿ.ಪಿ.ಯೋಗೇಶ್ವರ್ ಡಲ್: ರಾಮನಗರ 31, ಚನ್ನಪಟ್ಟಣ 31 ವಾರ್ಡ್ ಗಳ ಪೈಕಿ ಜೆಡಿಎಸ್ ಪಕ್ಷ ಎಲ್ಲಾ ವಾರ್ಡ್ ಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಇನ್ನು ಕಾಂಗ್ರೆಸ್ ಸಹ ಎಲ್ಲಾ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಆದರೆ ರಾಮನಗರ - ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಹಲವು ವಾರ್ಡ್ ಗಳಿಗೆ ಅಭ್ಯರ್ಥಿಗಳೇ ಇಲ್ಲದಿರುವುದು ನಿಜಕ್ಕೂ ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ರಾಮನಗರದಲ್ಲಿ ಒಟ್ಟು 145 ಮಂದಿ ಕಣದಲ್ಲಿದ್ದು, ಜೆಡಿಎಸ್ - 34, ಕಾಂಗ್ರೆಸ್ - 37, ಬಿಜೆಪಿ - 22 ಮಂದಿ ಪಕ್ಷದ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಒಟ್ಟು 134 ಮಂದಿ ಕಣದಲ್ಲಿದ್ದು, ಜೆಡಿಎಸ್ - 35, ಕಾಂಗ್ರೆಸ್ - 32, ಬಿಜೆಪಿ - 23 ಮಂದಿ ಪಕ್ಷದ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಜೆಡಿಎಸ್ - ಕಾಂಗ್ರೆಸ್ ನಲ್ಲಿ ಪಕ್ಷದ ಟಿಕೆಟ್ ಸಿಗದೇ ಕೆಲವರು ಅದೇ ಪಕ್ಷದಡಿಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಆದರೆ ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ರಾಮನಗರದಲ್ಲಿಯೂ ಸಹ ಬಿಜೆಪಿಗೆ ಇದೇ
ರೀತಿಯಾಗಿದೆ.
ಸಿ.ಪಿ.ಯೋಗೇಶ್ವರ್ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ, ಹಾಲಿ ಚನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಎದುರು ಭಾರೀ ಅಂತರದಿಂದ ಸೋತಿದ್ದರು ಸಹ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಿ ಎಂಬ ದೂರಾಲೋಚನೆಯಿಂದ ಸಾಕಷ್ಟು ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ್ ಸಿಪಿವೈಗೆ ಸಚಿವ ಸ್ಥಾನ ನೀಡಿದೆ. ಆದರೆ ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ ಬರೋಬ್ಬರಿ 8 ಮುಸ್ಲಿಂ ಸಮುದಾಯದ ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಡಿಯಲ್ಲಿ ಅಭ್ಯರ್ಥಿಗಳೇ ಕಣಕ್ಕಿಳಿಯದಿರುವುದು ನಿಜಕ್ಕೂ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದರೂ ಸಹ ಇದೊಂದು ದೊಡ್ಡ ಹಿನ್ನಡೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ