ಹಕ್ಕಿ ಜ್ವರ ಭಯ ಇಲ್ಲ; ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಕೋಳಿ ‌ಮಾರಾಟ

ಚಿಕನ್ ಖಾದ್ಯಗಳ ಮೇಲೆ ಹಕ್ಕಿಜ್ವರ ಪರಿಣಾಮ ಬೀರಿಲ್ಲ. ಸಹಜವಾಗಿಯೇ ವ್ಯಾಪಾರ ನಡೆಯುತ್ತಿದೆ. ಕೋಳಿಯ ಕೊರತೆಯೂ ಆಗಿಲ್ಲ. ಹಕ್ಕಿಗಳಲ್ಲಿ ಜ್ವರ ಕಾಣಿಸಿಕೊಂಡಲ್ಲಿ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಭಯದಲ್ಲಿ ಮಾತನಾಡುತ್ತಾರೆ.

ಕೋಳಿ

ಕೋಳಿ

  • Share this:
ಕಾರವಾರ; ರಾಜ್ಯದ ಬೇರೆಡೆಯಲ್ಲ ಹಕ್ಕಿ ಜ್ವರ ಭೀತಿ ಎದುರಾಗಿದ್ದು, ಕೋಳಿ ಮಾಂಸ ಮಾರಾಟದ ಮೇಲೆ ಪರಿಣಾಮ ಬೀರಿದೆ. ಆದರೆ ಉತ್ತರ ಕನ್ನಡದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಕೋಳಿ, ಮೊಟ್ಟೆ ಮೇಲು ದುಷ್ಪರಿಣಾಮ ಬೀರಿಲ್ಲ. ವ್ಯಾಪಾರ ನಿರಾತಂಕವಾಗಿ ನಡೆಯುತ್ತಿದೆ. ರಾಜ್ಯದ ಹಲವೆಡೆ  ಕೋಳಿ ಮಾಂಸ, ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿ ದರದಲ್ಲಿ ಗಣನೀಯ ಇಳಿಕೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢವಾಗದ ಕಾರಣ ಸದ್ಯ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರಿಲ್ಲ. ಪ್ರಮುಖವಾಗಿ ಹುಬ್ಬಳ್ಳಿಯಿಂದ ಮಾಂಸದ ಕೋಳಿಯನ್ನು ತರಲಾಗುತ್ತದೆ. ಜಿಲ್ಲೆಯಲ್ಲೂ ಕೂಡಾ 141 ಕೋಳಿ ಫಾರಂಗಳಿದ್ದು, ಅವುಗಳಲ್ಲಿ ತತ್ತಿ ಕೋಳಿ ಫಾರಂ 5, ಮಾಂಸದ ಕೋಳಿ ಫಾರಂ 136 ಇವೆ. ಈ ಎಲ್ಲೆಡೆ ಎಂದಿನಂತೆ ನಿರಾಂತಕವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ.

ದರ ಇಳಿಕೆ ಇಲ್ಲ

ಚಿಕನ್ 200 ರು., ಚಿಕನ್ ಗ್ರೋಸ್ 135 ರು., ಚಿಕನ್ ನೆಕ್ 220 ರು., ಪಂಜಾಬಿ ಲೆಗ್ 260 ರು. ದರವನ್ನು ಹೊಂದಿದೆ. ಮೊಟ್ಟೆ ದರಲ್ಲಿ ಕೂಡಾ ಬದಲಾವಣೆಯಾಗಿಲ್ಲ. 100 ಮೊಟ್ಟೆಗೆ 560 ರು., ಡಜನ್ ಮೊಟ್ಟೆಗೆ 62 ರು. ದರವಿದೆ. ದಿನನಿತ್ಯದ ಮಾರುಕಟ್ಟೆಯಂತೆ ಒಂದೆರಡು ರುಪಾಯಿ ಏರಿಳಿಕೆಯಾಗಿದೆ ಎನ್ನುತ್ತಾರೆ ಮಾಂಸದ ಕೋಳಿ ವ್ಯಾಪಾರಿಗಳು. ಆದರೆ ಹಕ್ಕಿ ಜ್ವರದಿಂದ ದರ ನೆಲಕಚ್ಚಿಲ್ಲ. ಕಾರವಾರದಲ್ಲಿ ಸರಾಸರಿ 1000 ರಿಂದ 1300 ಕೋಳಿ ಪ್ರತಿನಿತ್ಯ ವ್ಯಾಪಾರವಾಗುತ್ತದೆ. ಹಕ್ಕಿಜ್ವರ ಬೇರೆಡೆ ಕಾಣಿಸಿಕೊಂಡಿದ್ದರೂ ಇಲ್ಲಿನ ಮಾರುಕಟ್ಟೆಯ ಮೇಲೆ ಪರಿಣಾಮವಾಗಿಲ್ಲ. ಕಳೆದ 2-3 ದಿನಗಳಿಂದ ಒಂದೇ ರೀತಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೋಟೆಲ್‌ಗಳಲ್ಲಿ ಚಿಕನ್ ಹೈದ್ರಾಬಾದಿ, ಕೊಲ್ಲಾಪುರಿ, ಟಿಕ್ಕಾ ಮಸಾಲಾ, ಚಿಕನ್ ಮಸಾಲಾ, ಚಿಕನ್ ದಮ್ ಬಿರ್ಯಾನಿ, ಕುಷ್ಕಾ, ಎಗ್ ಬಿರ್ಯಾನಿ, ಆಮ್ಲೆಟ್, ಎಗ್ ಮಂಚೂರಿ ಮೊದಲಾದ ಖಾದ್ಯಗಳ ಬೇಡಿಕೆ ಕಡಿಮೆಯಾಗಿಲ್ಲ.

ವ್ಯಾಪಾರಿಗಳಿಗೆ ಕಡಿಮೆಯಾಗದ ಆತಂಕ

ಹಕ್ಕಿಜ್ವರ ಕಾಣಿಸಿಕೊಳ್ಳದ ಕಾರಣ ಹಾಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಮಾನ್ಯವಾಗಿದೆ. ಆದರೆ ಹಕ್ಕಿಜ್ವರ ಕಂಡುಬಂದಲ್ಲಿ ಕೋಳಿ ಮಾಂಸ, ಮೊಟ್ಟೆ ವ್ಯಾಪಾರಕ್ಕೆ ನಷ್ಟ ಉಂಟಾಗುವ ಸಾಧ್ಯತೆಯಿದೆ. ಈಗ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ‌ನಡುವೆ ಹಕ್ಕಿ ಜ್ವರ ಕಾಲಿಟ್ಟರೆ ಜಿಲ್ಲೆಯ ವ್ಯಾಪಾರಿಗಳು ಕಂಗಾಲಾಗಲಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ಎಲ್ಲಿ ಹೋಯಿತು, ಒಬ್ಬರಿಗೂ ನಯಾಪೈಸೆ ಸಿಕ್ಕಿಲ್ಲ; ಡಿ.ಕೆ.ಶಿವಕುಮಾರ್ ಪ್ರಶ್ನೆ

ಏನಂತಾರೆ ಅಧಿಕಾರಿಗಳು?

ಕೋವಿಡ್-19 ಸೋಂಕಿನಿಂದ ಈಗಾಗಲೇ ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗಿ ಹಕ್ಕಿ ಜ್ವರ ಪ್ರಕರಣ ಕೋಳಿ ಮಾಂಸ, ಮೊಟ್ಟೆ ವ್ಯಾಪಾರಿಗಳಲ್ಲಿ, ಹೋಟೆಲ್ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಹಕ್ಕಿಜ್ವರ ಪ್ರಕರಣ ಕಂಡುಬಂದಿಲ್ಲ. ಸರ್ಕಾರ ಸೂಚಿಸಿದಂತೆ ಎಲ್ಲಾ ಕಡೆಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ ಜನರು ಭಯಪಡುವ ಅವಶ್ಯಕತೆಯಿಲ್ಲ ಅಂತಾರೆ.

ಏನಂತಾರೆ ಹೊಟೇಲ್ ಮಾಲೀಕರು?

ಚಿಕನ್ ಖಾದ್ಯಗಳ ಮೇಲೆ ಹಕ್ಕಿಜ್ವರ ಪರಿಣಾಮ ಬೀರಿಲ್ಲ. ಸಹಜವಾಗಿಯೇ ವ್ಯಾಪಾರ ನಡೆಯುತ್ತಿದೆ. ಕೋಳಿಯ ಕೊರತೆಯೂ ಆಗಿಲ್ಲ. ಹಕ್ಕಿಗಳಲ್ಲಿ ಜ್ವರ ಕಾಣಿಸಿಕೊಂಡಲ್ಲಿ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಭಯದಲ್ಲಿ ಮಾತನಾಡುತ್ತಾರೆ.
Published by:HR Ramesh
First published: