ನಾಡಿನ ಸುಭಿಕ್ಷೆಗಾಗಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾಗುತ್ತಿರುವ ಪ್ರವಾಹ ಮತ್ತು ಭೂಕುಸಿತದಿಂದ ಶಾಲಾ ಕಟ್ಟಡ ಸಾಕಷ್ಟು ಶಿಥಿಲವಾಗಿತ್ತು. ಹೀಗಾಗಿ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದ್ದು ಶಾಲೆಯೂ ಅವಸಾನದಂಚಿಗೆ ತಲುಪಿದೆ. ಹೀಗಾಗಿ ಆದಿಚುಂಚಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶಾಲೆಯನ್ನು ದತ್ತುಪಡೆದಿದ್ದಾರೆ.

ಬಾಗಮಂಡಲದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ

ಬಾಗಮಂಡಲದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ

  • Share this:
ಕೊಡಗು : ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಕಾವೇರಿ ಮಾತೆಯ ಬ್ರಹ್ಮ ಕುಂಡಿಕೆ ಬಳಿ ಕುಳಿತ ನಿರ್ಮಲಾನಂದನಾಥ ಸ್ವಾಮೀಜಿ ಕಾವೇರಿ ಮಾತೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆಗಳನ್ನು ಮಾಡಿ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಬಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲೂ ಪೂಜೆ ಸಲ್ಲಿಸಿದರು.

ತ್ರಿವೇಣಿ ಸಂಗಮಕ್ಕೆ ತೆರಳಿದ ನಿರ್ಮಲಾನಂದನಾಥ ಸ್ವಾಮೀಜಿ ಬಳಿಕ ಭಗಂಡೇಶ್ವರ ದೇವಾಲಯದಲ್ಲಿ ಕುಳಿತು ಪೂಜೆ ಸಲ್ಲಿಸಿದರು. ನಂತರ ಗಜಗಿರಿ ಬೆಟ್ಟ ಕುಸಿತವಾಗಿ ತಲಕಾವೇರಿ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಕುಟುಂಬವೂ ಭೂಸಮಾಧಿಯಾದ ಜಾಗವನ್ನು ವೀಕ್ಷಿಸಿ ಸಂತಾಪ ವ್ಯಕ್ತಪಡಿಸಿದರು. ಬಳಿಕ ತಲಕಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಲಾನಂದ ಶ್ರೀ ಮೂರ್ನಾಲ್ಕು ರಾಜ್ಯಗಳಿಗೆ ನೀರೊದಗಿರುವ ಕಾವೇರಿ ನಾಡು ಕಳೆದ ಮೂರು ವರ್ಷಗಳಿಂದ ಭೂಕುಸಿತ, ಪ್ರವಾಹಗಳಿಂದ ನಲುಗಿ ಹೋಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ. ಇದರ ಜೊತೆಗೆ ಕಳೆದ ಒಂದು ವರ್ಷದಿಂದ ಕೊರೋನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ನಷ್ಟ ಎದುರಾಗಿದೆ. ಹೀಗಾಗಿ ಇಂತಹ ಎಲ್ಲಾ ಅನಾಹುತಗಳಿಂದ ನಾಡಿಗೆ ಮುಕ್ತಿ ಸಿಗಲಿ ಎಂದು ಮಾತೆ ಕಾವೇರಿಗೆ ಪೂಜೆ ಸಲ್ಲಿಸಿ ಬೇಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಮೂಲಭೂತ ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಡಿಕೇರಿ ತಾಲ್ಲೂಕಿನ ಬಾಗಮಂಡಲದ ಕಾವೇರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಸ್ವಾಮೀಜಿ ದತ್ತು ಪಡೆದಿದ್ದಾರೆ. 60 ವರ್ಷಗಳ ಇತಿಹಾಸ ಹೊಂದಿದ್ದರೂ ಮೂಲಭೂತ ಸಮಸ್ಯೆಗಳಿಲ್ಲದೆ ಶಾಲೆ ಸಂಕಷ್ಟದಲ್ಲಿತ್ತು. ಕೊಡಗಿನ ನಾಲ್ಕನೇ ಶಾಲೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ದತ್ತು ಪಡೆದಂತೆ ಆಗಿದೆ. ಮಡಿಕೇರಿ ತಾಲ್ಲೂಕಿನ ಬಾಗಮಂಡಲದಲ್ಲಿರುವ ಕಾವೇರಿ ವಿದ್ಯಾಸಂಘದ ಪ್ರೌಢಶಾಲೆ ಮತ್ತು ಕಾಲೇಜು 1956 ರಲ್ಲೇ ಸ್ಥಾಪನೆಯಾಗಿದೆ. ಇದುವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದರೂ ಶಾಲೆಗೆ ಕಳೆದ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆ ಎದುರಾಗಿತ್ತು. ಅಷ್ಟೇ ಅಲ್ಲ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾಗುತ್ತಿರುವ ಪ್ರವಾಹ ಮತ್ತು ಭೂಕುಸಿತದಿಂದ ಶಾಲಾ ಕಟ್ಟಡ ಸಾಕಷ್ಟು ಶಿಥಿಲವಾಗಿತ್ತು. ಹೀಗಾಗಿ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದ್ದು ಶಾಲೆಯೂ ಅವಸಾನದಂಚಿಗೆ ತಲುಪಿದೆ. ಹೀಗಾಗಿ ಆದಿಚುಂಚಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶಾಲೆಯನ್ನು ದತ್ತುಪಡೆದಿದ್ದಾರೆ.

ಇದನ್ನು ಓದಿ: 17 ವರ್ಷಗಳ ನಂತರ ಕೊಲೆ ಆರೋಪಿ ಅಂದರ್! ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದ ಪತಿಗೆ ಬೇಡಿ ಹಾಕಿದ ಗದಗ ಪೊಲೀಸರು

ಇದಕ್ಕೂ ಮೊದಲು ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರು. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಮಡಿಕೇರಿ ತಾಲ್ಲೂಕಿನ ಮದೆನಾಡು ಶಾಲೆಯನ್ನು ದತ್ತು ಪಡೆದಿದ್ದರು. ಇದೀಗ ಬಾಗಮಂಡಲದ ಕಾವೇರಿ ಶಾಲೆಯನ್ನು ದತ್ತುಪಡೆದಿದ್ದಾರೆ. ಪೋಷಕರಿಗೆ ತಮ್ಮ ಮಕ್ಕಳನ್ನು ನಗರಪ್ರದೇಶಗಳ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕೆಂಬ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಶಾಲೆಗಳು ತೊಂದರೆಗೆ ಸಿಲುಕುತ್ತಿವೆ. ಈ ಶಾಲೆಯನ್ನು ಆದಿಚುಂಚನಗಿರಿ ಸಂಸ್ಥಾನವು ದತ್ತು ಪಡೆದು ಅಭಿವೃದ್ಧಿಪಡಿಸಲು ಹೊರಟಿರುವುದು ಸ್ವಾಗತಾರ್ಹ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.

ಕಾವೇರಿ ಮಾತೆಯ ಹೆಸರಿನಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಹಲವು ದಶಕಗಳ ಹಿಂದೆಯೇ ನೂರಾರು ಜನರಿಗೆ ಶಿಕ್ಷಣ ನೀಡುವ ಕೆಲಸ ಮಾಡಿವೆ. ಇನ್ನು ಮುಂದೆ ಇದು ಮತ್ತಷ್ಟು ಅಭಿವೃದ್ಧಿ ಹೊಂದಿ, ಆಧುನಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸ ಮಾಡುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
Published by:HR Ramesh
First published: