ಹಾಸನ; ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಶಾಸಕ ಪ್ರೀತಂ ಜೆ. ಗೌಡ ಅವರು ಗುರುವಾರ ಸಂಜೆ ನಗರದ ಆದಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಮೊದಲು ಹಾಸನಾಂಬೆ ದೇವಿ ಗರ್ಭಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದರ್ಭಾರ್ ಗಣಪತಿ ದೇವಸ್ಥಾನಕ್ಕೆ ತೆರಳಿದರು. ಕೊನೆಯಲ್ಲಿ ಶ್ರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನಿಸಿ ಫಲಪುಷ್ಪ ನೀಡಿದರು.
ದರ್ಶನದ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಪ್ರತಿವರ್ಷ ಸಾರ್ವಜನಿಕರು ಹಾಸನಾಂಬೆ ದೇವಿ ದರ್ಶನ ಪಡೆಯುತ್ತಿದ್ದರು. ಆದರೆ ಈ ವರ್ಷ ಕೊರೋನಾ ಆವರಿಸಿರುವುದರಿಂದ ದೇವಿ ದರ್ಶನಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಹೀಗಾಗಿ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದು ನೇರ ದರ್ಶನದಿಂದ ಭಕ್ತರು ವಂಚಿತರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿ: ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ; ಶರಣಾಗುವಂತೆ ಗೃಹ ಸಚಿವರಿಂದ ಎಚ್ಚರಿಕೆ
ಆದಷ್ಟು ಬೇಗ ಕೊರೋನಾ ಜಗತ್ತಿನಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಗಿದೆ. ಈ ಜಗತ್ತು ತ್ರಿಗುಣಗಳಿಂದ ಕೂಡಿ ಮಾಯ ರೂಪದಿಂದ ಇರುವ ನವಬಂಧನದಲ್ಲಿ ಸಿಲುಕಿರುವ ಮನುಷ್ಯನಿಗೆ ಜ್ಞಾನದ ಮೂಲಕ ಮುಕ್ತಿ ಪಡೆಯಲು ಸಾಧ್ಯತೆ ಇದೆ. ಪಂಚ ಕೋಶಗಳಿಂದ ಕೂಡಿರುವ ದೇಹಗಳಲ್ಲಿ ಜ್ಞಾನವನ್ನು ಮಾಡಿ ಬದ್ಧನಾಗಿರುವ ಮೂಲಕ ಜೀವನ ಪಾವನ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ವರದಿ - ಡಿಎಂಜಿ ಹಳ್ಳಿ ಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ