news18-kannada Updated:August 12, 2020, 6:09 PM IST
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ
ಕೊಡಗು(ಆಗಸ್ಟ್. 12): ಕೊಡಗಿನಲ್ಲಿ ಪ್ರವಾಹದಿಂದ ನಲುಗಿರುವ ನದಿಪಾತ್ರದ ಬಹುತೇಕ ಜನರು ಅಂದು ದುಡಿದು ಅಂದು ತಿನ್ನುವ ಕೂಲಿ ಕಾರ್ಮಿಕರಿದ್ದಾರೆ. ಅವರಿಗೆ ಹಣ ಅಥವಾ ಬೇರಾವುದೇ ಆಸೆಗಳಿಲ್ಲ. ಬದಲಾಗಿ ಅವರಿಗೆ ಗೌರವದಿಂದ ಬದುಕುವುದಕ್ಕೆ ಶಾಶ್ವತವಾದ ಮತ್ತು ಸುರಕ್ಷಿತ ಮನೆಗಳು ಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಾದ ವಿರಾಜಪೇಟೆ ತಾಲೂಕಿನ ಕರಡಿಗೋಡು. ಕೊಂಡಗೇರಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲದೆ ಪ್ರವಾಹದಿಂದ ನಲುಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಿಖಿಲ್ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಇಲ್ಲಿಯ ಜನರು ಪಡುತ್ತಿರುವ ಪರಿಪಾಟಲು ನೋಡಿದರೆ ಹೊಟ್ಟೆಗೆ ಬೆಂಕಿ ಹಾಕಿದಂತೆ ಆಗುತ್ತೆ. ನಾನು ಇಲ್ಲಿಗೆ ರಾಜಕೀಯ ಮಾಡುವುದಕ್ಕೆ ಅಥವಾ ಯಾರನ್ನೋ ಬೊಟ್ಟು ಮಾಡುವುದಕ್ಕೆ ಬಂದಿಲ್ಲ. ನಾವೇ ಆಗಲಿ ಅಥವಾ ಬೇರೆ ಯಾವುದೇ ಪಕ್ಷವಾಗಲಿ ಆಡಳಿತ ಮಾಡುವವರು ಇವರಿಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಮಹಿಳೆಯರು ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದವರಿಗೆ ಯಾವುದೇ ಪರಿಹಾರ ಅಥವಾ ಮನೆಗಳನ್ನು ಇಂದಿಗೂ ನೀಡಿಲ್ಲ. ಸಂತ್ರಸ್ತರಿಗೆ ಮನೆ ನಿರ್ಮಿಸುವುದಕ್ಕಾಗಿ ಖಾಸಗಿಯವರು ಜಾಗ ಕೊಟ್ಟಿದ್ದರೂ ಅದನ್ನೂ ಸರ್ಕಾರ ಅಥವಾ ಜಿಲ್ಲಾಡಳಿತ ಕ್ರಮವಹಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇದೇ ವೇಳೆ ಗ್ರಾಮಸ್ಥರು ನಿಖಿಲ್ ಕುಮಾರಸ್ವಾಮಿಗೆ ಆರತಿ ಬೆಳಗಿನ ಸ್ವಾಗತಿಸಿದರು. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ಸಾಥ್ ನೀಡಿದರು.
ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿದು 52 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಲ್ಲಿ ಮುಳುಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ ನಿನ್ನೆ ಎರಡು ದಿನಗಳಿಗೆ ಹೋಲಿಸಿದರೆ ಇಂದು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆಗೊಮ್ಮೆ, ಈಗೊಮ್ಮೆ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಮಳೆ ಕಡಿಮೆ ಆಗಿದ್ದರಿಂದ ತಲಕಾವೇರಿಯಲ್ಲಿ ಕುಸಿದಿರುವ ಗಜಗಿರಿ ಬೆಟ್ಟದ ಅವಶೇಷಗಳ ಅಡಿಯಲ್ಲಿ ಕಣ್ಮರೆಯಾಗಿರುವ ಅರ್ಚಕರ ಕುಟುಂಬದ ಇನ್ನೂ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ :
ನಾನು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು ಹಾಕಿದ್ದಾರೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು
ನಿನ್ನೆ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಸಿಕ್ಕಿದ್ದ ಸ್ಥಳದಿಂದಲೇ ಇಂದು ಕೂಡ ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿತ್ತು. ಆದರೆ ಇಡೀ ದಿನದ ಕಾರ್ಯಚರಣೆಯಿಂದ ಮೂವರ ಯಾವುದೇ ಸುಳಿವು ಸಿಗಲಿಲ್ಲ. ತಲಕಾವೇರಿಯಲ್ಲಿ ಈಗಲೂ ಎಡಬಿಡದೆ ತುಂತುರು ಮಳೆ ಸುರಿಯುತ್ತಿದೆ. ಇದರ ನಡುವೆಯೇ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 75 ಜನರ ತಂಡ ಕಾರ್ಯಚರಣೆ ನಡೆಸಿತು.
ಮತ್ತೊಂದೆಡೆ ಕಾವೇರಿ ನದಿ ಪ್ರವಾಹ ಇಳಿದಿದ್ದರೂ ಮಳೆ ನಿಂತರು ಮರದ ಹನಿ ಮಾತ್ರ ನಿಲ್ಲುವುದಿಲ್ಲ ಎನ್ನುವ ಹಾಗೆ ಪ್ರವಾಹ ಇಳಿದಿದ್ದರೂ ಅವಘಡಗಳು ಮಾತ್ರ ನಿಂತಿಲ್ಲ. ಕೊಡಗಿನಲ್ಲಿ ನಾಲ್ಕು ದಿನಗಳ ಕಾಲ ಉಕ್ಕಿದ ಹರಿದಿದ್ದ ಕಾವೇರಿ ಪ್ರವಾಹದ ಬಳಿಕ ಹಲವೆಡೆ ಕಾವೇರಿ ನದಿ ತಟದ ಭೂಮಿ ಕುಸಿದು ಹೋಗುತ್ತಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರದಿಂದ ಗುಹ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾವೇರಿ ನದಿಗೆ ಆಪೋಶನ ಆಗುತ್ತಿದೆ. ಬಾರೀ ಪ್ರಮಾಣದಲ್ಲಿ ರಸ್ತೆಯ ಮಣ್ಣು ಕಾವೇರಿ ನದಿಗೆ ಕುಸಿದು ಹೋಗುತ್ತಿರುವುದು ಜನಲನ್ನು ಆತಂಕಕ್ಕೆ ದೂಡಿದೆ.
Published by:
G Hareeshkumar
First published:
August 12, 2020, 6:06 PM IST