ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮರಳು ಅಕ್ರಮಕ್ಕೆ ಕೊನೆ ಇಲ್ಲ ಎನ್ನುವ ಸ್ಥಿತಿಯಲ್ಲಿ ಅಕ್ರಮ ದಂಧೆಕೋರರಿಗೆ ಮೈ ಚಳಿ ಬಿಡಿಸುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಚಾಟಿ ಬೀಸಿದ್ದಾರೆ. ಜಿಲ್ಲೆಯ ಕಾರಟಗಿ ತಾಲೂಕಿನ ಗಂಗಾವತಿ ಗ್ರಾಮೀಣ ಠಾಣೆಯ ವ್ಯಾಪ್ತಿಗೆ ಬರುವ ಮುಷ್ಟೂರಿನಲ್ಲಿ ಮರಳು ಅಕ್ರಮಕ್ಕೆ ಕೊನೆಗೂ ಬ್ರೆಕ್ ಬಿದ್ದಂತಾಗಿದೆ. ಈ ಕುರಿತು ನ್ಯೂಸ್ 18 ಕನ್ನಡ ವೆಬ್ ಸೈಟ್ ಏಪ್ರಿಲ್ 8ರಂದು ಸವಿಸ್ತಾರ ವರದಿ ಮಾಡಿತ್ತು. ಇದು ನ್ಯೂಸ್ 18 ಕನ್ನಡ ವೆಬ್‌ನ ಇಂಪ್ಯಾಕ್ಟ್.
ಮುಷ್ಟೂರು ಮರಳು ಪಾಯಿಂಟ್ ಕುರಿತು ಅನೇಕ ದೂರುಗಳು ಬಂದಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಅಧಿಕಾರಿಗಳು ಮುಂದಾದರೂ ಸ್ವತಃ ಪೊಲೀಸ್ ಇಲಾಖೆಯ ಗಂಗಾವತಿ ಭಾಗದ ಅಧಿಕಾರಿಗಳ ಕೃಪಾ ಕಟಾಕ್ಷದಿಂದ ಮುಷ್ಟೂರಿನಲ್ಲಿ ನಿರ್ಭಿತಿಯಿಂದ ಮರಳು ಅಕ್ರಮ ನಡೆಯುತ್ತಿತ್ತು ಎನ್ನಲಾಗಿದೆ.
ಮುಷ್ಟೂರಿನ ಮರಳು ಅಕ್ರಮದ ಬಗ್ಗೆ ನ್ಯೂಸ್18 ಕನ್ನಡದಲ್ಲಿ ವರದಿ ಪ್ರಕಟವಾದ ನಂತರ ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು ಏಪ್ರಿಲ್ 12ರಂದು ಅಲ್ಲಿಗೆ ಭೇಟಿ ನೀಡಿ, ಅಕ್ರಮ ನಡೆಯುತ್ತಿರುವುದನ್ನು ಮನಗಂಡು ಈ ಕುರಿತು ಎಫ್ಐಆರ್ ದಾಖಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಎಸಿಯವರು ಸೂಚನೆ ಕೊಟ್ಟು ನಾಲ್ಕು ದಿನಗಳು ಕಳೆದರೂ ಈ ಬಗ್ಗೆ ಎಫ್ಐಆರ್ ದಾಖಲಾಗಿರಲಿಲ್ಲ. ಈ ವಿಷಯವನ್ನರಿತ ಎಸಿ ನಾರಾಯಣರಡ್ಡಿಯವರು ಏಪ್ರಿಲ್ 15ರಂದು ಬೆಳಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ, ಕಾರಟಗಿ ತಹಶೀಲ್ದಾರರಿಗೆ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಿಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ತನಿಖಾ ವರದಿ ಇಂದು ಹೈಕೋರ್ಟ್ಗೆ ಸಲ್ಲಿಕೆ
ಮುಷ್ಟೂರು ಗ್ರಾಮದಲ್ಲಿ ನೀಡಲಾಗಿದ್ದ ಮರಳು ಬ್ಲಾಕ್ನಲ್ಲಿ ಅನಧಿಕೃತವಾಗಿ ಅಧಿಕ ಪ್ರಮಾಣದಲ್ಲಿ ಮರಳು ಸಂಗ್ರಹಣೆ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಮತ್ತು ವಿಲೇವಾರಿ ಮಾಡಿ ಸಂಬಂಧಪಟ್ಟವರ ಮೇಲೆ ಪೊಲೀಸ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದು ಎಸಿಯವರು ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಮರಳನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಕೈಗೊಂಡ ಕ್ರಮದ ಬಗ್ಗೆ ಏಪ್ರಿಲ್ 15ರಂದೇ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ವಹಿಸಿರುವ ನಿರ್ಲಕ್ಷ್ಯ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗುತ್ತದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಸಿಯವರು ಬರೆದ ಪತ್ರದಿಂದ ತತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊನೆಗೂ ಅಕ್ರಮ ದಂಧೆಕೋರರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Haveri Rain | ಹಾವೇರಿಯಲ್ಲಿ ಅಕಾಲಿಕ ಮಳೆ ತಂದ ಅವಾಂತರ; ಬಡ ಕುಟುಂಬಗಳ ಬದುಕು ಬೀದಿ ಮೇಲೆ!
ದೂರು ನೀಡಿದವರ ಜೊತೆ ಸಂಧಾನಕ್ಕೆ ಯತ್ನ?:
ಮುಷ್ಟೂರು ಗ್ರಾಮದಲ್ಲಿ ನಡೆಯುತ್ತಿರುವ ಮರಳು ಅಕ್ರಮದ ಬಗ್ಗೆ ದೂರು ನೀಡಿದ ದೂರುದಾರರನ್ನು ಭೇಟಿ ಮಾಡಿ ಸಂಧಾನಕ್ಕೆ ಯತ್ನಿಸಲಾಯಿತು ಎಂದು ತಿಳಿದು ಬಂದಿದೆ. ಆದರೆ ದೂರುದಾರರು ಸಂಧಾನಕ್ಕೆ ಬಂದಿದ್ದ ಅಧಿಕಾರಿಗಳನ್ನು ಭೇಟಿ ಮಾಡಲಿಲ್ಲ ಎನ್ನಲಾಗಿದೆ. ಈ ಹಿಂದೆ ದೂರುದಾರರಿಗೆ ಮರಳು ಅಕ್ರಮದ ದಂಧೆಕೋರರು ಜೀವ ಬೆದರಿಕೆ ಒಡ್ಡಿದ್ದರು.
ಮುಷ್ಟೂರು ಮರಳು ಪಾಯಿಂಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಅಕ್ರಮ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಉದಾಸೀನ ಕಂಡು ಬಂದಿದ್ದರಿಂದ ಪತ್ರ ಮುಖೇನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇಲ್ಲವಾದರೆ ಡಿಸಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಫ್ಐಆರ್ ಆಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹೇಳಿದ್ದಾರೆ.
ವಿಶೇಷ ವರದಿ: ಬಸವರಾಜ ಕರುಗಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ