ಚಾಮರಾಜನಗರ(ಅಕ್ಟೋಬರ್. 19): ದಲಿತ ಕೇರಿಗು ದೇವರ ಉತ್ಸವ ಬರಬೇಕೆಂದು ಒತ್ತಾಯಿಸಿದ್ದ ಹೊನ್ನೂರು ಗ್ರಾಮದ ದಲಿತ ವ್ಯಕ್ತಿಗೆ ವಿಧಿಸಿದ್ದ 50 ಸಾವಿರ ರೂಪಾಯಿ ದಂಡದ ಹಣವನ್ನು ಗ್ರಾಮದ ಮುಖಂಡರು ವಾಪಸ್ ನೀಡಿದ್ದಾರೆ. ನ್ಯೂಸ್ 18 ವರದಿಯ ಪರಿಣಾಮ ಇಂದು ಗ್ರಾಮದ ಮುಖಂಡರ ಸಭೆ ನಡೆಸಿದ ಯಳಂದೂರು ತಹಶೀಲ್ದಾರ್ ಸುದರ್ಶನ್ ಅವರು ದಂಡ ವಿಧಿಸುವುದು ಕಾನೂನುಬಾಹಿರ ಎಂದು ಗ್ರಾಮದ ಮುಖಂಡರಿಗೆ ಎಚ್ಚರಿಕೆ ನೀಡಿ ಹಣ ವಾಪಸ್ ಕೊಡಿಸಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.ಹೊನ್ನೂರು ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಆದರೆ, ನವರಾತ್ರಿ ಸಂದರ್ಭದಲ್ಲಿ ನಡೆಯುವ ಚಾಮುಂಡೇಶ್ವರಿ ಉತ್ಸವ ಕೇವಲ ಸವರ್ಣೀಯರ ಬೀದಿಗಳಲ್ಲಿ ನಡೆಯುತ್ತದೆ. ಈ ತಾರತಮ್ಯ ಸರಿಯಿಲ್ಲ. ಈ ಬಾರಿಯಿಂದ ದಲಿತ ಕೇರಿಗೂ ದೇವರ ಉತ್ಸವ ಬರಬೇಕು ಎಂದು ಗ್ರಾಮದ ನಿಂಗರಾಜು ಎಂಬ ದಲಿತ ವ್ಯಕ್ತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಇದಾದ ಮಾರನೇ ದಿನವೇ ದಲಿತರು ಸೇರಿದಂತೆ ಎಲ್ಲಾ ಕೋಮಿನ ಮುಖಂಡರು ನ್ಯಾಯ ಪಂಚಾಯ್ತಿ ನಡೆಸಿದ್ದರು.
ಸಭೆಯಲ್ಲಿ ನಿಂಗರಾಜು ನನ್ನು ತರಾಟೆಗೆ ತೆಗೆದುಕೊಂಡು ದಲಿತರ ಕೇರಿಗೆ ಉತ್ಸವ ಬರಬೇಕು ಎಂದು ಕೇಳವುದು ತಪ್ಪು ಎಂದು ತೀರ್ಮಾನಿಸಿ 50 ಸಾವಿರದ ನೂರ ಒಂದು ರೂಪಾಯಿ ದಂಡ ವಿಧಿಸಿದ್ದರು. ಕೂಲಿ ಕಾರ್ಮಿಕನಾದ ನಿಂಗರಾಜುವಿಗೆ ದಂಡ ಕಟ್ಟಲು ಅಷ್ಟೊಂದು ಮೊತ್ತದ ಹಣವಿಲ್ಲದೆ ತನ್ನ ಮಡದಿಯ ಒಡವೆಗಳನ್ನು ಒತ್ತೆ ಇಟ್ಟು ದಂಡ ಕಟ್ಟಿದ್ದ. ಈ ಬಗ್ಗೆ ನಿನ್ನೆ ನ್ಯೂಸ್ 18ವರದಿ ಬೆಳಕು ಚಲ್ಲಿತ್ತು.
ನಿನ್ನೆ ನ್ಯೂಸ್ 18 ನೊಂದಿಗೆ ಮಾತನಾಡಿದ್ದ ಯಳಂದೂರು ತಹಸೀಲ್ದಾರ್ ಸುದರ್ಶನ್ ಅವರು, ಸೋಮವಾರ ತಮ್ಮ ಕಚೇರಿಯಲ್ಲಿ ಗ್ರಾಮಸ್ಥರ ಸಭೆ ನಡೆಸಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ತಮ್ಮ ಕಛೇರಿಯಲ್ಲಿ ಗ್ರಾಮದ ಎಲ್ಲಾ ಕೋಮಿನ ಮುಖಂಡರ ಸಭೆ ನಡೆಸಿದರು. ಮೊದ ಮೊದಲು ತಾವು ಯಾವುದೇ ದಂಡ ವಸೂಲಿ ಮಾಡಿಲ್ಲ ಎಂದು ಕೆಲ ಮುಖಂಡರು ವಾದಿಸತೊಡಗಿದರು. ಆದರೆ, ತಹಶೀಲ್ದಾರ್ ಅವರು ಮುಖಂಡರನ್ನು ಉದ್ದೇಶಿಸಿ, ನೀವು ಕಾನೂನು ಕೈಗೆತ್ತಿಕೊಂಡಿದ್ದೀರಿ, ನೀವುಗಳೇ ನ್ಯಾಯಪಂಚಾಯ್ತಿ ನಡೆಸಿ ದಂಡ ವಿಧಿಸುವುದು ಶಿಕ್ಷಾರ್ಹ ಅಪರಾಧ, ಮಾಡಿದ ತಪ್ಪನ್ನು ಒಪ್ಪಿಕೊಂಡು ದಂಡದ ಹಣ ವಾಪಸ್ ನೀಡಬೇಕು. ಇಲ್ಲದಿದ್ದಲ್ಲಿ ದಲಿತ ವ್ಯಕ್ತಿಯಿಂದ ದೂರು ಪಡೆದು ಎಲ್ಲರ ವಿರುದ್ದವು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಅವರು ಎಚ್ಚರಿಕೆಯಿಂದ ಗಲಿಬಿಲಿಗೊಂಡ ಗ್ರಾಮದ ಮುಖಂಡರು ಸಭೆಯಿಂದ ಹೊರಬಂದು ಪ್ರತ್ಯೇಕ ಸಭೆ ನಡೆಸಿ ದಂಡದ ಹಣ ವಾಪಸ್ ನೀಡಲು ತೀರ್ಮಾನಿಸಿದರು. ಬಳಿಕ ತಹಸೀಲ್ದಾರರ ಬಳಿ ಬಂದು ದಂಡ ವಿಧಿಸಿದ್ದನ್ನು ಒಪ್ಪಿಕೊಂಡು ದಂಡದ ಹಣವವನ್ನು ವಾಪಸ್ ನೀಡುವುದಾಗಿ ತಿಳಿಸಿದರು.
ಇದನ್ನೂ ಓದಿ : ನೆರೆಯ ಬಗ್ಗೆ ಸರಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ಡಿಸಿಎಂ ಅಶ್ವತ್ಥನಾರಾಯಣ
ಇನ್ನು ಮುಂದೆ ಗ್ರಾಮದಲ್ಲಿ ಯಾವುದೇ ರೀತಿಯ ಗಲಾಟೆಗಳಿಗೆ ಅವಕಾಶ ಮಾಡಿಕೊಡದಂತೆ ಎಲ್ಲರೂ ಸಾಮರಸ್ಯದಿಂದ ಇರಬೇಕು ಎಂದು ಈ ಸಂದರ್ಭದಲ್ಲಿ ತಹಶೀಲ್ದಾರ್ ಸುದರ್ಶನ್ ಗ್ರಾಮದ ಮುಖಂಡರಿಗೆ ಕಿವಿಮಾತು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ