ಚಾಮರಾಜನಗರ(ಸೆಪ್ಟೆಂಬರ್.03): ಜಿಲ್ಲೆಯ ಹನೂರು ತಾಲೂಕು ಅರೆಕಡುವಿನದೊಡ್ಡಿ ಗ್ರಾಮದಲ್ಲಿ ಮಧ್ಯವರ್ತಿಗಳನ್ನು ನಂಬಿ ಬೀದಿಪಾಲಾಗಿರುವ ಬುಡಕಟ್ಟು ಸೋಲಿಗರು, ಅವರಿವರ ಮನೆಗಳ ಶೌಚಾಲಯ, ದನದ ಕೊಟ್ಟಿಗೆ, ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಹೀನಾಯ ಪರಿಸ್ಥಿತಿಯ ಬಗ್ಗೆ ನ್ಯೂಸ್ 18 ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ 30 ಮಂದಿ ಸೋಲಿಗರಿಗೆ ಅಂಬೇಡ್ಕರ್ ವಸತಿ ಯೋಜಯಡಿ ಮನೆಗಳು ಮಂಜೂರಾಗಿದ್ದವು. ಆದರೆ ಕೆಲವು ಮಧ್ಯವರ್ತಿಗಳು ಸರ್ಕಾರದಿಂದ ಬಿಡುಗಡೆಯಾಗುವ ಹಣದಲ್ಲಿ ತಾವೇ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹಳೆಯ ಮನೆಗಳನ್ನುಒಡೆಸಿ ಹಾಕಿದ್ದರು.
ಹೊಸ ಮನೆಗಳ ಕಾಮಗಾರಿ ಆರಂಭಿಸಿ ಮದ್ಯದಲ್ಲೇ ಕೈಕೊಟ್ಟಿದ್ದರು. ಕೆಲವು ಮನೆಗಳು ತಳಪಾಯ ಹಂತದಲ್ಲೇ ಇದ್ದರೆ ಮತ್ತೆ ಕೆಲವು ಎರಡನೇ ಹಂತದ ಕಾಮಗಾರಿ ಮಾತ್ರ ಆಗಿತ್ತು. ಕೆಲವರ ಹೆಸರು ಆಧಾರ್ ಕಾರ್ಡ್ ಲಿಂಕ್ ಆಗದೆ ಬ್ಲಾಕ್ ಆಗಿತ್ತು. ಹಾಗಾಗಿ ಹಣ ಬಿಡುಗಡೆ ಆಗದೆ ಸೋಲಿಗರು ಅತಂತ್ರರಾಗಿದ್ದರು.
ಹಳೆಯ ಮನೆಗಳನ್ನು ಕೆಡವಿ ಹಾಕಿದ್ದರಿಂದ ವಾಸಿಸಲು ಮನೆಯಿಲ್ಲದೆ ಅಕ್ಕಪಕ್ಕದ ಮನೆಯ ಶೌಚಾಲಯ, ದನಗಳ ಕೊಟ್ಟಿಗೆ, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದರು. ಈ ಬಗ್ಗೆ ಸೆಪ್ಟೆಂಬರ್ 2 ರಂದು ನ್ಯೂಸ್ 18 ವರದಿ ಪ್ರಸಾರ ಮಾಡಿ ಸೋಲಿಗರ ದುಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ನ್ಯೂಸ್ 18 ವರದಿ ಪರಿಣಾಮ ಇಂದು ಬೆಳಿಗ್ಗೆ ಅರೆಕಡುವಿನದೊಡ್ಡಿ ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಭೇಟಿ ನೀಡಿ ಸೋಲಿಗರ ಸಮಸ್ಯೆ ಆಲಿಸಿದರು.
ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಅವರು, ಅರೆಕಡುವಿನ ದೊಡ್ಡಿ ಗ್ರಾಮದ 30 ಮಂದಿ ಸೋಲಿಗರಿಗೆ 2011-12 ರಲ್ಲೆ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾಗಿದೆ ಆದರೆ ಅವರು ಹಣಕಾಸಿನ ತೊಂದರೆಯಿಂದ ಮನೆಗಳನ್ನು ಪೂರ್ಣಗೊಳಿಸದೆ ಅರ್ಧಂಬರ್ಧವಾಗಿವೆ. ಮಧ್ಯವರ್ತಿಗಳನ್ನು ನಂಬಿ ತೊಂದರೆಗೆ ಸಿಲುಕಿದ್ದಾರೆ.
ಮೊದಲ ಹಾಗು ಎರಡನೇ ಹಂತದ ಕಾಮಗಾರಿ ಮುಗಿಸಿದ್ದರೂ ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಎರಡನೇ ಹಂತದ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಹಣ ಬಿಡುಗಡೆ ಮಾಡಿಕೊಡುವಂತೆ ರಾಜೀವಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯಲಾಗುವುದು. 90 ದಿನಗಳ ಒಳಗೆ ಕಾಮಗಾರಿ ಆರಂಭಿಸದ ಕಾರಣ ನಾಲ್ಕು ಮನೆಗಳ ಮಂಜೂರಾತಿ ಬ್ಲಾಕ್ ಆಗಿದೆ. ಹಾಗಾಗಿ ಕೂಡಲೇ ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ಆರ್ಭಟದಿಂದ ಮೈಸೂರು ದಸರಾ ಅತಂತ್ರ; ಸೆಪ್ಟೆಂಬರ್ 8ಕ್ಕೆ ದಸರಾ ಉನ್ನತ ಮಟ್ಟದ ಸಭೆ:
ಅಪೂರ್ಣವಾಗಿರುವ ಕಾಮಗಾರಿಗಳನ್ನು ನಾಳೆಯಿಂದಲೇ ಪುನರಾರಂಭಿಸಬೇಕು, ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ ಎಂದು ಫಲಾನುಭವಿಗಳಿಗೆ ತಿಳಿಸಿದ್ದೇನೆ. ಕಾಮಗಾರಿ ಮುಗಿಸುತ್ತಿದ್ದಂತೆ ಅವರ ಖಾತಗೆ ನೇರವಾಗಿ ಹಣ ಜಮೆಯಾಗಲಿದೆ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಪಿಡಿಒಗೆ ನಿರ್ದೇಶನ ನೀಡಿದ್ದೇನೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ