ಚಾಮರಾಜನಗರ ಜಿಪಂನಲ್ಲಿ ಪ್ರತಿಧ್ವನಿಸಿದ ನ್ಯೂಸ್ 18 ವರದಿ: ಹೊರಗುತ್ತಿಗೆ ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಲು ಕ್ರಮ

ಸರ್ಕಾರ ನಿಗದಿಪಡಿಸಿರುವ ಸಂಬಳ ಕೊಡದೆ ಕಡಿಮೆ ಸಂಬಳ ನೀಡಿ ಶೋಷಣೆ ಮಾಡಲಾಗುತ್ತಿದೆ. ಹಾಜರಾತಿ ಪುಸ್ತಕದಲ್ಲಿ ಹೆಚ್ಚು ಸಂಖ್ಯೆ ನೌಕರರ ಹೆಸರು ತೋರಿಸಲಾಗಿದೆ. ಆದರೆ ನಿಜವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ, ನಿಜವಾಗಿ ಕೆಲಸ ಮಾಡುವವರ ಬದಲು ಹಾಜರಾತಿ ಪುಸ್ತಕದಲ್ಲಿರುವ ಬೇನಾಮಿ ಹೆಸರುಗಳ ಖಾತೆಗೆ ಪಿ.ಎಫ್., ಇಎಸ್ಐ  ಹಣ ಜಮೆ ಮಾಡುವ ಮೂಲಕ ಮೋಸ ವಂಚನೆ ಎಸಗುತ್ತಿರುವ ಬಗ್ಗೆ  ನ್ಯೂಸ್ 18  ಎಳೆ ಎಳೆಯಾಗಿ ವರದಿ ಮಾಡಿ ಬಯಲಿಗೆಳೆದಿತ್ತು.

ಚಾಮರಾಜನಗರದ ಜಿಪಂನಲ್ಲಿ ನ್ಯೂಸ್ 18 ಕನ್ನಡ ವರದಿ ಪ್ರದರ್ಶಿಸಿದ ಸದಸ್ಯ.

ಚಾಮರಾಜನಗರದ ಜಿಪಂನಲ್ಲಿ ನ್ಯೂಸ್ 18 ಕನ್ನಡ ವರದಿ ಪ್ರದರ್ಶಿಸಿದ ಸದಸ್ಯ.

  • Share this:
ಚಾಮರಾಜನಗರ (ಫೆ.02): ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ,  ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿರುವ ಹೊರಗುತ್ತಿಗೆ ಸೇವೆ ಹಗರಣದ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ  ನ್ಯೂಸ್ 18 ವರದಿ ಪ್ರತಿಧ್ವನಿಸಿದೆ. ಅಕ್ರಮ ಎಸಗಿರುವ ಹೊರಗುತ್ತಿಗೆ ಏಜೆನ್ಸಿಗೆ ಮೊದಲು ನೋಟಿಸ್ ನೀಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ  ನಿರ್ಣಯ ಕೈಗೊಂಡಿದೆ. ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಕರ್ತವ್ಯ ಲೋಪ ಎಸಗಿರುವ ನೌಕರರನ್ನು ಅಮಾನತ್ತು ಮಾಡಲು ಸಹ ನಿರ್ಧಾರ ಕೈಗೊಳ್ಳಲಾಗಿದೆ.

ಹೊರಗುತ್ತಿಗೆಯಲ್ಲಿ ಗೋಲ್ ಮಾಲ್ ನಡೆದಿರುವ ಕುರಿತಾದ ನ್ಯೂಸ್ 18 ವರದಿಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ  ಸದಸ್ಯ ಕೆರೆಹಳ್ಳಿ ನವೀನ್ ಹೊರಗುತ್ತಿಗೆ ಸಂಸ್ಥೆ ಸಾಕಷ್ಟು ಅನ್ಯಾಯ ಅಕ್ರಮ ಎಸಗಿದೆ. ದಾಖಲೆಯಲ್ಲಿ ಹೆಚ್ಚಿನ ಸಂಖ್ಯೆಯ ನೌಕರರನ್ನು ತೋರಿಸಲಾಗಿದೆ. ವಾಸ್ತವವಾಗಿ ಕಡಿಮೆ ಸಂಖ್ಯೆಯ ನೌಕರರನ್ನು ನಿಯೋಜಿಸಲಾಗಿದೆ.  ಇದಲ್ಲದೆ ನಿಜವಾಗಿ ದುಡಿಯುತ್ತಿರುವ ನೌಕರರಿಗೆ ಪಿ.ಎಫ್, ಇಎಸ್ಐ ಸೌಲಭ್ಯ ನೀಡುತ್ತಿಲ್ಲ. ಹಾಜರಾತಿ ಪುಸ್ತಕದಲ್ಲಿರುವ ಬೇನಾಮಿ ವ್ಯಕ್ತಿಗಳ ಖಾತೆಗಳಿಗೆ ಪಿಎಫ್, ಇಎಸ್ಐ  ಹಣ ಹೋಗುತ್ತಿದೆ. ಹಾಗೂ ಸರ್ಕಾರ ನಿಗದಿಪಡಿಸಿರುವ ಸಂಬಳ ನೀಡದೆ ಕಡಿಮೆ ಸಂಬಳ ನೀಡಲಾಗುತ್ತಿದ್ದು, ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಈ ಎಲ್ಲಾ ಅಕ್ರಮಗಳನ್ನು ನ್ಯೂಸ್ 18 ಬಯಲಿಗೆ ಎಳೆದಿದೆ ಎಂದರು. ಈ ಅಕ್ರಮದ ಬಗ್ಗೆ ಇವತ್ತೆ ಕ್ರಮ ಆಗಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ದನಿಗೂಡಿಸಿದ  ಬಿಜೆಪಿ ಸದಸ್ಯ ಸಿ.ಎನ್.ಬಾಲರಾಜು ಸಭೆಯಲ್ಲಿ ನ್ಯೂಸ್ 18 ವರದಿ ಪ್ರದರ್ಶಿಸಿ ಬಹಳ ಹಿಂದಿನಿಂದಲೂ ಹೊರಗುತ್ತಿಗೆ ಸೇವೆಯಲ್ಲಿ ಅಕ್ರಮ ಅನ್ಯಾಯ ನಡೆಯುತ್ತಿದೆ. ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಬಹಳ ಹಿಂದೆಯೇ ಹೊರಗುತ್ತಿಗೆ ಅವ್ಯವಹಾರದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ್ದೆ, ಇದುವರೆಗೂ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸದಸ್ಯ ಕಬ್ಬಳ್ಳಿ ಮಹೇಶ್ ಆರೋಪಿಸಿದರು. ಈ  ಬಗ್ಗೆ ಕಾಂಗ್ರೆಸ್ ಸದಸ್ಯ ಬರಗಿ ಚನ್ನಪ್ಪ ಸೇರಿದಂತೆ ಪಕ್ಷಾತೀತವಾಗಿ ಬಹುತೇಕ ಸದಸ್ಯರು ದನಿಗೂಡಿಸಿದರು.

ನ್ಯೂಸ್ 18 ಬಯಲಿಗೆಳೆದ ಹಗರಣದ ಬಗ್ಗೆ ಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು.‌ ಹೊರಗುತ್ತಿಗೆ ಏಜೆನ್ಸಿ ಹಾಗೂ ಆರೋಗ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತವಾಯಿತು. ಹೊರಗುತ್ತಿಗೆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲು ಹಾಗೂ ಸಂಬಂಧಪಟ್ಟ ನೌಕರರನ್ನು ಅಮಾನತು  ಮಾಡಲು  ಸದಸ್ಯರು ಒತ್ತಾಯಿಸಿದರು. ಅಲ್ಲದೆ ಅನ್ಯಾಯಕ್ಕೆ ಒಳಗಾಗಿರುವ ನೌಕರರಿಗೆ ಪೂರ್ತಿ ಸಂಬಳ, ಪಿಎಫ್, ಇಎಸ್ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಮೀಸಲಾತಿ ಕೇಳುವವರಿಗೆ ನಾಚಿಗೆ ಆಗಬೇಕು, 10 ಕೋಟಿಯ ಹೆಲಿಕಾಪ್ಟರ್ ಖರೀದಿಸುವವರಿಗೆ ಮೀಸಲಾತಿ ಕೊಡಬೇಕಾ?: ಸಂಸದ ಶ್ರೀನಿವಾಸ್‌ಪ್ರಸಾದ್ ಪ್ರಶ್ನೆ

ನ್ಯೂಸ್ 18 ನಲ್ಲಿ ವರದಿ ಬಂದ ನಂತರ ಕಚೇರಿ ಸಿಬ್ಬಂದಿಯನ್ನು ಕಳುಹಿಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಸಿ ಶೀಘ್ರದಲ್ಲೇ ವರದಿ ಸಲ್ಲಿಸುವುದಾಗಿ ಡಿಹೆಚ್ಓ  ಡಾ. ಎಂ.ಸಿ ರವಿ ಸಭೆಗೆ ಮಾಹಿತಿ ನೀಡಿದರು. ಆದರೆ ಇದಕ್ಕೆ ಒಪ್ಪದ ಸದಸ್ಯರು ಇಂದೇ ಕ್ರಮ ಆಗಬೇಕು ಎಂದು ಪಟ್ಟು ಹಿಡಿದರು. ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್ ಅವರು  ಸಂಬಂಧಪಟ್ಟ ನೌಕರರನ್ನು ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು,  ಹೊರಗುತ್ತಿಗೆ ಸಂಸ್ಥೆಗೆ ಇವತ್ತೆ ನೋಟೀಸ್ ಜಾರಿ ಮಾಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಕ್ರಮ ವಹಿಸಬೇಕು ಡಿಎಚ್ಓ ಅವರಿಗೆ ಸೂಚಿಸಿದರು.

ಹೊರಗುತ್ತಿಗೆಯಲ್ಲಿ ಕೆಲಸ ಮಾಡೋರೇ ಬೇರೆಯಾಗಿದ್ದು, ಹಾಜರಾತಿ ಪುಸ್ತಕದಲ್ಲಿ ಇರೋರೆ ಬೇರೆಯಾಗಿದ್ದಾರೆ. ನಿಜವಾಗಿ ಕೆಲಸ ಮಾಡ್ತಾ ಇರೋರಿಗೆ ಪಿಎಫ್, ಇಎಸ್ಐ ಸೌಲಭ್ಯ ನೀಡ್ತಾ ಇಲ್ಲ. ಸರ್ಕಾರ ನಿಗದಿಪಡಿಸಿರುವ ಸಂಬಳ ಕೊಡದೆ ಕಡಿಮೆ ಸಂಬಳ ನೀಡಿ ಶೋಷಣೆ ಮಾಡಲಾಗುತ್ತಿದೆ. ಹಾಜರಾತಿ ಪುಸ್ತಕದಲ್ಲಿ ಹೆಚ್ಚು ಸಂಖ್ಯೆ ನೌಕರರ ಹೆಸರು ತೋರಿಸಲಾಗಿದೆ. ಆದರೆ ನಿಜವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ, ನಿಜವಾಗಿ ಕೆಲಸ ಮಾಡುವವರ ಬದಲು ಹಾಜರಾತಿ ಪುಸ್ತಕದಲ್ಲಿರುವ ಬೇನಾಮಿ ಹೆಸರುಗಳ ಖಾತೆಗೆ ಪಿ.ಎಫ್., ಇಎಸ್ಐ  ಹಣ ಜಮೆ ಮಾಡುವ ಮೂಲಕ ಮೋಸ ವಂಚನೆ ಎಸಗುತ್ತಿರುವ ಬಗ್ಗೆ  ನ್ಯೂಸ್ 18  ಎಳೆ ಎಳೆಯಾಗಿ ವರದಿ ಮಾಡಿ ಬಯಲಿಗೆಳೆದಿತ್ತು.

  • ವರದಿ: ಎಸ್.ಎಂ.ನಂದೀಶ್

Published by:HR Ramesh
First published: