news18-kannada Updated:November 9, 2020, 8:35 PM IST
ಆಹಾರ ಧಾನ್ಯ
ವಿಜಯಪುರ(ನವೆಂಬರ್.09): ಮಕ್ಕಳು ಹಸಿವಿನಿಂದಾಗಿ ಶಾಲೆ ತೊರೆಯಬಾರದು ಎಂಬ ಸದುದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಕೊರೋನಾ ಮತ್ತು ಲಾಕ್ ಡೌನ್ ನಂತರ ಕಳೆದ ಜೂನ್ ನಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಬಿಸಿಯೂಟ ಯೋಜನೆಯೂ ಸ್ಥಗಿತಗೊಂಡಿದೆ. ಇದರಿಂದ ಬಡ ಮಕ್ಕಳು ಒಂದು ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್ 18 ಕನ್ನಡ ಹಳಸಿದ ಬಿಸಿಯೂಟ ಹೆಸರಿನಲ್ಲಿ ಮಕ್ಕಳ ಸ್ಥಿತಿಗತಿ ಕುರಿತು ರಿಯಾಲಿಟಿ ಚೆಕ್ ಮಾಡಿತ್ತು ಈ ತಾಂಡಾದ 6ನೇ ತರಗತಿ ವಿದ್ಯಾರ್ಥಿ ಸಂಜು ರಾಠೋಡ, ಮೊದಲು ಬಿಸಿಯೂಟ ಸಿಗುತ್ತಿತ್ತು.ಈಗ ಶಾಲೆ ಬಂದ್ ಇವೆ. ನಮ್ಮ ಅಪ್ಪ ಅಮ್ಮ ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ನಾನು ಇಲ್ಲಿಯೇ ಇದ್ದೇನೆ. ಶಾಲೆ ಪಕ್ಕದಲ್ಲಿದ್ದರೂ ಮೊದಲಿನಂತೆ ಹಾಲು ಸಿಗುತ್ತಿಲ್ಲ. ಒಂದು ಹೊತ್ತಿಗೆ ಸಿಗುತ್ತಿದ್ದ ಉತ್ತಮ ಊಟವೂ ಇಲ್ಲದೇ ಉಪವಾಸ ಇರಬೇಕಾಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾನೆ.
ತಾಂಡಾದ ಪೋಷಕ ಮಲ್ಲು ಚಂದು ರಾಠೋಡ ಎಂಬುವರು ಬಿಸಿಯೂಟ ಈಗ ಬಂದ್ ಆಗಿದೆ. ಮಕ್ಕಳು ಉಪವಾಸದಿಂದ ಸಾಯುತ್ತಿದ್ದಾರೆ. ಬಿಸಿಯೂಟ ಆರಂಭಿಸಿ ಸಹಾಯ ಮಾಡಿ. ತಾಂಡಾದಲ್ಲಿನ ಜನ ನಾಲ್ಕಾರು ತಿಂಗಳು ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿದ್ದಾರೆ. ಇಲ್ಲಿ ಈ ಮಕ್ಕಳನ್ನು ಸಾಕುವವರಿಗೂ ಈಗ ಸಾಕಾಗಿ ಹೋಗಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರು ಹೇಳುವಂತೆ 'ಈ ಸರಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿಯಲ್ಲಿ 183 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗಳು ಬಂದ್ ಆದ ಬಳಿಕ ಮೊದಲ ಕಂತಿನಲ್ಲಿ 21 ದಿನ ಮತ್ತು ಎರಡನೇ ಹಂತದಲ್ಲಿ 37 ದಿನದ ಆಹಾರ ಧಾನ್ಯಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಆದರೆ, ಜೂನ್ ತಿಂಗಳಿಂದ ಬಿಸಿಯೂಟ ಸ್ಥಗಿತವಾಗಿದೆ. ನಮ್ಮ ಶಾಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಹೊಸದಾಗಿ ಮಕ್ಕಳ ಬಿಸಿಯೂಟಕ್ಕಾಗಿ ಆಹಾರ ಧಾನ್ಯ ಬಂದಿದ್ದು, ಶಾಲೆಯಲ್ಲಿಯೇ ಇಡಲಾಗಿದೆ. ಆದರೆ, ಮೇಲಾಧಿಕಾರಿಗಳ ಆದೇಶ ಬಾರದ ಕಾರಣ ಯಾರಿಗೂ ಹಂಚಿಕೆ ಮಾಡಿಲ್ಲ. ನಾವು ಇಲ್ಲಿ 7 ಜನ ಶಿಕ್ಷಕರಿದ್ದು, ನಾಲ್ಕು ಕೋಣೆಗಳಲ್ಲಿ ಮತ್ತು ಮರದ ಕೆಳಗೆ ಈ ಮುಂಚೆ ಪಾಠ ಮಾಡುತ್ತಿದ್ದೇವು. ಆದರೆ, ಈಗ ಶಾಲೆಗೆ ಮಕ್ಕಳು ಬರುವಂತೆ ಇಲ್ಲ. ಈ ಮುಂಚೆ ಮಕ್ಕಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಹಾಲು ಮತ್ತು ಬಿಸಿಯೂಟ ನೀಡುತ್ತಿದ್ದೇವು. ಆದರೆ, ಈಗ ನೀಡುತ್ತಿಲ್ಲ. ಮೇಲಾಧಿಕಾರಿಗಳ ಆದೇಶ ಬಂದ ನಂತರ ಮತ್ತೆ ಬಿಸಿಯೂಟ ಅಥವಾ ಆಹಾರ ಧಾನ್ಯ ವಿತರಿಸುವುದಾಗಿ ಮಕ್ಕಳು ಮತ್ತು ಪೋಷಕರಿಗೆ ತಿಳಿ ಹೇಳುತ್ತಿದ್ದೇವೆ' ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಮಕ್ಕಳ ಸಹಾಯವಾಣಿ ಕೇಂದ್ರದ ವಿಜಯಪುರ ಜಿಲ್ಲಾ ನಿರ್ದೇಶಕಿ ಸುನಂದಾ ತೋಳಬಂದಿ, ಬಿಸಿಯೂಟ ಸ್ಥಗಿತ ಮಾಡಿದ್ದು ತಪ್ಪು. ಇದರಿಂದ ಮಕ್ಕಳು ಮತ್ತಷ್ಟು ಅಪೌಷ್ಠಿಕತೆಯಿಂದ ಬಳಲುವಂತಾಗುತ್ತದೆ. ಪರಿಣಾಮ, ಬಿಸಿಯೂಟ ಯೋಜನೆಯ ಮೂಲ ಉದ್ದೇಶವನ್ನೇ ಕೈ ಬಿಟ್ಟಂತಾಗಿದೆ. ಕೂಡಲೇ ಬಿಸಿಯೂಟ ಯೋಜನೆಯಡಿ ಆಹಾರ ಧಾನ್ಯಗಳನ್ನಾದರೂ ಮಕ್ಕಳಿಗೆ ಒದಗಿಸಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ :
ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ತೀವ್ರ ವಿರೋಧ ; ಕಾಂಗ್ರೆಸ್ ನಿಂದ ಪ್ರತಿಭಟನೆ
ಈ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿಜಯಪುರ ಶಿಕ್ಷಣ ಇಲಾಖೆ ಈಗ ಮಕ್ಕಳಿಗೆ ಆಹಾರ ಧಾನ್ಯ ವಿತರಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಸಂಜೀವ್ ಹುಲ್ಲೊಳ್ಳಿ, ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಿ ಆರ್ ಪಿ ಗಳಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ.
ಇದು ನ್ಯೂಸ್ 18 ಕನ್ನಡ ವರದಿಯ ಇಂಫ್ಯಾಕ್ಟ್ ಆಗಿದ್ದು, ಬಿಸಿಯೂಟ ಅಧಿಕಾರಿ ಕೂಡಲೇ ಸ್ಪಂದಿಸಿದ್ದು ಶ್ಲಾಘನೀಯವಾಗಿದೆ. ಅಷ್ಟೇ ಅಲ್ಲ, ಆದಷ್ಟು ಬೇಗ ಫಲಾನುಭವಿ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಿದರೆ ಅದು ಬಡ ಮಕ್ಕಳಿಗೆ ಅನುಕೂಲವಾಗಲಿದೆ.
Published by:
G Hareeshkumar
First published:
November 9, 2020, 7:59 PM IST