news18-kannada Updated:January 28, 2021, 4:28 PM IST
ತುಳು ಲಿಪಿಯಲ್ಲಿ ಅಂಗಡಿ ಹೆಸರು ಬರೆಸಿರುವುದು.
ಪುತ್ತೂರು; ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಕೂಗು ಕೇಳಲಾರಂಭಿಸಿ ಹಲವು ದಶಕಗಳೇ ಕಳೆದಿವೆ. ಆದರೆ ಇದುವರೆಗೆ ಯಾವ ಪ್ರಯೋಜನವೂ ಆಗಿಲ್ಲ. ಆದರೆ ತುಳುನಾಡಿನ ಮಣ್ಣಿನ ಮಕ್ಕಳು ಮಾತ್ರ ತುಳು ಭಾಷೆಗೆ ತಮ್ಮದೇ ಆದ ಗೌರವ ನೀಡುತ್ತಲೇ ಬಂದಿದ್ದಾರೆ. ಪುತ್ತೂರಿನ ಹೆಣ್ಣುಮಗಳೊಬ್ಬಳು ತನ್ನ ದಿನಸಿ ಅಂಗಡಿಗೆ ತುಳು ಭಾಷೆಯಲ್ಲಿ ನಾಮಫಲಕ ಹಾಕುವ ಮೂಲಕ ತುಳು ಪ್ರೇಮಕ್ಕೆ ನಾಂದಿ ಹಾಡಿದ್ದಾರೆ.
ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಭಾಗದಲ್ಲಿ ತುಳುವರು ಬೇಕಾದಷ್ಟಿದ್ದಾರೆ. ತಮ್ಮ ತುಳು ಭಾಷಾ ಸಂಸ್ಕೃತಿಯನ್ನು ಬೆಳೆಸುವ ಕಾಯಕವನ್ನು ನಡೆಸುತ್ತಿದ್ದಾರೆ. ಭೂಮಿ ತಾಯಿಯ ನೆಚ್ಚಿನ ಮಕ್ಕಳಾದ ತುಳುವರು ಬೇಸಾಯದ ವೃತ್ತಿಯನ್ನೇ ನಂಬಿಕೊಂಡವರು. ದೈವ ನೇಮ ಕೋಲ ಎಂದು ತಮ್ಮ ಬದುಕನ್ನು ಕಟ್ಟಿಕೊಂಡವರು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಆಡು ಭಾಷೆಯಾಗಿಯೇ ಬೆಳೆದುಬಂದಿದೆ. ಬಹುತೇಕ ತುಳುವರಿಗೆ ತುಳು ಭಾಷೆಯ ಲಿಪಿ ಗೊತ್ತಿಲ್ಲ. ಆದರೂ ತುಳು ಭಾಷೆಯನ್ನು ಬೆಳೆಸುತ್ತಿರುವ ತುಳುವರಿಗೆ ಈ ಭಾಷೆ ಬದುಕಿನ ಭಾಷೆಯಾಗಿದೆ. ಗ್ರಾಮೀಣ ಭಾಗದ ಹೆಣ್ಣುಮಗಳು ತಮ್ಮ ಅಂಗಡಿ ಹೆಸರನ್ನು ತುಳು ಭಾಷೆಯಲ್ಲಿ ಬರೆದು ತುಳುವಿನ ತನ್ನತನ ಪ್ರದರ್ಶಿಸಿರುವುದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಪುತ್ತೂರು ತಾಲೂಕಿನ ಕುಡಿಪ್ಪಾಡಿ ಗ್ರಾಮದ ಓಜಾಲ ಎಂಬಲ್ಲಿ ವಾಸವಾಗಿರುವ ಮಿಥುನ್ ಅವರ ಪತ್ನಿ ವಿನುತಾ ತನ್ನ ಹಳ್ಳಿಯ ಅಂಗಡಿಗೆ ತುಳುಭಾಷೆಯಲ್ಲಿ ನಾಮಫಲಕ ಅಳವಡಿಸಿದ್ದಾರೆ. ಶ್ರೀ ಸಾಯಿ ವಾಸುಕಿ ಕಾಂಪ್ಲೆಕ್ಸ್' ಎಂಬ ಕನ್ನಡ ನಾಮಫಲಕದ ಮೇಲ್ಭಾಗದಲ್ಲಿ ತುಳು ಲಿಪಿಯಲ್ಲಿ ಇದೇ ಹೆಸರು ರಾರಾಜಿಸುತ್ತಿದೆ. ಮಲೆಯಾಳಂ ಲಿಪಿಯನ್ನು ಹೋಲುವ ಈ ತುಳು ಲಿಪಿಯನ್ನು ಗಮನಿಸಿ ಇದೇನು ಮಲೆಯಾಳಂ ಭಾಷೆಯಾ ಎಂದು ಅನೇಕರು ಕೇಳಿದ್ದಾರಂತೆ. ಅಂದರೆ ತುಳು ಭಾಷೆಯನ್ನು ಆಡುವ ಮಂದಿಗೆ ತಮ್ಮ ಭಾಷೆಯ ಲಿಪಿ ಗೊತ್ತಿಲ್ಲದಿರುವುದು ಈ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ.
ಇದನ್ನು ಓದಿ: SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಇದೀಗ ಶಾಲಾ ಕಾಲೇಜುಗಳಲ್ಲಿ ತುಳು ಭಾಷೆಯನ್ನು ಐಚ್ಛಿಕವಾಗಿ ಕಳಿಯುವ ಅವಕಾಶ ನೀಡಲಾಗಿದೆ. ಆದರೆ ಇಂದಿನ ಯುವ ಜನತೆ ತುಳು ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂಬುವುದೇ ನೋವಿನ ವಿಚಾರವಾಗಿದೆ. ತುಳು ಗೊತ್ತಿದ್ದರೂ ಅದನ್ನು ಮಾತನಾಡದೆ ಆಂಗ್ಲ ಭಾಷಾ ವ್ಯಾಮೋಹದಿಂದ ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆದರೆ ಮುಂಬಯಿಯಂತಹ ಊರಿನಲ್ಲಿ ತುಳುವರು ತಮ್ಮ ತಾಯಿ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಖುಷಿಯ ವಿಚಾರ ಎನ್ನುವ ಮೆಚ್ಚುಗೆಯ ಮಾತು ತುಳುವರಿಂದ ಕೇಳಿ ಬರಲಾರಂಭಿಸಿದೆ. ತುಳುವಿನ ಬಗೆಗಿನ ಪ್ರೀತಿ, ತುಳು ಭಾಷೆಯ ಮೇಲಿನ ಹೆಮ್ಮೆಯಿಂದ ತುಳು ಲಿಪಿಯಲ್ಲೇ ನಾಮಫಲಕವನ್ನು ಬರೆಸಲಾಗಿದೆ. ನಮ್ಮ ಭಾಷೆಯನ್ನು ನಾವೇ ಮರೆತರೆ ಬೇರೆಯವರು ಅದನ್ನು ಉಳಿಸಲು ಸಾಧ್ಯವೇ. ಹಾಗಾಗಿ ಅಂಗಡಿಗೆ ತುಳು ಭಾಷೆಯಲ್ಲಿ ನಾಮಫಲಕ ಹಾಕಿಸಿದ್ದೇನೆ. ಅಂಗಡಿಗೆ ಬರುವ ಮಂದಿಯಲ್ಲೂ ತುಳುವಿನಲ್ಲಿಯೇ ಮಾತನಾಡುತ್ತೇನೆ. ಮಾತೃ ಭಾಷೆಯ ಬಗ್ಗೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದೇನೆ. ಇದನ್ನು ನೋಡಿಯಾದರೂ ನಮ್ಮ ಮಂದಿ ತುಳು ಭಾಷೆಯನ್ನು ಮರೆಯದೆ ಮಾತನಾಡಲಿ ಎಂಬ ಆಶಾವಾದ ನನ್ನದ್ದಾಗಿದೆ ಎನ್ನುತ್ತಾರೆ ನಾಮಫಲಕ ಅಳವಡಿಸಿದ ಓಜಾಲ ನಿವಾಸಿ ವಿನುತಾ.

ಅಂಗಡಿಗೆ ನಾಮಫಲಕ ಅಳವಡಿಸಿದ ಓಜಾಲ ನಿವಾಸಿ ವಿನುತಾ.
ತುಳು ಭಾಷೆಯನ್ನು ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ-ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಲು ಅವಕಾಶವನ್ನೂ ನೀಡಲಾಗಿದೆ. ಹಲವು ವಿದ್ಯಾರ್ಥಿಗಳು ತುಳು ಭಾಷೆಯನ್ನು ಬೋಧನೆಯ ಭಾಷೆಯಾಗಿಯೂ ಆರಿಸಿಕೊಂಡಿದ್ದಾರೆ. ಈ ನಡುವೆ ತುಳುವನ್ನು ಕನ್ನಡ ಲಿಪಿ ಮೂಲಕವೇ ಕಲಿಸುವ ವ್ಯವಸ್ಥೆಯಿತ್ತು. ಇದೀಗ ತುಳುವಿಗೆ ತುಳುವಿನದೇ ಪ್ರತ್ಯೇಕ ಲಿಪಿಯನ್ನು ಪರಿಚಯಿಸಲಾಗಿದೆ. ಪುತ್ತೂರು ಶಾಸಕರ ಕಚೇರಿ ಸೇರಿದಂತೆ ನಗರದ ಕೆಲವೇ ಪರಿಸರದಲ್ಲಿ ತುಳು ಲಿಪಿಯ ನಾಮಫಲಕಗಳನ್ನು ಹಾಕಲಾಗಿದೆ. ಇದೀಗ ಗ್ರಾಮೀಣ ಭಾಗದಲ್ಲೂ ತುಳು ಲಿಪಿಯ ಟ್ರೆಂಡನ್ನು ಪರಿಚಯಿಸುವ ಕೆಲಸವೂ ಆರಂಭಗೊಂಡಿದೆ.
Published by:
HR Ramesh
First published:
January 28, 2021, 4:28 PM IST