ಏಪ್ರಿಲ್ ಅಂತ್ಯಕ್ಕೆ ಹೊಸ ಮರಳು ನೀತಿ, ಪ್ರತಿ ವಾರಕ್ಕೊಮ್ಮೆ ಮರಳಿನ ದರದ ಪಟ್ಟಿ ಜಿಲ್ಲಾವಾರು ಪ್ರಕಟ; ಸಚಿವ ಮುರುಗೇಶ್ ನಿರಾಣಿ

ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಮುರುಗೇಶ್ ನಿರಾಣಿ, ನನಗೆ ಊಟ ಉಪಾಹಾರ ಮಾಡುವುದಕ್ಕೆ ಟೈಮ್ ಇಲ್ಲ. ದೊಡ್ಡವರು ಹೇಳುವುದಕ್ಕೆ ನಾನು ಉತ್ತರ ಕೊಡೋದಿಲ್ಲ ಎಂದು ಯತ್ನಾಳ್ ಗೆ ನಿರಾಣಿ ಟಾಂಗ್ ನೀಡಿದರು.

ಮುರುಗೇಶ್ ನಿರಾಣಿ.

ಮುರುಗೇಶ್ ನಿರಾಣಿ.

  • Share this:
ಬಾಗಲಕೋಟೆ (ಏ. 05): ಜನ ಸಾಮಾನ್ಯರಿಗೆ ಕೈ ಗೆಟಕುವ ದರದಲ್ಲಿ ಮರಳು ಪೂರೈಸುವ ನಿಟ್ಟಿನಲ್ಲಿ ಇದೇ ಏಪ್ರಿಲ್ ಮಾಸಾಂತ್ಯಕ್ಕೆ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ಬಾಗಲಕೋಟೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದ ಅವರು, ಈ ಹೊಸ ನೀತಿಯನ್ವಯ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಪ್ರತಿ ಟನ್‍ಗೆ 100 ರೂ.ಗಳಿಗೆ ಆಯಾ ಭಾಗದ ಗ್ರಾಮ ಪಂಚಾಯತಿ, ನಗರಸಭೆಯ ಕಟ್ಟಡ ಅನುಮತಿಯಲ್ಲಿ ತೋರಿಸಿದಂತೆ ನಿಗದಿತ ಮರಳು ಪೂರೈಸಲಾಗುವುದು ಎಂದು ತಿಳಿಸಿದರು.

ಸರಕಾರದಿಂದ ಟೆಂಡರ್ ಕರೆಯಲಾದ ಕಾಮಗಾರಿಗಳಿಗೆ ಮರಳು ಸಂಗ್ರಹ ಹೊರತುಪಡಿಸಿ ಗುತ್ತಿಗೆದಾರ ಕಾರ್ಯನಿರ್ವಹಿಸಿದಂತೆ ಹಂತ ಹಂತವಾಗಿ ಪೂರೈಸಲಾಗುವುದು.  ಸಾರ್ವಜನಿಕರಿಗೆ ಉಪಯೋಗಿಸಲ್ಪಡುವಂತ ಕುಡಿಯುವ ನೀರಿನ ಸಂಬಂಧಿಸಿದ ಸ್ಥಳಗಳಲ್ಲಿ ಹಳ್ಳ, ಕೆರೆ ಹಾಗೂ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಮರಳು ತೆಗೆಯದಂತೆ ನಿರ್ಬಂಧ ಹೇರಲಾಗುತ್ತಿದೆ. ಮರಳು ದರವನ್ನು ಪ್ರತಿದಿನ ಬಂಗಾರ, ಬೆಳ್ಳಿ ದರ ಪ್ರಕಟಗೊಂಡಂತೆ ಪ್ರತಿ ವಾರಕ್ಕೊಮ್ಮೆ ಮರಳಿನ ದರದ ಪಟ್ಟಿ ಆಯಾಯ ಜಿಲ್ಲೆಯಲ್ಲಿ ಪ್ರಕಟಿಸಲಾಗುವುದು. ಇದರಿಂದ ಸರಕಾರಕ್ಕೆ ಆದಾಯ ಹೆಚ್ಚುವುದರ ಜೊತೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಮರಳು ದೊರೆಯಲಿದೆ ಎಂದು ತಿಳಿಸಿದರು.

ಕೆಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪಂಚಾಯತಿಗಳೇ ಮರಳುಗಾರಿಕೆಯನ್ನು ನಿಯಂತ್ರಣ ಮಾಡಲಾಗುತ್ತಿದ್ದು, ಇದರಲ್ಲೂ ಕೂಡಾ ಅಕ್ರಮವಾಗದಂತೆ ಸರಕಾರ ಮಧ್ಯೆ ಪ್ರವೇಶಿಸಲಿದೆ. ಮೈನಿಂಗ್ ಮಾಡಲು ಸರಕಾರದಲ್ಲಿ 2500 ಅರ್ಜಿಗಳು ಬಂದಿದ್ದು, ಎಲ್ಲವನ್ನು ಸರಳೀಕೃತಗೊಳಿಸಲಾಗುವುದು. ಪ್ರತಿ ಜಿಲ್ಲೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಗಣಿ ಅದಾಲತ್ ನಡೆಸಲಾಗುತ್ತಿದೆ. ಅದಕ್ಕಾಗಿ ಏಪ್ರಿಲ್ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ಗಣಿಗಾರಿಕೆ ಹಿತದೃಷ್ಟಿಯಿಂದ ಮತ್ತು ಆಡಳಿತಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಖನಿಜ ಭವನವನ್ನು ನಿರ್ಮಿಸಲಾಗುತ್ತಿದೆ. ಗಣಿಗಾರಿಕೆಯಲ್ಲಿ ಅಕ್ರಮ ತಡೆಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೌಕರರಿಗೂ ಸಮವಸ್ತ್ರ, ವಾಕಿಟಾಕಿ  ಪೂರೈಸಲಾಗುತ್ತಿದೆ. ನಿವೃತ್ತ ಯೋಧರನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಅಕ್ರಮ ಮರಳು ತಡೆಗೆ ಅನುಕೂಲವಾಗಲಿದೆ. ಜಿ.ಪಿ.ಎಂ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗಣಿಗಾರಿಕೆಯಲ್ಲಿ ಸ್ಪೋಟಗೊಂಡು ಆಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಸೂಕ್ತವಾದ ತರಬೇತಿ ನೀಡುವ ಸ್ಕೂಲ್ ಆಫ್ ಮೈನಿಂಗ್ ಕೇಂದ್ರವನ್ನು ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಚಿತ್ರದುರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಸಂಡೂರಿನಲ್ಲಿ ಈಗಾಗಲೇ 50 ಎಕರೆ ಖರೀದಿಸಲಾಗಿದೆ. ಏಪ್ರಿಲ್ ಮಾಹೆಯಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಡಿಎಂಎಫ್  ಅನುದಾನ ಇಲಾಖೆಯ 18 ಸಾವಿರ ಕೋಟಿ ಅನುದಾನ, ಡಿಎಂಎಫ್ ಅನುದಾನ 2 ಸಾವಿರ ಕೋಟಿಯಲ್ಲಿ 700 ಕೋಟಿ ಖರ್ಚಾಗಿದೆ. ಉಳಿದ ಅನುದಾನವನ್ನು ಗಣಿ ಬಾಧಿತ ಪ್ರದೇಶಗಳಲ್ಲಿ ಪುನಶ್ಚೇತನ ಕಾರ್ಯಕ್ಕೆ ಅನುದಾನ ಬಳಸಿಕೊಳ್ಳಲಾಗುವುದು. ಡಿಎಂಎಫ್ ಅನುದಾನವನ್ನು ಗಣಿ ಬಾಧಿತ ಪ್ರದೇಶಗಳಲ್ಲಿ ಬಳಸುತ್ತಿರುವಂತಿಲ್ಲ. ಗಣಿ ಬಾಧಿತ ಪ್ರದೇಶಗಳಲ್ಲಿ ಬಳಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಣ್ಣು ಇದ್ದ ಮರಕ್ಕೆ ಕಲ್ಲು ಹೊಡೆಯುತ್ತಾರೆ; ನಿರಾಣಿ

ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಮುರುಗೇಶ್ ನಿರಾಣಿ, ನನಗೆ ಊಟ ಉಪಾಹಾರ ಮಾಡುವುದಕ್ಕೆ ಟೈಮ್ ಇಲ್ಲ. ದೊಡ್ಡವರು ಹೇಳುವುದಕ್ಕೆ ನಾನು ಉತ್ತರ ಕೊಡೋದಿಲ್ಲ ಎಂದು ಯತ್ನಾಳ್ ಗೆ ನಿರಾಣಿ ಟಾಂಗ್ ನೀಡಿದರು.

ಪದೇ ಪದೆ ಸಿಡಿ ವಿಚಾರದಲ್ಲಿ ನಿರಾಣಿ ಹೆಸರು ಪ್ರಸ್ತಾಪಿಸುತ್ತಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಹಣ್ಣು ಇದ್ದ ಮರಕ್ಕೆ ಕಲ್ಲು ಹೊಡೆಯುತ್ತಾರೆ. ಬಡ್ಡ ಇದ್ದ ಮರಕ್ಕೆ ಯಾರೂ ಹೊಡೆಯೋದಿಲ್ಲ ಎಂದ ಅವರು, ನಮಗೆ ಸಿಡಿ ಬಗ್ಗೆ ಏನು ಗೊತ್ತಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಇಲಾಖೆ ನನ್ನ ಉದ್ಯೋಗ, ನನ್ನ ಕ್ಷೇತ್ರದ ಬಗ್ಗೆ ಮಾತ್ರ ವಿಚಾರ ಮಾಡ್ತೀನಿ. ಸಿಡಿ ಬಗ್ಗೆ ಉತ್ತರ ಕೊಡೋಕೆ ದೊಡ್ಡವರಿದ್ದಾರೆ ಎಂದು ಯತ್ನಾಳ್ ವಿರುದ್ಧ ಕಿಡಿಕಾರಿದರು. ಯಾರೋ ಒಬ್ಬರು ಮಾತಾಡಿದ ತಕ್ಷಣ ನಾವು ಆ ಮಟ್ಟಕ್ಕೆ ಹೋಗೋದಿಲ್ಲ. ದೇವರು ಅವರಿಗೆ ಒಳ್ಳೆಯ ಬುದ್ದಿ ಕೊಡಲಿ. ಎಲ್ಲದಕ್ಕೂ ಸಮಯ ಬೇಕು. ಒಂದು ಚಕ್ರ ತಿರುಗೋಕೆ ನಿಂತರೆ ಒಮ್ಮೆಲೆ ನಿಲ್ಲೋದಿಲ್ಲ. ಬಟನ್ ಬಂದ್ ಮಾಡಿದರೂ ಕೆಲ ಹೊತ್ತು ತಿರುಗುತ್ತದೆ. ಅದೇ ರೀತಿ ಕೆಲವರು ಮಾತಾಡುತ್ತಲೇ ಇರುತ್ತಾರೆ. ನಮಗೆ ಹೈಕಮಾಂಡ್ ಹೇಳಿದೆ ಏನು ಮಾತಾಡಬೇಡಿ. ಅದರ ಸಲುವಾಗಿ ನಾವು ಏನು ಮಾತಾಡೋದಿಲ್ಲ. ನಾವು ಇಲಾಖೆಯಲ್ಲಿ ಸಾಕಷ್ಟು  ಕೆಲಸ ಮಾಡುತ್ತಿದ್ದೇವೆ‌. ಯಾರೋ ಏನೋ ಮಾತಾಡಿದರೂ ಎಂದು ನಮ್ಮನ್ನು ನಾಲಾಯಕ್ ಮಾಡಬೇಡಿ. ಕೆಲವು ಮಹಾನ್ ನಾಯಕರು ಇದಾರಲ್ಲ ಅವರ ಬಗ್ಗೆ ಉತ್ತರಿಸುವಷ್ಟು ನಾನು ದೊಡ್ಡವನಲ್ಲ. ಅವರ ಬಗ್ಗೆ ಮಾತಾಡೋಕೆ ಹೋಗೋದಿಲ್ಲ. ಅವರು ದೊಡ್ಡವರು. ಅದನ್ನು ಮಾಡೋದಕ್ಕೆ ಅಂತನೇ ದೊಡ್ಡ ಗ್ಯಾಂಗ್ ಇದೆ. ಅವರು ಆ ಕೆಲಸ ಮಾಡುತ್ತಾ ಹೋಗಲಿ ಎಂದರು.

ಇದನ್ನು ಓದಿ: ಕೋಲಾರದಲ್ಲಿ ಕೊರೋನಾ ಸ್ಪೋಟ; ಅನಾಥಾಶ್ರಮದ 27 ಮಕ್ಕಳಿಗೆ, ಗಾರ್ಮೆಂಟ್ಸ್ ನ 33 ಮಂದಿಗೆ ಒಂದೇ ದಿನ ಸೋಂಕು!

ಅಖಂಡ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೆಂಬುದು ನಮ್ಮ ಒತ್ತಾಯ‌. ಪಂಚಮಸಾಲಿಗರಿಗೆ  ಮಾತ್ರ 2ಎ ಮೀಸಲಾತಿ ಹೋರಾಟ ಅಲ್ಲ ನಮ್ಮದು. ವೀರಶೈವ ಸಮುದಾಯದ ಎಲ್ಲ ಪಂಗಡಗಳಿಗೆ ಸಿಗಬೇಕೆಂಬುದು ನಮ್ಮ ಅಭಿಪ್ರಾಯ. ಇದರ ಜೊತೆಗೆ ಬೇರೆ ಸಮುದಾಯಕ್ಕೂ ಮೀಸಲಾತಿ ಸಿಗಬೇಕು. ವೀರಶೈವ ಸಮುದಾಯದಲ್ಲಿ ಶಿವಸಿಂಪಿಗೆ ಪಂಗಡದವರು ಇದ್ದಾರೆ. ಆ ಸಮುದಾಯದಲ್ಲಿ ಕನಿಷ್ಠ ಜಿಪಂ ಸದಸ್ಯರು ಕೂಡ ಆಗಿಲ್ಲ. ಅಂತಹವರಿಗೆ ನ್ಯಾಯ ಸಿಗಬೇಕು. ಮೀಸಲಾತಿ ಸಿಗಬೇಕು. ಅಂತಹವರ ಧ್ವನಿಯಾಗಿ ನಾವು ನಿಲ್ಲಬೇಕು. ನಾವು ಯಾವ ಸಮುದಾಯಕ್ಕೆ ಸೇರಿರ್ತೇವೆ ಬರಿ ಆ ಸಮುದಾಯದ ಧ್ವನಿ. ಆದರೆ ಇಂತಹವರ ಕಷ್ಟ ಕೇಳೋರ್ಯಾರು? ಯಡಿಯೂರಪ್ಪ ಎಲ್ಲ ಸಮುದಾಯದವರನ್ನು ಸಮಾನ ದೃಷ್ಟಿಯಿಂದ ನೋಡುತ್ತಿದ್ದಾರೆ. ಎಲ್ಲ ಸಮುದಾಯಕ್ಕೂ ಅನುದಾನ ಕೊಟ್ಟಿದ್ದಾರೆ. ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ಲೀಡರ್ ಅಲ್ಲ. ಅವರು ಅಖಂಡ ಕರ್ನಾಟಕದ ಲೀಡರ್ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Published by:HR Ramesh
First published: