ಬೆಂಗಳೂರಿನಲ್ಲಿ ಮನೆ, ರಸ್ತೆ ಬಳಿ ಗಾಡಿ ಪಾರ್ಕಿಂಗ್ಗೆ ಶುಲ್ಕ; ಜನರಿಗೆ ಹೊಸ ಪಾರ್ಕಿಂಗ್ ನೀತಿ ಶಾಕ್
ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ನೂತನ ಪಾರ್ಕಿಂಗ್ ನೀತಿ ಅಳವಡಿಕೆಯಾಗಲಿದ್ದು, ರಸ್ತೆ ಬದಿ ಮತ್ತು ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ. ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸುವ ಮೂಲಾಶಯದೊಂದಿಗೆ ಹೊಸ ನೀತಿ ಜಾರಿಯಾಗಲಿದೆ.
ಬೆಂಗಳೂರು: ಪ್ರತಿಯೊಂದಕ್ಕೂ ದುಪ್ಪಟ್ಟು ತೆರಿಗೆ, ದಂಡ, ಶುಲ್ಕ ಕಟ್ಟಿ ಹೈರಾಣಾಗಿರುವ ಬೆಂಗಳೂರಿನ ಜನರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಕಾದಿದೆ. ರಸ್ತೆ ಬದಿ ಮತ್ತು ಮನೆ ಬಳಿ ನೀವು ವಾಹನ ನಿಲ್ಲಿಸಲು ಶುಲ್ಕ ಪಾವತಿಸಬೇಕಾಗುವ ದಿನಗಳು ಸಮೀಪದಲ್ಲಿವೆ. ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ರೂಪಿಸಿರುವ ನೂತನ ಪಾರ್ಕಿಂಗ್ ನೀತಿಯಲ್ಲಿ ಹಲವು ಅಂಶಗಳನ್ನ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರದ ನಗರ ಅಭಿವೃದ್ಧಿ ಇಲಾಖೆಯು ಈ ಹೊಸ ನೀತಿಯ ಕರಡನ್ನ ಅಂಗೀಕರಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಇದು ಬೆಂಗಳೂರಿನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಹಲವು ಕ್ರಮಗಳಲ್ಲಿ ಹೊಸ ಪಾರ್ಕಿಂಗ್ ನೀತಿಯೂ ಒಂದು ಎಂದು ಹೇಳಲಾಗುತ್ತಿದೆ.
ಹೊಸ ಪಾರ್ಕಿಂಗ್ ನೀತಿಯ ಕರಡು ಪ್ರತಿಯಲ್ಲಿರುವ ಅಂಶಗಳ ಪ್ರಕಾರ, ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಲು ಜನರು ಶುಲ್ಕ ಪಾವತಿಸಬೇಕು. ವಾಣಿಜ್ಯ ಸ್ಥಳಗಳಲ್ಲಿ ಈ ಶುಲ್ಕದ ಪ್ರಮಾಣ ಹೆಚ್ಚಾಗಿರುತ್ತದೆ. ಅಲ್ಲದೇ, ಗಂಟೆಯ ಲೆಕ್ಕದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಮನೆ ಬಳಿ ವಾಹನ ನಿಲ್ಲಿಸುವುದಕ್ಕೂ ಶುಲ್ಕ ಪಾವತಿಸಬೇಕಾಗುತ್ತದೆ. ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್ ಜಾಗವನ್ನ ನಿರ್ಮಿಸಿ ಅಲ್ಲಿ ಹಣ ಪಾವತಿಸಿ ವಾಹನಗಳನ್ನ ನಿಲ್ಲಿಸಲು ಅವಕಾಶ ಮಾಡಿಕೊಡುವ ಯೋಜನೆ ಇದೆ. ಆಯಾಯ ನಗರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ. ಬಿಬಿಎಂಪಿಯಿಂದ ಪ್ರತಿಯೊಂದು ಏರಿಯಾದಲ್ಲೂ ಇದಕ್ಕಾಗಿ ರೂಪುರೇಖೆ ಆಗುವ ಸಾಧ್ಯತೆ ಇದೆ.
ಜನರು ನಿರ್ದಿಷ್ಟ ಹಣ ತೆತ್ತು ನಿರ್ದಿಷ್ಟ ಸ್ಥಳಗಳಲ್ಲಿ ಪಾರ್ಕಿಂಗ್ ಪರ್ಮಿಟ್ ಪಡೆಯಬಹುದು. ಇಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ಸಿಗಬಹುದು. ಆದರೆ, ಸಣ್ಣ ಕಾರುಗಳಿಗೆ ವಾರ್ಷಿಕ 1 ಸಾವಿರ ರೂ ತೆತ್ತು ಪಾರ್ಕಿಂಗ್ ಪರ್ಮಿಟ್ ಪಡೆಬೇಕಾಗುತ್ತದೆ. ದೊಡ್ಡ ಕಾರುಗಳಿಗೆ 5 ಸಾವಿರ ರೂ ವರೆಗೆ ಶುಲ್ಕ ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ. ಫೂಡ್ ಡೆಲಿವರಿ ಬಾಯ್ಸ್, ಕೊರಿಯರ್ ಬಾಯ್ಸ್ ಇತ್ಯಾದಿ ಚಲನೆಯಲ್ಲಿರುವ ವಾಹನ ಸವಾರರಿಗೆ ಒಂದಷ್ಟು ರಿಯಾಯಿತಿಗಳು ಸಿಗಬಹುದು. ಪಾರ್ಕಿಂಗ್ ಪರ್ಮಿಟ್ನ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್ಗಳನ್ನ ನೀಡಲಾಗುತ್ತದೆ ಎಂದು ಪಾರ್ಕಿಂಗ್ ನೀತಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ನೀತಿಯ ಅನುಸಾರ ಹೊಸ ಪಾರ್ಕಿಂಗ್ ನೀತಿ ಯೋಜಿಸಲಾಗಿದೆ. ನಿರೀಕ್ಷೆಯಂತೆ ಸಾರ್ವಜನಿಕರಿಂದ ಈ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಕೊರೋನಾ ಸಂಕಷ್ಟದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಈಗ ಪಾರ್ಕಿಂಗ್ಗೂ ದುಬಾರಿ ಶುಲ್ಕ ಹೇರುತ್ತಿರುವುದು ಅನ್ಯಾಯ ಎಂದು ಅನೇಕ ನಿವಾಸಿಗಳು ನ್ಯೂಸ್18 ಕನ್ನಡದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಕೂಡ ತನ್ನ ಹೊಸ ಪಾರ್ಕಿಂಗ್ ನೀತಿಗೆ ಸಾರ್ವಜನಿಕರಿಂದ ವಿರೋಧ ಬರಬಹುದು ಎಂದು ಅಂದಾಜಿಸಿಯೇ ಹೆಜ್ಜೆ ಇರಿಸಿದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯನ್ನ ತಪ್ಪಿಸುವ ಮೂಲ ಗುರಿಗೆ ಪಾರ್ಕಿಂಗ್ ನೀತಿ ಕೂಡ ಪೂರಕವಾಗಿ ಕೆಲಸ ಮಾಡುವ ಆಶಯ ಇದೆ. ಪಾರ್ಕಿಂಗ್ಗೆ ದುಬಾರಿ ಹಣ ತೆರಬೇಕಾಗುವುದರಿಂದ ಜನರು ತಮ್ಮ ಸ್ವಂತ ವಾಹನ ಬಳಕೆ ಬಿಟ್ಟು ಸಾರ್ವಜನಿಕ ಸಾರಿಗೆಯನ್ನ ಹೆಚ್ಚೆಚ್ಚು ಉಪಯೋಗಿಸಿ ನಗರದ ರಸ್ತೆಗಳಲ್ಲಿ ವಾಹನ ದಟ್ಟನೆ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹೇಳುತ್ತಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ