ಭಾನುವಾರ ರಾತ್ರಿ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ದಿಡೀರ್ ದೆಹಲಿ ಪ್ರಯಾಣ ಬೆಳೆಸಿದ್ದ ಸಿಎಂ ಬಸವರಾಜು ಬೊಮ್ಮಾಯಿ, ಸೋಮವಾರ ರಾತ್ರಿ ಮೋತಿಲಾಲ್ ರಸ್ತೆಯಲ್ಲಿ ಇರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮನೆಗೆ ಸಂಭಾವ್ಯ ಸಚಿವರ ಪಟ್ಟಿ ಹಿಡಿಡುಕೊಂಡು ಹೋಗಿ ಚರ್ಚೆ ನಡೆಸಿದ್ದರು. ಆದರೂ ಕೂಡ ಒಂದು ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಸಂಪುಟ ಪಟ್ಟಿಯನ್ನು ಅಂತಿಮಗೊಳಿಸಿಕೊಂಡೇ ತವರಿಗೆ ಮರಳಲು ಸಂಕಲ್ಪ ತೊಟ್ಟು ರಾಷ್ಟ್ರ ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದ ಸಿಎಂ ಬೊಮ್ಮಾಯಿ, ಹೈಕಮಾಂಡ್ ಹೇಳಿದ ತಿದ್ದುಪಡಿಗಳ ಜೊತೆಗೆ ಕೇಂದ್ರ ನಾಯಕರಿಗೆ ಒಲವಿರುವ ಒಂದಷ್ಟು ಮಂದಿಯನ್ನು ಸಚಿವರ ಪಟ್ಟಿಯಲ್ಲಿ ಸೇರಿಸಿ, ಅಂತೂ ಇಂತು ಒಪ್ಪಿಗೆ ಪಡೆದಿದ್ದಾರೆ, ನಾಳೆ ಅಂದರೆ ಬುಧವಾರ (ಆಗಸ್ಟ್4)ರಂದು 26 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಎರಡು ರಾತ್ರಿ, ಎರಡು ಹಗಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ ಬೊಮ್ಮಾಯಿ ಅವರು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನತ್ತ ಹೊರಡಲಿದ್ದು, ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಅಮಿತ್ ಶಾ ಭೇಟಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಸೂಚನೆ ಮೇರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲು ಸಂಸತ್ ಭವನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದು, ಅಮಿತ್ ಶಾ ಭೇಟಿ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ. ಅಧಿವೇಶನ ನಡೆಯುತ್ತಿರುವ ಕಾರಣ ಸಂಸತ್ ಭವನದ ಬಳಿ ಭೇಟಿ ಮಾಡಿ ಪ್ರಸ್ತುತ ನಡೆದ ಎಲ್ಲಾ ಬೆಳವಣಿಗೆಗಳನ್ನು ವಿವರಿಸಲಿದ್ದು ಆನಂತರ 9.15ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಅಮಿತ್ ಶಾ ಭೇಟಿ ಕಾರಣ ಬೆಂಗಳೂರಿಗೆ ಬರುವುದು ತಡವಾಗಲಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಿಂದ ಬೆಂಗಳೂರಿಗೆ ಬರುವ ಮುನ್ನವೇ ಡಿಪಿಎಆರ್ ಗೆ ನೂತನ ಸಚಿವರುಗಳ ಹೆಸರುಗಳನ್ನು ಕಳುಹಿಸುವ ಸಾಧ್ಯತೆ ಇದೆ ಅಥವಾ ಸಚಿವಾಕಾಂಕ್ಷಿಗಳು ಸರ್ಕಾರದ ವಿರುದ್ದ ಬಂಡಾಯ ಆಗಬಹುದೆಂದು ಸಚಿವರ ಪಟ್ಟಿಯನ್ನು ಬೆಳಿಗ್ಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಸಿಎಂ ಆಪ್ತ ಮೂಲಗಳು ಹೇಳಿವೆ.
8 ಜನ ಹಿರಿಯ ಶಾಸಕರಿಗೆ ನೂತನ ಮಂತ್ರಿ ಮಂಡಲದಿಂದ ಕೋಕ್
ಶ್ರೀನಿವಾಸ ಪೂಜಾರಿ, ಲಕ್ಷಣ ಸವದಿ, ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿದ್ದು, ಡಿಸಿಎಂ ಸ್ಥಾನ ಕಳೆದುಕೊಂಡರೂ ಸಚಿವ ಸ್ಥಾನ ಉಳಿಸಿಕೊಳ್ಳುವಲ್ಲಿ ಗೋವಿಂದ ಕಾರಜೋಳ ಯಶಸ್ವಿಯಾಗಿದ್ದಾರೆ.
ಆರ್. ಶಂಕರ್, ಪ್ರಭು ಚೌಹಾಣ್ ಅವರನ್ನು ಕೈಬಿಡಲಾಗಿದ್ದು, ಡಿಸಿಎಂ ಮತ್ತು ಸಚಿವ ಸ್ಥಾನ ಎರಡನ್ನೂ ಲಕ್ಷಣ ಸವದಿ ಕಳೆದುಕೊಂಡು ಅನಾಥವಾಗಿದ್ದಾರೆ.
ಶ್ರೀರಾಮುಲುಗೆ ಮತ್ತೆ ನಿರಾಸೆ
ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಶ್ರೀರಾಮುಲು ದಿನದಿಂದ ದಿನಕ್ಕೆ ತಮ್ಮ ಸ್ಥಾನವನ್ನು ಬಿಜೆಪಿಯಲ್ಲಿ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಅಲ್ಲದೇ ಮೂಲೆಗುಂಪಾಗುತ್ತಿರುವ ಈ ನಾಯಕ ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದರು ಆದರೆ ಈಗ ಕೇವಲ ಸಚಿವ ಸ್ಥಾನ ಮಾತ್ರ ಶ್ರೀರಾಮುಲು ಅವರ ಬಳಿ ಉಳಿದುಕೊಂಡಿದೆ.
ಇದೆಲ್ಲದರ ನಡುವೆ ಸ್ನೇಹಿತನನ್ನು ಸಂಪುಟಕ್ಕೆ ತೆಗೆದುಕೊಂಡ ಸಿಎಂ ಬೊಮ್ಮಾಯಿ ಅವರು
ಆರ್. ಅಶೋಕ್ ಗೆ ಸಚಿವ ಸ್ಥಾನ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಆರ್. ಅಶೋಕ್ಗೆ ಕೂಡ ನಿರಾಸೆಯಾಗಿದ್ದು, ಇವರು ಸಹ ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ: ಸೈನ್ಯ ಜಮಾವಣೆ ಹಿಂದಕ್ಕೆ ತೆಗೆದುಕೊಂಡ ಭಾರತ, ಚೀನಾ; ಹಾಟ್ ಸ್ಪ್ರಿಂಗ್ ಪ್ರದೇಶದ ಬಗ್ಗೆ ಇನ್ನೂ ಮೂಡದ ಒಮ್ಮತ
ನೂತನ ಸಚಿವರ ಪಟ್ಟಿ ಹಿಡಿದುಕೊಂಡು ಬೆಂಗಳೂರು ತಲುಪಿದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖುದ್ದು ಕರೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ದೂರದ ಊರಿನಲ್ಲಿರುವ ಶಾಸಕರಿಗೆ ಮಂಗಳವಾರ ರಾತ್ರಿಯೇ ಫೋನ್ ಮಾಡಲಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಖುದ್ದಾಗಿ ಕರೆ ಮಾಡಿ ಪ್ರಮಾಣ ವಚನ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ