ಆನೇಕಲ್: ಇತ್ತೀಚೆಗೆ ತಾನೇ ಕರಡಿ ಪರಾರಿಯಾಗಿದ್ದ ವಿಚಾರಕ್ಕೆ ಸುದ್ದಿಯಲ್ಲಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇದೀಗ ಸಂತಸದ ವಿಚಾರ ಒಂದನ್ನು ಜನತೆಗೆ ಅದರಲ್ಲೂ ಪ್ರಾಣಿ ಪ್ರಿಯರಿಗೆ ನೀಡುತ್ತಿದೆ . ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಂಹ ಮತ್ತು ಹುಲಿ ತಲಾ ಎರಡು ಮರಿಗಳಿಗೆ ಜನ್ಮ ನೀಡಿದ್ದು, ನಾಲ್ಕು ಮರಿಗಳು ಆರೋಗ್ಯವಾಗಿವೆ.
ಬೆಂಗಳೂರಿಗೆ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಹೆಣ್ಣು ಹುಲಿ ಅನುಷ್ಕಾ ಎರಡು ಮರಿಗಳು ಮತ್ತು ಸಿಂಹಿಣಿ ಸನಾ ಎರಡು ಮುದ್ದು ಮುದ್ದಾದ ಮರಿಗಳಿಗೆ ಕಳೆದ ಎರಡು ತಿಂಗಳ ಹಿಂದೆ ಜನ್ಮ ನೀಡಿದ್ದು, ಇದೀಗ ನಾಲ್ಕು ಮರಿಗಳು ಆರೋಗ್ಯವಾಗಿವೆ . ಸಿಂಹಿಣಿ ಸನಾ ತನ್ನ ಮರಿಗಳನ್ನು ತಾನೇ ಭಕ್ಷಿಸುವ ಇತಿಹಾಸ ಹೊಂದಿದೆ . ಜೊತೆಗೆ ಹೆಣ್ಣು ಹುಲಿ ಅನುಷ್ಕಾ ತನ್ನ ಮರಿಗಳನ್ನು ಸರಿಯಾಗಿ ಪಾಲನೆ ಮಾಡದೇ ಇದ್ದುದ್ದರಿಂದ ನಾಲ್ಕು ಮರಿಗಳನ್ನು ತಾಯಿಗಳಿಂದ ಪ್ರತ್ಯೇಕಿಸಿ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ವಿಶೇಷ ಆರೈಕೆ ಮಾಡಿ ಪೊಷಣೆ ಮಾಡಲಾಗುತ್ತಿದೆ. ಮೇಕೆ ಹಾಲನ್ನು ಮರಿಗಳಿಗೆ ನೀಡಿ ಅವುಗಳನ್ನ ಜೋಪಾನ ಮಾಡಲಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿ ಹುಲಿ ಮತ್ತು ಸಿಂಹದ ಮರಿಗಳನ್ನು ಮಕ್ಕಳ ರೀತಿಯಲ್ಲಿ ವಿಶೇಷ ಕಾಳಜಿ ವಹಿಸಿ ನೋಡಿಕೊಳ್ಳಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾವನದ ಸಹಾಯಕ ನಿರ್ದೇಶಕ ಡಾ ಉಮಾ ಶಂಕರ್ ತಿಳಿಸಿದ್ದಾರೆ.
ಇದನ್ನು ಓದಿ: ಕೊರೋನಾ ಟಫ್ ರೂಲ್ಸ್ ನಡುವೆಯು ಬೆಂಗಳೂರು ಹೊರವಲಯದ ಚಂದಾಪುರ ಸಂತೆಯಲ್ಲಿ ಜನಜಂಗುಳಿ!
ಇನ್ನೂ ಎರಡು ತಿಂಗಳ ಪ್ರಾಯದ ಸಿಂಹ ಹಾಗೂ ಹುಲಿ ಮರಿಗಳು ನೋಡಲು ತುಂಬಾ ಆಕರ್ಷಕವಾಗಿದ್ದು , ಇವುಗಳ ತುಂಟಾಟ ನಿಜಕ್ಕೂ ಕಣ್ಣಿಗೆ ಹಬ್ಬದಂತಿದೆ. ಅದ್ರಲ್ಲು ಸಿಂಹ ಹಾಗೂ ಹುಲಿ ಮರಿಗಳ ಆಟ- ತುಂಟಾಟ ಪ್ರಾಣಿ ಪ್ರಿಯರಿಗೆ ವಿಶೇಷ ಮನೋರಂಜನೆಯನ್ನ ನೀಡುತ್ತಿವೆ . ತಾಯಿಯಿಂದ ಬೇರ್ಪಟ್ಟರು ಹುಲಿ ಮತ್ತು ಸಿಂಹದ ಮರಿಗಳ ಆಟ ತುಂಟಾದ ಬಲು ಜೋರಾಗಿದೆ. ಸದ್ಯ ಮರಿಗಳು ಆರೋಗ್ಯವಂತವಾಗಿವೆ. ಇವುಗಳ ಆಹಾರವಾಗಿ ಮೇಕೆ ಹಾಲು ಹಾಗೂ ಪೌಷ್ಟಿಕಾಂಶದ ಟಾನಿಕ್‌ಗಳನ್ನು ಮರಿಗಳಿಗೆ ನೀಡಲಾಗುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ಪಾಳಿಯಲ್ಲಿ ಇಬ್ಬರು ಸಿಬ್ಬಂದಿಗಳನ್ನು ಇವುಗಳ ಆರೈಕೆ ಮಾಡಲು ನಿಯೋಜನೆ ಮಾಡಲಾಗಿದೆ ಎಂದು ಬನ್ನೇರುಘಟ್ಟ ಉದ್ಯಾನವನದ ಸಹಾಯಕ ನಿರ್ದೇಶಕ ಉಮಾಶಂಕರ್ ತಿಳಿಸಿದ್ದಾರೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ