ಮಂಗಳೂರು; ಅದೊಂದು ಸುಂದರ ಕುಟುಂಬ. ಮನೆಗೆ ಹೊಸ ಅತಿಥಿ ಬರುವ ಖುಷಿಯಲ್ಲಿ ಇಡೀ ಕುಟುಂಬ ಸಂಭ್ರಮದಲ್ಲಿತ್ತು. ಆದರೆ ಚೊಚ್ಚಲ ಹೆರಿಗೆಯ ಖುಷಿಯಲ್ಲಿ ತೇಲಾಡುತ್ತಿದ್ದ ಆ ಕುಟುಂಬಕ್ಕೆ ಬರ ಸಿಡಿಲು ಬಡಿದಿತ್ತು. ಅದೊಂದು ಅಪರೂಪದ ಸಮಸ್ಯೆಯಿಂದಾಗಿ. ಇನ್ನು ಕಣ್ಣು ಬಿಡದ ಮಗು ಸಾವನ್ನಪ್ಪಿದರೆ, ತಾಯಿ ಕೂಡ ಮಗುವಿನ ಹಾದಿ ಹಿಡಿದಿದ್ದಳು. ಇಂತಹದ್ದೊಂದು ದುರಂತ ನಡೆದಿದ್ದು ಮಂಗಳೂರಿನಲ್ಲಿ.
ಈಕೆಯ ಹೆಸರು ಕಾಜಲ್. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ರಾಮನಗರ ನಿವಾಸಿ. ಇತ್ತೀಚೆಗಷ್ಟೇ ಭವಾನಿ ಶಂಕರ್ ಅನ್ನುವವರೊಂದಿಗೆ ವಿವಾಹವಾಗಿದ್ದರು. ಗರ್ಭಿಣಿಯಾದ ಬಳಿಕ ಬಿ.ಸಿ.ರೋಡ್ ನ್ ಕ್ಲಿನಿಕ್ ಒಂದರಲ್ಲಿ ಚೆಕ್ ಅಪ್ ಗೆ ಹೋಗುತ್ತಿದ್ದರು. ಹೆರಿಗೆಗೆ ಇನ್ನು 6 ದಿನ ಇರುವಷ್ಟರಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣ ಹೆರಿಗೆಗೆ ಅಂತಾ ತುಂಬೆಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಮಧ್ಯರಾತ್ರಿ 1 ಗಂಟೆಗೆ ಹೋಗಿದ್ದರು. ಸಿಜೆರಿಯನ್ ಮಾಡಿದ್ದರೂ ಕೂಡ ಹುಟ್ಟಿದ ಹೆಣ್ಣು ಮಗುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನವಜಾತ ಹೆಣ್ಣು ಮಗು ಸಾವನ್ನಪ್ಪಿತ್ತು. ಇನ್ನು ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ತಾಯಿ ಕಾಜಲ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ರವಾನಿಸಲಾಯ್ತು. ಆದರೆ ಹೃದಯಘಾತವಾಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಕಾಜಲ್ ಕೂಡ ಸಾವನ್ನಪ್ಪಿದರು.
ಚೊಚ್ಚಲ ಹೆರಿಗೆಗೆ ಅಂತಾ ಬಂದು ಮಗುವೊಂದಿಗೆ ಮನೆ ಮಗಳು ಮನೆಗೆ ಬರುತ್ತಾಳೆ ಅಂತಾ ಖುಷಿಯಲ್ಲಿ ಕಾಯುತ್ತಿದ್ದ ಸಂಬಂಧಿಕರಿಗೆ ಬರ ಸಿಡಿಲು ಬಡಿದಂತಾಗಿತ್ತು. ರಾತ್ರಿ ಪೂರ್ತಿ ಆಸ್ಪತ್ರೆಯ ಬಳಿ ಜಮಾಯಿಸಿದ ಸಂಬಂಧಿಕರು ಆಸ್ಪತ್ರೆಯ ನಿರ್ಲಕ್ಷದಿಂದ ಈ ದುರಂತವಾಗಿದೆ ಅಂತಾ ತರಾಟೆ ತೆಗೆದುಕೊಂಡರು.
ಇದನ್ನು ಓದಿ: ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ವಸತಿ ಯೋಜನೆ ರಾಜಕೀಯ ಮೇಲಾಟ, ಬಾರದ ಅನುದಾನ, ಫಲಾನುಭವಿಗಳು ಹೈರಾಣು
ಆದರೆ ಇವರ ಆರೋಪವನ್ನು ಆಸ್ಪತ್ರೆ ತಳ್ಳಿಹಾಕಿದೆ. ಗರ್ಭಕೋಶದಲ್ಲಿ ತುಂಬಿಕೊಂಡ ನೀರಿಗೆ ರಕ್ತ ಹೋಗಿ ಶ್ವಾಸಕೋಶ ಸೇರಿದಂತೆ ಎಲ್ಲಾ ಕಡೆ ರಕ್ತ ಸ್ರಾವವಾಗುತ್ತೆ. ಅದನ್ನು ತಡೆಯಲು ಹಲವು ಗಂಟೆಗಳ ಯತ್ನ ಮಾಡಿ ತಜ್ಞ ವೈದ್ಯರು ಕೆಲಸ ಮಾಡಿದ್ದಾರೆ. ಗರ್ಭಕೋಶಕ್ಕೆ ರಕ್ತ ನುಗ್ಗುತ್ತಿದ್ದ ರಕ್ತನಾಳವನ್ನು ಬ್ಲಾಕ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಅಂತಾ ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ