ಕಾರವಾರ: ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಿಖರ ಬೋಟ್ ಹೌಸ್ ಸೇರ್ಪಡೆಯಾಗಿದೆ. ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಟಚ್ ಸಿಕ್ಕಿದಂತಾಗಿದ್ದು, ಕಾರವಾರದ ಕಾಳಿ ನದಿಯಲ್ಲಿ ಕ್ರೂಸ್ ಪ್ರವಾಸಿ ಬೋಟ್ ಓಡಾಡಲಿದೆ. ಇನ್ಮುಂದೆ ಕಾರವಾರಕ್ಕೆ ಬರುವ ಪ್ರವಾಸಿಗರು ವಿನೂತನ ಶೈಲಿಯ ಬೋಟ್ ಮೂಲಕ ವಿಹಾರ ಮಾಡಿ ಕಾಲ ಕಳೆಯಬಹುದು.
ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಿಖರ ಹೌಸ್ ಬೋಟ್ ಸೇರ್ಪಡೆ ಗೊಂಡಿದ್ದು ಪ್ರವಾಸೋದ್ಯಮ ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಖಾಸಗಿ ಸಹಭಾಗಿತ್ವದಲ್ಲಿ ಮುಂದಾಗಿದೆ. ಕಾರವಾರ ನಗರದ ಕಾಳಿ ರಿವರ್ ಗಾರ್ಡನ್ ವತಿಯಿಂದ ಶಿಖರ ಹೆಸರಿನ ಕ್ರೂಸ್ ಬೋಟ್ ಇನ್ಮುಂದೆ ಇಲ್ಲಿನ ನದಿ ಮತ್ತು ಸಮುದ್ರ ಸಂಗಮದಲ್ಲಿ ಓಡಾಡಲಿದೆ. ವಿನೂತನ ಶೈಲಿಯ ಕ್ರೂಸ್ ಬೋಟನ್ನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಲೋಕಾರ್ಪಣೆಗೊಳಿಸಿದ್ರು.
ಪ್ರಕೃತಿ ಸೌಂದರ್ಯದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಇಲ್ಲಿನ ಸುಂದರ ಪ್ರದೇಶಗಳನ್ನ ಕಂಡು ಖುಷಿಪಡ್ತಾರೆ. ಹೀಗಾಗಿ ಕೇರಳ ಮಾದರಿಯ ಕ್ರೂಸ್ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೇವೆ ನೀಡಲು ಯೋಜನೆ ರೂಪಿತಗೊಂಡಿದೆ. ಒಟ್ಟು 25 ಪ್ರವಾಸಿಗರ ಸಾಮರ್ಥ್ಯ ಹೊಂದಿರುವ ಶಿಖರ ಕ್ರೂಸ್ ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿದೆ. ಕ್ರೂಸ್ ಒಳಗಡೆ ವಿಭಿನ್ನವಾಗಿ ರೂಪಿಸಲಾಗಿದೆ. ಉನ್ನತಮಟ್ಟದ ವುಡ್ ಮತ್ತು ಬಿದಿರಿನ ಬೊಂಬುಗಳನ್ನ ಬಳಸಿ ಅಂದಗೊಳಿಸಲಾಗಿದೆ.
ಇನ್ನೂ ಕ್ರೂಸ್ ಮೂಲಕ ವಿಹರಿಸಿದರೆ ನದಿಯ ಇಕ್ಕೆಲಗಳಲ್ಲಿ ಬೆಳೆದಿರುವ ಕಾಂಡ್ಲಾವನಗಳ ಹಸಿರು ರಾಶಿಯನ್ನ ನೋಡಲು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಅಲ್ಲದೇ ಸುತ್ತಮುತ್ತಲ ಪ್ರದೇಶಗಳನ್ನ ವೀಕ್ಷಿಸಬಹುದಾಗಿದೆ. ಕಾಳಿನದಿಯು ಕಡಲು ಸೇರುವ ಅಳಿವೆ ಪ್ರದೇಶದ ಬಳಿ ಇರುವ ಐಲ್ಯಾಂಡ್ ಬಳಿ ತೆರಳಬಹುದು. ಚರಿತ್ರಾರ್ಹವಾಗಿರುವ ಕಾಳಿಮಾತಾ ದೇವಾಲಯ, ಕಾಂಡ್ಲಾ ಬೋರ್ಡ್ ವಾಕ್ ಬಳಿ ತೆರಳಬಹುದಾಗಿದೆ.
ಇನ್ನೊಂದು ಕಡೆ ಹುಟ್ಟುಹಬ್ಬದ ಆಚರಣೆ, ಕಾರ್ಪೋರೆಟ್ ವಲಯದ ಸಭೆ, ಗೋಷ್ಠಿಗಳನ್ನ ಈ ಶಿಖರ ಯಾನದ ನಡುವೆಯೆ ನಡೆಸಲು ಅವಕಾಶವಿದೆ. ಹೀಗಾಗಿ ಪ್ರವಾಸಿಗರು ಪುಲ್ ಖುಷ್ ಆಗೋದ್ರಲ್ಲಿ ಸಂಶಯವಿಲ್ಲ. ಕಾರವಾರದಲ್ಲಿ ಬೋಟ್ ಹೌಸ್ ಪ್ರವಾಸೋದ್ಯಮ ಇದೆ ಮೊದಲು. ನೂತನವಾಗಿ ಪರಿಚಯವಾದ ಬೋಟ್ ಹೌಸ್ ಪ್ರವಾಸೋದ್ಯಮ ಯಾವ ರೀತಿ ಪ್ರವಾಸಿಗರನ್ನ ಸೆಳೆಯಲಿದೆ ಎನ್ನೋದು ಕೂಡಾ ಮುಂದೆ ಕಾದು ನೋಡಬೇಕು, ಪಕ್ಕದಲ್ಲೆ ಗೋವಾ ರಾಜ್ಯದಲ್ಲಿ ಕ್ರೂಸ್ ಬೋಟ್ ಪ್ರವಾಸೋದ್ಯಮ ಹೆಚ್ಚು ಪ್ರಸಿದ್ದಿ ಪಡೆದಿದ್ದು ಪ್ರವಾಸಿಗರ ನ್ನ ಆಕರ್ಷಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ