• Home
  • »
  • News
  • »
  • district
  • »
  • ಬಾಣಂತಿಗೆ ಕೊರೋನಾ ದೃಢ ; ಆಸ್ಪತ್ರೆ ಬೀಗ ಮುರಿದು ಹೆಂಡತಿ, ಮಗು ಕರೆದೋಗಿದ್ದ ಗಂಡನ ಪತ್ತೆ

ಬಾಣಂತಿಗೆ ಕೊರೋನಾ ದೃಢ ; ಆಸ್ಪತ್ರೆ ಬೀಗ ಮುರಿದು ಹೆಂಡತಿ, ಮಗು ಕರೆದೋಗಿದ್ದ ಗಂಡನ ಪತ್ತೆ

ಬೆಳ್ತಂಗಡಿ ಸರಕಾರಿ ಆಸ್ಪತ್ರೆ

ಬೆಳ್ತಂಗಡಿ ಸರಕಾರಿ ಆಸ್ಪತ್ರೆ

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ಸಂಖ್ಯೆ ಎರಡುವರೆ ಸಾವಿರದ ಗಡಿ ದಾಟಿದೆ

  • Share this:

ಮಂಗಳೂರು(ಜುಲೈ. 17): ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಗೇಟು ಮುರಿದು ಮಹಿಳೆಯ ಗಂಡ, ಮಗು ಹಾಗೂ ಮಹಿಳೆಯನ್ನು ಮನೆಗೆ ಕರೆದೊಯ್ದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೋಲೀಸರು ಬಾಣಂತಿ ಮಹಿಳೆ ಮತ್ತು ಮಗುವನ್ನು ಮಹಿಳೆಯ ಗಂಡನ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. 


ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಬೆಳ್ತಂಗಡಿಯ ನಾವೂರು ಗ್ರಾಮದ ಮಹಿಳೆ ಜುಲೈ 15 ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಅವರ‌ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಬುಧವಾರ ರಾತ್ರಿಯೇ ಮಹಿಳೆಗೆ ಹೆರಿಗೆಯಾಗಿದ್ದು, ಗುರುವಾರ ಸಂಜೆ ವೇಳೆಗೆ ಅವರ ಗಂಟಲು ದ್ರವದ ವರದಿ ಬಂದಿದೆ‌. ವರದಿಯಲ್ಲಿ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ವಿಷಯವನ್ನು ಮಹಿಳೆ ತನ್ನಗಂಡನಿಗೆ ತಿಳಿಸಿದ್ದು, ಆತ ರಾತ್ರಿ ವೇಳೆ ಆಸ್ಪತ್ರೆಯ ಗೇಟನ್ನು ಮುರಿದು ಮಹಿಳೆ ಹಾಗೂ ಮಗುವನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ.


ಮಗು ಮತ್ತು ಮಹಿಳೆಯನ್ನು ಆತ ಎಲ್ಲಿಗೆ ಕರೆದೊಯ್ದಿದ್ದಾನೆ ಎನ್ನುವ ಸಂಶಯದ ಹಿನ್ನಲೆಯಲ್ಲಿ ಘಟನಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೋಲೀಸ್  ಠಾಣೆಗೆ ದೂರು ನೀಡಲಾಗಿತ್ತು. ಪೋಲೀಸರು ಬಾಣಂತಿ ಮಹಿಳೆಯ ಗಂಡನನ್ನು ಪತ್ತೆಹಚ್ಚಿದ್ದು, ಮಗು ಮತ್ತು ಬಾಣಂತಿ ಮಹಿಳೆ ಆತನ ಮನೆಯಲ್ಲೇ ಇರುವುದನ್ನು ದೃಢಪಡಿಸಿದ್ದಾರೆ.


ಬಾಣಂತಿ ಮಹಿಳೆ ಹಾಗು ಮಗುವನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಆಗಮಿಸಿದ ಒಟ್ಟು ನಾಲ್ಕು ಮಂದಿ ಮಹಿಳೆಯರಲ್ಲೂ ಕೊರೋ‌ನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ  ಆಸ್ಪತ್ರೆಯ ವೈದ್ಯಾಧಿಕಾರಿಗೂ ಕೊರೋನಾ ಪಾಸಿಟಿವ್ ದೃಢವಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಸೀಲ್ ಡೌನ್ ಮಾಡಲಾಗಿದೆ.


ಇದನ್ನೂ ಓದಿ : ಪೌಷ್ಟಿಕ ಆಹಾರ ಕಾಳಸಂತೆಯಲ್ಲಿ ಮಾರಾಟ ; ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿದ ಅಂಗನವಾಡಿ ಕಾರ್ಯಕರ್ತೆ


ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ಸಂಖ್ಯೆ ಎರಡುವರೆ ಸಾವಿರದ ಗಡಿ ದಾಟಿದ್ದು, ಕೊರೋನಾದಿಂದಾಗಿ ಒಟ್ಟು 63 ಜನ ಸಾವನ್ನಪ್ಪಿದ್ದಾರೆ. ನಗರ ಭಾಗದಲ್ಲಿ ಸೀಮಿತಗೊಂಡಿದ್ದ ಕೊರೋನಾ ಇದೀಗ ಗ್ರಾಮೀಣ ಭಾಗಕ್ಕೂ ಪಸರಿಸುತ್ತಿರುವುದು ಆತಂಕಕ್ಕೂ ಕಾರಣವಾಗಿದೆ.


ಜಿಲ್ಲೆಯಾದ್ಯಂತ ಮಳೆಯೂ ಬಿರುಸು ಪಡೆದುಕೊಂಡಿದೆ. ಮಳೆ ಹಿನ್ನಲೆಯಲ್ಲಿ ಶೀತ-ಜ್ವರವೂ ಸಾಮಾನ್ಯವಾಗಿದ್ದು ,ಇವುಗಳೂ ಕೊರೋನಾ ರೂಪ ಪಡೆದುಕೊಳ್ಳುವುದೇ ಎನ್ನುವ ಭೀತಿಯೂ ಇದೀಗ ಸಾರ್ವಜನಿಕ ವಲಯದಲ್ಲಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು