Naveen parents: ‘ಕೊನೇ ಬಾರಿ ನನ್ನ ಮಗನ ಮುಖ ತೋರಿಸಿ’ ಅಗಲಿದ ಮಗನ ನೆನೆದು ಹೆತ್ತ ಕರುಳಿನ ಆಕ್ರಂದನ

ಉಕ್ರೇನ್ -ರಷ್ಯಾ ಯುದ್ಧದಲ್ಲಿ ಬಲಿಯಾದ ನವೀನ್ ಪಾರ್ಥಿವ ಶರೀರಕ್ಕಾಗಿ ಪೋಷಕರು ಕಾಯುತ್ತ ಕುಳಿತಿದ್ದಾರೆ. ಗಣ್ಯರ ಬಂದು ಹೋಗ್ತಿದ್ದಾರೆ ಹೊರತು ಮೃತ ದೇಹ ತರಿಸೋ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ

ನವೀನ್​ ತಾಯಿ, ಸಚಿವ ಪ್ರಹ್ಲಾದ್ ಜೋಶಿ

ನವೀನ್​ ತಾಯಿ, ಸಚಿವ ಪ್ರಹ್ಲಾದ್ ಜೋಶಿ

  • Share this:
ಹಾವೇರಿ (ಮಾ.2): ವೈದ್ಯನಾಗುವ ಕನಸು ಕಂಡು ಉಕ್ರೇನ್ ಗೆ ಹಾರಿ ಎಂಬಿಬಿಎಸ್ ಅಭ್ಯಾಸದಲ್ಲಿ ನಿರತನಾಗಿದ್ದ ನವೀನ್ ಸಾವನ್ನಪ್ಪಿ ಎರಡು ದಿನಗಳಾಗಿದೆ. ರಷ್ಯಾದ ಯುದ್ಧ ದಾಹಕ್ಕೆ ಬಲಿಯಾದ ನವೀನ್ ಪಾರ್ಥಿವ ಶರೀರ ಇನ್ನೂ ತಾಯಿನಾಡನ್ನು ತಲುಪಿಲ್ಲ. ಮೃತ ದೇಹ  ಯಾವಾಗ ಬರತ್ತೆ ಅನ್ನೋದರ ನಿಖರ ಮಾಹಿತಿಯೂ ಬಂದಿಲ್ಲ. ಮಗನ ಪಾರ್ಥಿವ ಶರೀರಕ್ಕೆ ಪೋಷಕರು ಕಾಯ್ತಿದ್ದಾರೆ. ಇದರ ನಡುವೆ ಗಣ್ಯರ ದಂಡು ಚಳಗೇರಿ ಗ್ರಾಮಕ್ಕೆ ಹರಿದು ಬರ್ತಿದೆ. ಮೃತ ನವೀನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೋಷಕರಿಗೆ ಸಾಂತ್ವನ ಹೇಳಿ ವಾಪಸ್ಸಾಗುತ್ತಿದ್ದಾರೆ. ನವೀನ್ ಸಾವಿನ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಬೆಳಿಗ್ಗೆಯಿಂದಲೂ ರಾಜ್ಯದ ವಿವಿಧೆಡೆಯಿಂದ ಮಠಾಧೀಶರು, ಜನಪ್ರತಿನಿಧಿಗಳು ನವೀನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ರು.

ನವೀನ್ ಪೋಷಕರಿಗೆ ಗಣ್ಯರ ಸಾಂತ್ವನ

ಇಂದು ಚಳಗೇರಿ ಗ್ರಾಮಕ್ಕೆ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಂಸದ ಜಿಎಂ ಸಿದ್ದೇಶ್, ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ, ಹಾವೇರಿ ಡಿಸಿ ಮತ್ತು ಸಿಇಒ ಸೇರಿ ಹಲವಾರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ನವೀನ್ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಜನಪ್ರತಿನಿಧಿಗಳ ಎದುರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಹ್ಲಾದ್​ ಜೋಶಿ ಎದುರೇ ಆಕ್ರೋಶ ಸ್ಫೋಟ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಯವರ ಮುಂದೆ ಉಕ್ರೇನ್​ನಲ್ಲಿ ಸಿಲುಕಿರೋ ಮತ್ತೊಬ್ಬ ವಿದ್ಯಾರ್ಥಿ ಅಮಿತ್ ತಂದೆ ವೆಂಕಟೇಶ್ ಅಳಲು ತೋಡಿಕೊಂಡರು. ದಯಮಾಡಿ ನಮ್ಮ ಮಕ್ಕಳನ್ನು ಕರೆತನ್ನಿ. ನಮ್ಮ ನೋವು ನಮಗೆ ಗೊತ್ತು ನೀವು ಸುಮ್ಮನಿರಿ ಎಂದು ಅಮಿತ್  ತಂದೆ ವೆಂಕಟೇಶ್ ರಾಣೆಬೆನ್ನೂರು ಶಾಸಕ ಅರುಣ್ ಪೂಜಾರಿ ಬಾಯಿ ಮುಚ್ಚಿಸಿದರು. ನಮ್ಮ ಮಕ್ಕಳ ಜೀವಕ್ಕೆ ಅಪಾಯವಿದೆ. ವಿದೇಶಾಂಗ ಇಲಾಖೆ ಅಧಿಕಾರಿಗಳು ಗಡಿಯಲ್ಲಿದ್ದಾರೆ. ನವೀನ್ ಅಣ್ಣ ಹರ್ಷ ಗೋಲ್ಡ್ ಮೆಡಿಲಿಸ್ಟ್ ಆಗಿದ್ದಾನೆ. ನವೀನ್ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಆತನ ಕುಟುಂಬಕ್ಕೆ ಸೂಕ್ತವಾಗಿ ಸ್ಪಂದಿಸುವಂತೆ ವೆಂಕಟೇಶ್ ಮನವಿ ಮಾಡಿದರು.

ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಆಘಾತ; Ukraine​ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವು; ತಕ್ಷಣವೇ Kharkiv ತೊರೆಯುವಂತೆ ಭಾರತೀಯರಿಗೆ ಸೂಚನೆ

ಪಾರ್ಥಿವ ಶರೀರ ತರೋಕೆ ಪ್ರಯತ್ನ ಮಾಡ್ತಿದ್ದೇವೆ

ನವೀದ್ ಪೋಷಕರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಅಮಾಯಕ ವಿದ್ಯಾರ್ಥಿಯೋರ್ವ ಉಕ್ರೇನ್ ನಲ್ಲಿ ಬಲಿಯಾಗಿದ್ದಾನೆ. ಸಹಜವಾಗಿ ಪೋಷಕರಲ್ಲಿ ಆಕ್ರೋಶವಿದೆ. ಪಾರ್ಥಿವ ಶರೀರ ತರಿಸಿಕೊಡುವಂತೆ ಕೇಳಿಕೊಂಡಿದ್ದೇವೆ. ಜೈಶಂಕರ್ ಅವರ ಜೊತೆ ಮಾತನಾಡಿದ್ದೇನೆ. ಮೃತ ದೇಹ ತರೋ ಪ್ರಕ್ರಿಯೆ ಆರಂಭಗೊಂಡಿದೆ.

ಕೆಲ ಗಂಟೆಯಾದ್ರೂ ಯುದ್ಧ ನಿಲ್ಲಿಸಬೇಕೆಂದು ಆಗ್ರಹಿಸಿದ್ದೇವೆ. 12 ಸಾವಿರಕ್ಕೂ ಅಧಿಕ ಜನರನ್ನು ಕರೆತಂದಿದ್ದೇವೆ. ಕೊನೆ ವ್ಯಕ್ತಿಯೂ ಸುರಕ್ಷಿತವಾಗಿ ಬರಬೇಕೆಂಬುದು ನಮ್ಮ ಆಶಯವಾಗಿದೆ. ಸರ್ವ ಪ್ರಯತ್ನ ನಡೆಸಿದ್ದೇವೆ. ಇದೊಂದು ಅನಿರೀಕ್ಷಿತ ಘಟನೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯರನ್ನು ಕರೆತರಲು. ಯುದ್ಧ ನಿಲ್ಲೋದನ್ನು ಕಾಯ್ತಿದ್ದೇವೆ. ನಮ್ಮ ಮಕ್ಕಳನ್ನು ಕರೆತರೋಕೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸ್ತಿದೇವೆ.

ಅಂದಾಜು ಇನ್ನೂ 8 ಸಾವಿರ ಜನರನ್ನು ಕರೆತರಬೇಕಿದೆ

ನವೀನ್ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಮತ್ತು ಪರಿಹಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ನವೀನ್ ಸಹೋದರ ವಿದ್ಯಾಭ್ಯಾಸ ಪೂರೈಸಲಿ, ಯಾವುದಾದರೂ ಕಂಪನಿಯಲ್ಲಿ ಕೆಲಸ ಕೊಡಿಸುವ ಕ್ರಮ ಕೈಗೊಳ್ಳಬೇಕು. ಈಗಿನ ಆದ್ಯತೆ ಸುರಕ್ಷಿತವಾಗಿ ಕರೆತರೋದು ನಮ್ಮ ಮೊದಲ ಆದ್ಯತೆ. ನಂತರ ಅವರ ಭವಿಷ್ಯದ ಬಗ್ಗೆ ಆಲೋಚಿಸ್ತೇವೆ. ಎಂದು ಜೋಶಿ ತಿಳಿಸಿದ್ದಾರೆ.

ಮಗನ ಶವವನ್ನಾದ್ರೂ ತಂದು ಕೊಡಿ ಎಂದ ತಾಯಿ

ಭಾರತ ಮಾತೆಯ ಮಡಿಲಲ್ಲಿ ಪ್ರತಿಭೆಗಳಿಗೆ ಬೆಲೆಯೇ ಇಲ್ಲ ಎಂದು ನವೀನ್ ತಾಯಿ ವಿಜಯಲಕ್ಷ್ಮೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೀ ಜಾತಿಯ ಆಧಾರದ ಮೇಲೆ ಇಲ್ಲಿ ಎಲ್ಲ ನಡೀತಿದೆ. ಇಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ರು ಸೀಟ್ ಇಲ್ಲಿ ಸಿಗಲಿಲ್ಲ. ನನ್ನ ಮಗನಿಗೆ ಆದ ಸ್ಥಿತಿ  ಇನ್ನೊಬ್ಬರ ಮಕ್ಕಳಿಗೆ ಆಗಬಾರದು. ಆಲ್ಲಿದ್ದ ಮಕ್ಕಳನ್ನಾದ್ರು ಸುರಕ್ಷಿತವಾಗಿ ಕರೆ ತನ್ನಿ ಎಂದು ಪ್ರಹ್ಲಾದ್ ಜೋಶಿ ಗೆ ನವೀನ್ ತಾಯಿ ವಿಜಯಲಕ್ಷ್ಮಿ  ವಿನಂತಿ‌ ಮಾಡಿದರು. ಪುತ್ರನ  ಸಾವಿನಿಂದ ನಿನ್ನೆಯಿಂದಲೂ ನವೀನ್ ತಾಯಿ ನಿರಂತರ ಕಣ್ಣೀರು ಹಾಕುತ್ತಿದ್ದಾರೆ. ಪುತ್ರನ ಸಾವಿನ ಸುದ್ದಿಕೇಳಿ ಎನು ಮಾತಾಡಬೇಕು ಎಂದು ಗೊತ್ತಾಗುತ್ತಿಲ್ಲ. ಪುತ್ರನ ಶವವನ್ನಾದ್ರು ಸಕಾಲಕ್ಕೆ ವಾಪಸ್ಸು ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Ukraineನಿಂದ ಸುರಕ್ಷಿತವಾಗಿ ಬಂದ ಮಗಳು; ಖುಷಿಯಿಂದ ತಂದೆ ಮಾಡಿದ ಕಾರ್ಯ ಮೆಚ್ಚುವಂತಹದ್ದು

ಕೇಂದ್ರ ಸರ್ಕಾರದ ವಿರುದ್ಧ ಎಸ್.ಆರ್.ಪಾಟೀಲ ಕಿಡಿ

ಕೇಂದ್ರ ಸರ್ಕಾರದ ವಿಳಂಬ ಧೋರಣೆಯೇ ಈ ರೀತಿಯ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ ಎಂದು ವಿಧಾನ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ ಆರೋಪಿಸಿದ್ದಾರೆ. ಯುದ್ಧದ ಭೀತಿ ಬಗ್ಗೆ ಭಾರತ ಅರ್ಥ ಮಾಡಿಕೊಳ್ಳಬೇಕಿತ್ತು. ಹಾಗಾಗಿದ್ದರೆ ಇಂತಹ ಘಟನೆ ನಡೀತಿರಲಿಲ್ಲ. ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಘೋಷಿಸಬೇಕು. ನವೀನ್ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲು ಎಸ್ ಆರ್ ಪಾಟೀಲ ಆಗ್ರಹಿಸಿದ್ದಾರೆ.
Published by:Pavana HS
First published: