Bandipura Tiger Reserved Forest: ಹೆದ್ದಾರಿ ಅಗಲೀಕರಣಕ್ಕೆ ಪ್ರಸ್ತಾಪ; ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಮತ್ತೆ ಕುತ್ತು!

ಬಂಡೀಪುರದಂತಹ ಸ್ಥಳಗಳು ಇಡೀ ದೇಶದ ಭೌಗೋಳಿಕತೆಯ ಶೇಕಡ ಒಂದರಷ್ಟರಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಹಾಗಾಗಿ ಹೆದ್ದಾರಿ ಅಗಲೀಕರಣದ  ಪ್ರಸ್ತಾಪಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲೇಕೂಡದು. ಸದ್ಯದ ಕಾನೂನುಗಳೂ ಸಹ ಈ ಅಗಲೀಕರಣವನ್ನು ಯಾವುದೇ ರೀತಿಯಲ್ಲಿಯೂ ಸಮ್ಮತಿಸುವುದಿಲ್ಲ ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

ಬಂಡೀಪುರ ಕಾಡಿನ ರಸ್ತೆ ಮೇಲೆ ಕರಡಿಗಳು ಹಾದು ಹೋಗುತ್ತಿರುವುದು.

ಬಂಡೀಪುರ ಕಾಡಿನ ರಸ್ತೆ ಮೇಲೆ ಕರಡಿಗಳು ಹಾದು ಹೋಗುತ್ತಿರುವುದು.

  • Share this:
ಚಾಮರಾಜನಗರ ( ಆ.24): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (National Highway Authority) ದೇಶದ ಅತ್ಯಂತ ಪ್ರಮುಖ ವನ್ಯಜೀವಿ ಆವಾಸ ಸ್ಥಾನವಾದ ಬಂಡೀಪುರದಲ್ಲಿ (Bandipura)  ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಹೆದ್ದಾರಿ ಪ್ರಾಧಿಕಾರವು ಗುಂಡ್ಲುಪೇಟೆ ಯಿಂದ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ  ಹೆದ್ದಾರಿ ಸಂಖ್ಯೆ -181 ರಲ್ಲಿ  (ಹಿಂದೆ 67 ಆಗಿತ್ತು) ಮೇಲು ಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗಿನ ಹೆದ್ದಾರಿ (13.2 ಕಿ.ಮೀ)  ಅಗಲೀಕರಣಕ್ಕಾಗಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಸುಮಾರು 24 ಎಕರೆಗಳಷ್ಟು ಜಾಗವನ್ನು ನೀಡಬೇಕೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆಯನ್ನು ಅನುಮತಿ ಕೋರಿದೆ.

ಈಗಾಗಲೇ 2 ಹೆದ್ದಾರಿಗಳು (181 ಮತ್ತು 766) ಬಂಡೀಪುರ ಹುಲಿ ಸಂರಕ್ಷಣಾಧಾಮದ ಮೂಲಕ ಹಾದು ಹಾದು ಹೋಗುತ್ತಿವೆ. ಈ ಹೆದ್ದಾರಿಗಳಿಂದ ಈಗಾಗಲೇ ವನ್ಯಜೀವಿಗಳ ಸ್ವಚ್ಛಂದ ಓಡಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಅತಿಯಾದ ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ, ಘನ ತ್ಯಾಜ್ಯ ಇತ್ಯಾದಿಗಳಿಂದಾಗುವ ಮಾಲಿನ್ಯ, ವನ್ಯಜೀವಿಗಳ ವರ್ತನೆಗಳ ಮೇಲೆ ಪ್ರಭಾವ ಮತ್ತು ಇತರ ಹಲವಾರು ತೊಂದರೆಗಳನ್ನು ವನ್ಯಜೀವಿಗಳು ಈ ಹೆದ್ದಾರಿಗಳಿಂದ ಎದುರಿಸುತ್ತಿವೆ. ಹುಲಿಯೂ ಸೇರಿದಂತೆ  ಆನೆ, ಚಿರತೆ, ಜಿಂಕೆ, ಕಡವೆ, ಕಾಡು ಕುರಿ, ಮುಚ್ಚ, ಕಿರುಬ ಬೆಕ್ಕು, ಹಾಗು ಇನ್ನಿತರೇ ಪ್ರಾಣಿಗಳು ಅತೀ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ. ಲೆಕ್ಕವಿರದಷ್ಟು  ಉಭಯಚರಜೀವಿಗಳು, ಸರೀಸೃಪಗಳು, ಹಕ್ಕಿಗಳು ತಮ್ಮ ಜೀವ ಕಳೆದುಕೊಂಡಿವೆ.

ಹೆದ್ದಾರಿಗಳಿಂದಾಗುತ್ತಿರುವ  ಈ ತೊಂದರೆಗಳ ಪರಿಣಾಮಗಳನ್ನು ಗಮನಿಸಿದ ರಾಜ್ಯ ಹೈಕೋರ್ಟ್ , ತುರ್ತು ವಾಹನಗಳು ಮತ್ತು 16 ಸಾರ್ವಜನಿಕ ಬಸ್‍ಗಳನ್ನು ಹೊರತುಪಡಿಸಿ ರಾತ್ರಿಯ ವೇಳೆ ಈ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು ಈಗಾಗಲೇ ಈ ಆದೇಶ ಜಾರಿಯಲ್ಲಿದೆ.

ಪ್ರಸ್ತಾಪಿತ ಹೆದ್ದಾರಿ ಅಗಲೀಕರಣವು Environment Impact Assessment Notification of 2006ರ ಪ್ರಕಾರ “ಎ” ದರ್ಜೆಯ ಯೋಜನೆಯಾಗಿದ್ದು, ಇದಕ್ಕೆ ಪರಿಸರದ ಮೇಲಿನ ಪರಿಣಾಮ ಮಾಪನ (Environment Impact Assessment) ಮಾಡುವುದು ಕಡ್ಡಾಯವಾಗುತ್ತದೆ . ಇದಲ್ಲದೆ, ಬಂಡೀಪುರ ಹುಲಿ ಸಂರಕ್ಷಣಾಧಾಮದ “ಪರಿಸರ ಸೂಕ್ಷ್ಮವಲಯದ ಅಧಿಸೂಚನೆ” ಯು ಬಂಡೀಪುರದೊಳಗೆ ರಸ್ತೆ ಅಗಲೀಕರಣ ಮಾಡಲು ಅದರ ಪರಿಣಾಮದ ಮಾಪನವನ್ನು ಖಡ್ಡಾಯಗೊಳಿಸಿದೆ ಆದರೆ ಹೆದ್ದಾರಿ ಪ್ರಾಧಿಕಾರವು ಸಲ್ಲಿಸಿರುವ ಅರ್ಜಿಯಲ್ಲಿ ಪರಿಸರದ ಮೇಲಿನ ಪರಿಣಾಮ ಮಾಪನದ (Environment Impact Assessment) ಮಾಡುವ ಅವಶ್ಯಕತೆಯಿಲ್ಲವೆಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನುತ್ತಾರೆ ಪರಿಸರವಾದಿಗಳು.

ಬಂಡೀಪುರ ಹುಲಿ ಸಂರಕ್ಷಣಾಧಾಮವು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಣಾ ಧಾಮಕ್ಕೆ ಹೊಂದಿಕೊಂಡಿದೆ. ಮತ್ತು ಇದೇ ರಸ್ತೆ ಮಧುಮಲೈ ಅರಣ್ಯದ ಮೂಲಕವೂ ಹಾದು ಹೋಗುತ್ತದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಖಂಡಿತವಾಗಿ ಮಧುಮಲೈ ಒಳಗೂ ರಸ್ತೆ ಅಗಲೀಕರಣದ ಪ್ರಸ್ತಾಪ ಮುಂದಿಡಲಿದೆ. ಸಧ್ಯಕ್ಕೆ ಮಧುಮಲೈ ಒಳಗಿನ ರಸ್ತೆ ಅಗಲೀಕರಣದ ಪ್ರಸ್ತಾಪವನ್ನು ಉದ್ದೇಶಪೂರ್ವಕವಾಗಿಯೇ ಬದಿಗಿಡಲಾಗಿದೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉಪಸಮಿತಿಯು ಸಂರಕ್ಷಿತ ಪ್ರದೇಶಗಳ ರಸ್ತೆಗಳ ಕುರಿತು ಸ್ಪಷ್ಟವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಇದರ ಪ್ರಕಾರ “ರಾಷ್ಟ್ರೀಯ ಉದ್ಯಾನ ಮತ್ತು ಮಹತ್ವದ ಹುಲಿ ಆವಾಸ ಸ್ಥಾನಗಳ ಮೂಲಕ ಹಾದುಹೋಗುವ ರಸ್ತೆಗಳನ್ನು ಇದ್ದ ಸ್ಥಿತಿಯಲ್ಲಿಯೇ ಕಾಪಾಡಿಕೊಳ್ಳಬೇಕು ಇರುವ ರಸ್ತೆಗಳನ್ನು ಇರುವಷ್ಟೇ ಅಗಲದಲ್ಲಿ ಉತ್ತಮ  ರೀತಿಯಲ್ಲಿ ನಿರ್ವಹಿಸಬೇಕು. ಯಾವುದೇ ರೀತಿಯ ಅಗಲೀಕರಣ ಅಥವಾ ಉತ್ತಮೀಕರಣ ಮಾಡಕೂಡದು. ಈಗಾಗಲೇ ಇರುವ ಡಾಂಬರು ರಸ್ತೆಯಾದರೆ ಅದನ್ನು ಹಾಗೆಯೇ ನಿರ್ವಹಿಸಬೇಕು. ಡಾಂಬರು ಸಮೇತ ಅಗಲೀಕರಣ ಯಾವ ಕಾರಣಕ್ಕೂ ಮಾಡುವಂತೆಯೇ ಇಲ್ಲ" ಎಂದು ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು, ಇಲ್ಲಿನ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರು, ಪ್ರಾಧಿಕಾರದ ಮೈಸೂರಿನ ಅಸಿಸ್ಟಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರಿಗೆ 2021ರ ಮೇ 29 ರಂದು ಬರೆದಿರುವ ಪತ್ರದಲ್ಲಿ “ಅರಣ್ಯ ಇಲಾಖೆಯ ಯಾವುದೇ ಅಡಚಣೆ ಇಲ್ಲದೆ ಕೆಲಸ ಆರಂಭಿಸಬೇಕು” ಎಂದಿದ್ದಾರೆ. ಸರಕಾರಿ ಸ್ವಾಮ್ಯದ ಸಂಸ್ಥೆಯೊಂದು ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು “ಅರಣ್ಯ ಇಲಾಖೆಯಿಂದಾಗುವ ಅಡಚಣೆ” ಎಂದು ಭಾವಿಸುವುದು ನಿಜಕ್ಕೂ ದುರಂತ. ಸಂಸತ್ತು ಅಂಗೀಕರಿಸಿದ ಕಾನೂನಿನನ್ವಯ ಬಂಡೀಪುರದಂತಹ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಕರ್ತವ್ಯ. ಪ್ರಾಧಿಕಾರದ ಈ ನಡೆ ದೇಶದ ವನ್ಯಜೀವಿ ಆವಾಸಸ್ಥಾನಗಳ ಕುರಿತಾದ ಅದರ ಧೋರಣೆಗೆ ಸಾಕ್ಷಿಯಾಗಿದೆ.

"ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಮತ್ತು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಆನೆಗಳ ಉತ್ತಮ ಆವಾಸಸ್ಥಾನವಾಗಿದೆ ಈ ತರಹದ ಪ್ರದೇಶಗಳು ದೇಶದ ಭೌಗೋಳಿಕ ಪ್ರದೇಶದ ಶೇಕಡ 1ರಷ್ಟು ಭಾಗದಲ್ಲಿ ಮಾತ್ರ ಉಳಿದಿವೆ. ಇಂತಹ ಪ್ರದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇನ್ನು ಹೆಚ್ಚು ಹೆಚ್ಚು ನಿರ್ಮಾಣದ ಅಗತ್ಯವಿಲ್ಲ," ಎನುತ್ತಾರೆ ವನ್ಯಜೀವಿ ವಿಜ್ಞಾನಿ  ಡಾ.ಸಂಜಯ್ ಗುಬ್ಬಿ.

ಇದನ್ನು ಓದಿ: ಗಂಧದನಾಡಿನ ಬದಲಾಗಿ ಬಂದೂಕಿನ ನಾಡು ಎಂದು ಬದಲಿಸಲಿ: ಬಿಜೆಪಿಗೆ ಸಂಸದ ಡಿ‌.ಕೆ.ಸುರೇಶ್ ವ್ಯಂಗ್ಯ

"ವನ್ಯಜೀವಿಗಳಿಗಲ್ಲದೆ ಬಂಡೀಪುರ ಅರಣ್ಯವು  ಕಬಿನಿ, ಮೊಯಾರ್ ನದಿಗಳಿಗೆ ಮತ್ತು ಕಬಿನಿ ಮತ್ತು ನುಗು ಜಲಾಶಯಗಳಿಗೆ ಅತೀ ಅಗತ್ಯವಾದ ಜಲಾನಯನ ಪ್ರದೇಶ. ಈ ನದಿಗಳು ಮತ್ತು ಜಲಾಶಯಗಳ ಮೇಲೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾವಿರಾರು ಕುಟುಂಬಗಳು ಕೃಷಿ, ಕುಡಿಯುವ ನೀರು ಮತ್ತು ಇತರ ಉಪಯೋಗಗಳಿಗೆ ಅವಲಂಬಿತವಾಗಿವೆ. ಹಾಗಾಗಿ ವನ್ಯಜೀವಿ ಸಂರಕ್ಷಣೆ ಮತ್ತು ನಮ್ಮ ನೀರಿನ ಭದ್ರತೆಯ ದೃಷ್ಟಿಕೋನದಿಂದ ಈ ಹೆದ್ದಾರಿ ಅಗಲೀಕರಣ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು  ಎಂದು ಬಂಡೀಪುರ ಹೆದ್ದಾರಿ ಗಳಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ.ಸಂಜಯ್ ಗುಬ್ಬಿ ಆಗ್ರಹಿಸಿದ್ದಾರೆ.

ಒಟ್ಟಾರೆ ಬಂಡೀಪುರದಂತಹ ಸ್ಥಳಗಳು ಇಡೀ ದೇಶದ ಭೌಗೋಳಿಕತೆಯ ಶೇಕಡ ಒಂದರಷ್ಟರಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಹಾಗಾಗಿ ಹೆದ್ದಾರಿ ಅಗಲೀಕರಣದ  ಪ್ರಸ್ತಾಪಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲೇಕೂಡದು. ಸದ್ಯದ ಕಾನೂನುಗಳೂ ಸಹ ಈ ಅಗಲೀಕರಣವನ್ನು ಯಾವುದೇ ರೀತಿಯಲ್ಲಿಯೂ ಸಮ್ಮತಿಸುವುದಿಲ್ಲ ಎಂಬುದು ವನ್ಯಜೀವಿ ತಜ್ಞರ ಅಭಿಮತವಾಗಿದೆ.

ವರದಿ: ಎಸ್.ಎಂ.ನಂದೀಶ್ 
Published by:HR Ramesh
First published: