ಪುತ್ತೂರು(ನವೆಂಬರ್.21): ರಾಷ್ಟ್ರೀಯ ಹೆದ್ದಾರಿ 75 ಮತ್ತೆ ಹದಗೆಟ್ಟಿದೆ. ಮಂಗಳೂರು-ಬೆಂಗಳೂರು ಸಂಪರ್ಕಿಸುವ ಈ ಹೆದ್ದಾರಿ ನಾದುರಸ್ತಿ ಕಂಡು ನಾಲ್ಕೈದು ತಿಂಗಳು ಕಳೆದರೂ ಈವರೆಗೂ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿ ಮಾಡಲು ಹೆದ್ದಾರಿ ಇಲಾಖೆ ಕ್ರಮ ಕೈಗೊಂಡಿಲ್ಲ. ಮಂಗಳೂರಿನ ಪಡೀಲ್ ನಿಂದ ಅಡ್ಡಹೊಳೆವರೆಗೆ ಗುಂಡಿ ಮುಚ್ಚಿದ ಹೆದ್ದಾರಿಯ ದುರಸ್ತಿಗಾಗಿ 16 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದರೂ, ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದ ಕಾರಣ ಈ ರಸ್ತೆಯಲ್ಲಿ ಸಂಚಾರ ಪ್ರಯಾಣಿಕರಿಗೆ ಮತ್ತೆ ಸಂಚಕಾರ ತಂದಿದೆ. ಬಂದರು ನಗರಿ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಏಕೈಕ ಹೆದ್ದಾರಿಯಲ್ಲಿ ಇದೀಗ ಮತ್ತೆ ಹೊಂಡ-ಗುಂಡಿಗಳ ಆಗರವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆದ್ದಾರಿಯ ಹೆಚ್ಚಿನ ಕಡೆಗಳಲ್ಲಿ ಹೊಂಡ-ಗುಂಡಿಗಳು ಎದ್ದಿದ್ದ ಹಿನ್ನಲೆಯಲ್ಲಿ ದುರಸ್ತಿ ಕಾಮಗಾರಿಗಾಗಿ 16 ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯ ಮಾಡಲು ಮೊದಲ ಆದ್ಯತೆಯನ್ನು ನೀಡಲಾಗಿದೆ. ಬಳಿಕ ಅಗತ್ಯ ಬಿದ್ದ ಕಡೆಗಳಲ್ಲಿ ಮರು ಡಾಂಬರೀಕರಣ ಮಾಡಲು ಯೋಜನೆಯಲ್ಲಿ ಸೂಚಿಸಲಾಗಿದೆ.
ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ ರಸ್ತೆ ಸಂಪೂರ್ಣ ದುರಸ್ತಿಯಾಗಿದ್ದು, ಕಾಮಗಾರಿಯನ್ನು ಕಳೆದ ಎರಡು ತಿಂಗಳ ಹಿಂದೆಯೇ ಆರಂಭಗೊಂಡಿದೆ. ಬಿ.ಸಿ.ರೋಡ್, ಮೆಲ್ಕಾರ್, ಕಲ್ಲಡ್ಕ, ನರಹರಿ ಬೆಟ್ಟ, ದಾರಸಕೋಡಿ, ಸೂರಿಕುಮೇರು, ಮಾಣಿ, ನೆಲ್ಯಾಡಿ ಹಾಗೂ ಅಡ್ಡಹೊಳೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಯ ಕಾಮಗಾರಿಯನ್ನು ಒಂದು ಹಂತದಲ್ಲಿ ಮುಗಿಸಲಾಗಿದೆ. ಆದರೆ, ಮೆಲ್ಕಾರ್, ನರಹರಿ ಬೆಟ್ಟ ಹಾಗೂ ಕಲ್ಲಡ್ಕ ಪರಿಸರದಲ್ಲಿ ಮತ್ತೆ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರ ತಂದಿದೆ.
ಇದನ್ನೂ ಓದಿ : Accident: ನಿಶ್ಚಿತಾರ್ಥಕ್ಕೆ ಹೊರಟಿದ್ದ ಮಿನಿ ಬಸ್ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು
ಪ್ರತಿ ದಿನವೂ ರಸ್ತೆಯಲ್ಲಿರುವ ಬೃಹತ್ ಗುಂಡಿಗಳಿಗೆ ಘನ ವಾಹನಗಳು ಬಿದ್ದು ಕೆಟ್ಟು ಹೋಗುತ್ತಿರುವ ಘಟನೆಗಳು ನಡೆಯುತ್ತಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಿಲುಕುವಂತಾಗಿದೆ.
ಹೆದ್ದಾರಿ ಇಲಾಖೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರನಿಗೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಮೊದಲು ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಆದರೆ ಹೆಚ್ಚು ಗುಂಡಿಗಳಿರುವ ಜಾಗಗಳನ್ನು ಬಿಟ್ಟು ಇತರ ಕಡೆಗಳಲ್ಲಿ ಕಾಮಗಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ