ತುಮಕೂರು: ಇಡೀ ಪ್ರಪಂಚದಲ್ಲಿ ಮಹಾನ್ ಸುಳ್ಳುಗಾರ, ಮೋಸಗಾರ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ಭಾರತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಎಂದು ತುರುವೇಕರೆ ಕ್ಷೇತ್ರದ ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ ಅವರು ಆರೋಪಿಸಿದ್ದಾರೆ. ತುರುವೇಕೆರೆ ಪಟ್ಟಣದಲ್ಲಿ ಮಾತನಾಡಿದ ಎಂ ಟಿ ಕೃಷ್ಣಪ್ಪ, ಅಚ್ಚೇ ದಿನ್ ಆಯೇಗಾ ಎಂಬಿತ್ಯಾದಿ ನೂರಾರು ಹುಸಿ ಭರವಸೆಗಳನ್ನು ನೀಡಿ ಜನರನ್ನು ನಂಬಿಸಿ ಮತ ಪಡೆದ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ತಮ್ಮ ಯಾವುದೇ ಭರವಸೆಗಳನ್ನು ಈಡೇರಿಸದೆ ಜನವಿರೋಧಿ, ರೈತವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ, ಬೆಲೆಏರಿಕೆ ಮಾಡುವ ಮೂಲಕ ದೇಶದ ಜನರಿಗೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಜನಸಾಮಾನ್ಯರು, ಕೂಲಿ ಕಾರ್ಮಿಕರು, ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಶತಕ ದಾಟಿ ಮುನ್ನಡೆಯುತ್ತಿದೆ. ಅಡುಗೆ ಅನಿಲ 850 ರೂಪಾಯಿಯ ಗಡಿ ದಾಟಿದೆ. ಉಚಿತವಾಗಿ ಗ್ಯಾಸ್ ವಿತರಿಸುತ್ತೇನೆಂದು ಘೋಷಿಸಿದ್ದ ನರೇಂದ್ರ ಮೋದಿಯವರು ಸಿಲಿಂಡರ್ ಬೆಲೆ ಹೆಚ್ಚಿಸಿ ಮಧ್ಯಮ ವರ್ಗದ ಜನರಿಗೆ ಭಾರೀ ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ವ್ಯಂಗ್ಯವಾಡಿದರು.
ಇದನ್ನೂ ಓದಿ: Suhas L Yathiraj- ಎಂಜಿನಿಯರ್, ಐಎಎಸ್, ಒಲಿಂಪಿಕ್ ಪದಕ; ಹಾಸನದ ಲಾಳನಕೆರೆಯಿಂದ ಸುಹಾಸ್ ಯಶೋಗಾಥೆ
ಜೊತೆಗೆ, ಸರ್ಕಾರದ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಬಂಡವಾಳಶಾಹಿಗಳ ಕೈಗೆ ದೇಶವನ್ನು ನೀಡುತ್ತಿದ್ದಾರೆ. ವಿದ್ಯುತ್ ಅನ್ನು ಖಾಸಗೀಕರಣ ಮಾಡಲು ಹೊರಟಿರುವ ಮೋದಿಯವರ ನಿರ್ಧಾರದಿಂದ ಅನ್ನದಾತ ತೀವ್ರ ಸಂಕಷ್ಟ ಎದುರಿಸಬೇಕಿದೆ. ರೈತರಿಗೆ ಉಚಿತವಾಗಿ ದೊರೆಯುತ್ತಿರುವ ವಿದ್ಯುತ್ ಇನ್ನು ಮುಂದೆ ಉಚಿತವಾಗಿ ಸಿಗುವುದಿಲ್ಲ. ಕಾರ್ಪೋರೇಟ್ ಕಂಪನಿಗಳು ನಿಗದಿಪಡಿಸಿದ ದರ ನೀಡಿ ವಿದ್ಯುತ್ ಪಡೆಯಬೇಕಾದ ಸ್ಥಿತಿ ಎದುರಾಗುತ್ತದೆ ಎಂದು ಎಂ ಟಿ ಕೃಷ್ಣಪ್ಪ ಅವರು ಬೇಸರ ವ್ಯಕ್ತಪಡಿಸಿದರು.
ಅಲ್ಲದೇ, ಇವತ್ತು ಕೂಲಿ ಮಾಡುವನ ಸ್ಥಿತಿಯೂ ಬೀದಿಗೆ ಬಂದಿದ್ದು ಈ ಕಡೆ ಅಡುಗೆ ಅನಿಲ ತುಂಬಿಸಿದ್ರೆ ಪೆಟ್ರೋಲ್ಗೆ ಕಾಸಿಲ್ಲ, ಪೆಟ್ರೋಲ್ ತುಂಬಿಸಿದ್ರೆ ಅಡುಗೆ ಎಣ್ಣೆಗೆ ಕಾಸಿಲ್ಲ. ಒಂದು ವೇಳೆ ಈ ಮೂರನ್ನೂ ಸಾಲಸೂಲ ಮಾಡಿ ತುಂಬಿಸಿದ್ರೂ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಎಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಒಬ್ಬ ದಿನಗೂಲಿ ಮಾಡುವವನು ಹೇಗೆ ತಾನೆ ಜೀವನ ನಡೆಸುತ್ತಾನೆ ಎಂದು ಕೃಷ್ಣಪ್ಪ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಣೆ ಮಾಡಿದ ರಾಜ್ಯ ಸರ್ಕಾರ; ಯಾವ ತರಗತಿಗೆ ಎಷ್ಟು ಸಹಾಯಧನ ಸಿಗುತ್ತೆ? ಫುಲ್ ಡೀಟೆಲ್ಸ್
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪೆಟ್ರೋಲ್, ಡೀಸೆಲ್ ಬೆಲೆ ಒಂದು ರೂ ಹೆಚ್ಚಾದ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಈಗ ತಾವೇ ಪ್ರಧಾನಿಯಾಗಿದ್ದಾರೆ. ಬೆಲೆ ಏರಿಕೆ ಗಗನಕ್ಕೇರುತ್ತಿದ್ದರೂ ನಿಯಂತ್ರಣ ಮಾಡದೆ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಟೀಕಿಸಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಜನರಿಗೆ ಕೊಡಬಾರದ ಕಷ್ಟ ಕೊಡುತ್ತಿದ್ದಾರೆ. ಜನಸಾಮಾನ್ಯರು ಈ ಸರ್ಕಾರ ತೊಲಗಿದರೆ ಸಾಕು ಎಂದು ಕಾಯುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಮಯದಲ್ಲಿ ಯುವ ಜೆಡಿಎಸ್ ಅಧ್ಯಕ್ಷ ಬಾಣಸಂದ್ರ ರಮೇಶ್, ಜಿಪಂ ಮಾಜಿ ಅಧ್ಯಕ್ಷ ಕೆ. ಬಿ. ಹನುಮಂತಯ್ಯ, ಬಾಣಸಂದ್ರ ಗ್ರಾಪಂ ಅಧ್ಯಕ್ಷ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ವಿಠಲ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ