ಕೊಡಗಿನ ಭೂಕುಸಿತದಲ್ಲಿ ಸಂಪತ್ತಿನ ಸಹಿತ ಭೂ ಸಮಾಧಿಯಾಗಿದ್ದ ಆಚಾರ್ ಕುಟುಂಬ; ನಿಧಿಗಾಗಿ ಶೋಧ
ತಲಕಾವೇರಿಯಲ್ಲಿ ಸಂಜೆ ಆರು ಗಂಟೆಯಾಗುತ್ತಿದ್ದಂತೆ ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಇದರಿಂದ ಕೆಲವರು ರಾತ್ರಿಯಾಗುತ್ತಲೇ ಮಂದ ಬೆಳಕಿನ ಟಾರ್ಚ್ ಗಳನ್ನು ಹಾಕಿಕೊಂಡು ಹುಡುಕಾಡುತ್ತಿದ್ದಾರೆ ಎನ್ನೋ ಮಾತುಗಳು ಕೇಳಿ ಬರುತ್ತಿವೆ.
ಕೊಡಗು: ದೇವಾಲಯಗಳ ಸುತ್ತಮುತ್ತ ರಾಜಮನೆತನಗಳು ಆಳಿ ಅಳಿದುಳಿದ ಪ್ರದೇಶಗಳಲ್ಲಿ ನಿಧಿಗಾಗಿ ಹುಡುಕಾಡುವುದು ಹೊಸದೇನು ಅಲ್ಲ. ಆದರೆ, ಕುಟುಂಬವೊಂದು ಬದುಕಿದ್ದ ಸ್ಥಳದಲ್ಲಿ ಇದೀಗ ನಿಧಿಗಾಗಿ ಜನರು ಶೋಧಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅದು ಕೂಡ ಭೀಕರ ಭೂಕುಸಿತದಲ್ಲಿ ಮನೆ ಕೊಚ್ಚಿ ಹೋದ ಸ್ಥಳದಲ್ಲಿ ಜನರು ನಿಧಿಗಾಗಿ ಹುಡುಕಾಡುತ್ತಿದ್ದಾರೆ ಎನ್ನೋ ಅಂಶ ಬೆಳಕಿಗೆ ಬಂದಿದೆ. ಆಗಸ್ಟ್ ತಿಂಗಳಲ್ಲಿ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿರುವ ಕಾವೇರಿ ಉಗಮಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಕಂಡು ಕೇಳರಿಯದಂತ ಭೂಕುಸಿತವಾಗಿತ್ತು. ಈ ವೇಳೆ ತಲಕಾವೇರಿ ದೇವಾಲಯದ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಕುಟುಂಬ ಭೂಕುಸಿತದಲ್ಲಿ ಭೂಸಮಾಧಿಯಾಗಿತ್ತು. ಅವರಲ್ಲಿ ಕೆಲವರನ್ನು ಹುಡುಕಿ ಹೊರತೆಗೆದಿದ್ದು ಗೊತ್ತೇ ಇದೆ.
ಇದೇ ವೇಳೆ ನಾರಾಯಣ ಆಚಾರ್ ಅವರ ಕುಟುಂಬ ಶ್ರೀಮಂತ ಕುಟುಂಬವೂ ಆಗಿತ್ತು ಎನ್ನೋ ಸತ್ಯ ಅವರ ಸಾವಿನ ಬಳಿಕವಷ್ಟೇ ಬಹಿರಂಗವಾಗಿತ್ತು. ನಾರಾಯಣ ಆಚಾರ್ ಅವರ ಕುಟುಂಬ ಭೂಕುಸಿತದಲ್ಲಿ ಸಮಾಧಿಯಾಗುವ ವೇಳೆ ಸುಮಾರು ಎರಡು ಕೆ.ಜಿ ಯಷ್ಟು ಚಿನ್ನ ಇತ್ತು, ಲಕ್ಷಾಂತರ ರೂಪಾಯಿ ಹಣವಿತ್ತು. ಅಷ್ಟೇ ಅಲ್ಲ ಕ್ವಿಂಟಾಲ್ ಗಟ್ಟಲೆ ಕಪ್ಪು ಚಿನ್ನ ಕರಿಮೆಣಸು ಮತ್ತು ಏಲಕ್ಕಿ ಇತ್ತು ಎನ್ನೋದು ಸಾಬೀತಾಗಿದೆ. ಅವೆಲ್ಲವೂ ನಾರಾಯಣ ಆಚಾರ್ ಅವರ ಕುಟುಂಬದೊಂದಿಗೆ ಕೊಚ್ಚಿ ಹೋಗಿ ಭೂಸಮಾಧಿಯಾದವೂ ಎನ್ನಲಾಗಿದೆ.
ಹೀಗೆ ಮುಚ್ಚಿ ಹೋಗಿರುವ ಈ ಚಿನ್ನವನ್ನು ನಗದು ಅಥವಾ ಕ್ವಿಂಟಾಲ್ ಗಟ್ಟಲೆ ಇದ್ದ ಕರಿಮೆಣಸು, ಏಲಕ್ಕಿಗಾಗಿ ಇದುವರೆಗೆ ಸುಮ್ಮನಿದ್ದ ಕೆಲವರು ರಾತ್ರಿ ಹುಡುಕಾಟ ಆರಂಭಿಸಿದ್ದಾರೆ ಎನ್ನೋ ಮಾತುಗಳು ಜನವಲಯದಲ್ಲಿ ಕೇಳಿಬರುತ್ತಿದೆ.
ತಲಕಾವೇರಿಯಲ್ಲಿ ಸಂಜೆ ಆರು ಗಂಟೆಯಾಗುತ್ತಿದ್ದಂತೆ ಅಲ್ಲಿಂದ ಎಲ್ಲರೂ ಜಾಗ ಖಾಲಿ ಮಾಡುತ್ತಾರೆ. ಇದರಿಂದ ಕೆಲವರು ರಾತ್ರಿಯಾಗುತ್ತಲೇ ಮಂದ ಬೆಳಕಿನ ಟಾರ್ಚ್ ಗಳನ್ನು ಹಾಕಿಕೊಂಡು ಹುಡುಕಾಡುತ್ತಿದ್ದಾರೆ ಎನ್ನೋ ಮಾತುಗಳು ಕೇಳಿ ಬರುತ್ತಿವೆ. ಅತ್ಯಂತ ದುರ್ಗಮವಾದ ಸ್ಥಳದಲ್ಲಿ ಜನರು ಹೀಗೆ ಹುಡುಕಾಡೋದು ಆತಂಕದ ವಿಷಯ ಎನ್ನೋದು ಸ್ಥಳೀಯರಾದ ಚೇತನ್ ಅವರ ಮಾತು. ನಾರಾಯಣ ಆಚಾರ್ ಬಳಸುತ್ತಿದ್ದ ಎರಡು ಕಾರು ಒಂದು ಬೈಕಿನ ಅವಶೇಷಗಳು ಇಲ್ಲಿಯೇ ಬಿದ್ದಿವೆ.
ಜೊತೆಗೆ ಅವರು ಬಳಸುತ್ತಿದ್ದ ಬಟ್ಟೆ ಸೇರಿದಂತೆ ವಿವಿಧ ವಸ್ತುಗಳು ಅಲ್ಲಿಯೇ ಬಿದ್ದಿವೆ. ನಾವೂ ಕೂಡ ಉಳಿದಿರುವ ಒಂದು ಮನೆಯಲ್ಲಿಯೇ ವಾಸವಿದ್ದೇವೆ. ಅಲ್ಲಿ ನಿಧಿಗಾಗಿ ಹುಡುಕಾಡುತ್ತಿರುವ ಯಾರೂ ನಮಗೆ ಕಾಣಿಸಿಲ್ಲ ಎನ್ನುತ್ತಾರೆ ತಲಕಾವೇರಿ ದೇವಾಲಯದ ಈಗಿನ ಅರ್ಚಕ ಗುರುರಾಜ್ ಆಚಾರ್. ಒಟ್ಟಿನಲ್ಲಿ ಮನೆಯ ಕೊಚ್ಚಿಹೋಗಿರುವ ಸ್ಥಳದಲ್ಲಿ ನಿಧಿಗಾಗಿ ಶೋಧ ನಡೆಯುತ್ತಿದೆ ಎನ್ನೋದು ಮಾತ್ರ ಆಶ್ಚರ್ಯದ ಸಂಗತಿ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ