• Home
  • »
  • News
  • »
  • district
  • »
  • ಹತ್ತೂರಿಗೆ ಶುದ್ಧ ನೀರು‌ ಕುಡಿಸುವ ನದಿ ಪಾತ್ರದ ಗ್ರಾಮಕ್ಕೆ ಅಶುದ್ಧ ನೀರು; ಮುಗಿಯದ ನಂದಾವರ ಗ್ರಾಮಸ್ಥರ ಗೋಳು

ಹತ್ತೂರಿಗೆ ಶುದ್ಧ ನೀರು‌ ಕುಡಿಸುವ ನದಿ ಪಾತ್ರದ ಗ್ರಾಮಕ್ಕೆ ಅಶುದ್ಧ ನೀರು; ಮುಗಿಯದ ನಂದಾವರ ಗ್ರಾಮಸ್ಥರ ಗೋಳು

ಮಲಿನಯುಕ್ತ ನೀರು

ಮಲಿನಯುಕ್ತ ನೀರು

ಲಕ್ಷಾಂತರ ಜನರ ಪಾಲಿಗೆ ಜೀವಧಾರೆಯಾದ ನೇತ್ರಾವತಿಯ ಪಕ್ಕದಲ್ಲೇ ಇರುವ ನಂದಾವರದ ಈ ಗ್ರಾಮ ಮಾತ್ರ ಶುದ್ಧ ನೀರಿಗಾಗಿ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿಯಲ್ಲಿದೆ. ಈ ಜನರ ಮನವಿಗೆ ಸ್ಪಂದಿಸಲಾಗಿದೆ ಎನ್ನುವ ನಿಟ್ಟಿನಲ್ಲಿ ಇಲ್ಲಿ ಕಾಟಾಚಾರದ ಕೆಲವು ಯೋಜನೆಗಳನ್ನು ಆರಂಭಿಸಿದರೂ, ತನ್ನ ಉದ್ದೇಶ ಈಡೇರಿಸುವ ಮೊದಲೇ ಇವುಗಳು ಹಳ್ಳ ಹಿಡಿಯುತ್ತಿದೆ.

ಮುಂದೆ ಓದಿ ...
  • Share this:

ಪುತ್ತೂರು: ದೀಪದ ಕೆಳಗೆ ಕತ್ತಲು ಎನ್ನುವಂತೆ ಹಲವಾರು ಊರುಗಳಿಗೆ ಶುದ್ಧ ಕುಡಿಯುವ ನೀರನ್ನು ಕೊಡುವ ನದಿ ಪಕ್ಕದ ಗ್ರಾಮವೊಂದು ಕಳೆದ ಹಲವಾರು ವರ್ಷಗಳಿಂದ ಅಶುದ್ಧ ನೀರನ್ನೇ ಕುಡಿಯುತ್ತಿದೆ.


ಈ ಗ್ರಾಮದ ಪಕ್ಕದಲ್ಲೇ ನೇತ್ರಾವತಿ ನದಿ ಶುಭ್ರವಾಗಿ ಹರಿದರೂ ಈ ಗ್ರಾಮಕ್ಕೆ ಮಾತ್ರ ಮಲಿನಯುಕ್ತ ನೀರು ಪೂರೈಕೆಯಾಗುತ್ತಿದೆ. ಮಲಿನಯುಕ್ತ ನೀರು ಕುಡಿದು ಈ ಭಾಗದ ಜನರಿಗೆ ಚರ್ಮ ಸಂಬಂಧಿ ಆನಾರೋಗ್ಯವೂ ಕಂಡು ಬಂದಿದೆ. ತಮ್ಮ ಸಮಸ್ಯೆ ಬಗೆಹರಿಸುವಂತೆ ಕಳೆದ ಹನ್ನೆರಡು ವರ್ಷಗಳಿಂದ ಈ ಗ್ರಾಮದ ಜನ ನೀಡಿದ ಮನವಿಗೆ ಬಿಡಿಗಾಸಿನ ಕಿಮ್ಮತ್ತೂ ಸಿಕ್ಕಿಲ್ಲ.


ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿ ಪಾತ್ರದಲ್ಲಿರುವ ಗ್ರಾಮ ನಂದಾವರ ಗ್ರಾಮದ ಜನರ ಮುಗಿಯದ‌ ಗೋಳು. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಮನೆಗಳಿದ್ದು, ಇದರಲ್ಲಿ ಸುಮಾರು 400 ಮನೆಗಳಿಗೆ ಮಲಿನಯುಕ್ತ ನೀರು ಕುಡಿಯಬೇಕಾದ ಅನಿವಾರ್ಯತೆಯಿದೆ. ಮಂಗಳೂರಿನಂತಹ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುತ್ತಿರುವ ನೇತ್ರಾವತಿ ನದಿಯ ಪಕ್ಕದಲ್ಲೇ ಇರುವ ಈ ಗ್ರಾಮ ಇಂಥಹದೊಂದು ಸಮಸ್ಯೆಯನ್ನು ಎದುರಿಸುತ್ತಿದೆ ಎಂದಲ್ಲಿ ಯಾರೂ ನಂಬದಂತಹ ಪರಿಸ್ಥಿತಿಯೂ ಇದೆ. ಆದರೆ ಈ ಗ್ರಾಮದ ನೀರಿನ ಸಮಸ್ಯೆಯ  ವಾಸ್ತವತೆಯನ್ನು ಮಾತ್ರ ನಿರಾಕರಿಸುವಂತಿಲ್ಲ.


ಈ ಗ್ರಾಮಕ್ಕೆ ನೀರು ಪೂರೈಸಲು ನೇತ್ರಾವತಿ ನದಿಯಲ್ಲಿ ಜಾಕ್ ವೆಲ್ ಗಳನ್ನು ನಿರ್ಮಿಸಿ ನೀರನ್ನು ಎತ್ತಲಾಗುತ್ತಿದೆ. ಆದರೆ ಈ ಜಾಕ್ ವೆಲ್ ಗಳ ಮೂಲಕ ನೀರನ್ನು ಟ್ಯಾಂಕ್ ನಲ್ಲಿ ಸಂಗ್ರಹಿಸಿ ನೇರವಾಗಿ ಮನೆಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಲ್ಮಶಯುಕ್ತ ನೀರು ಪ್ರತೀ ಮನೆಗೆ ತಲುಪುತ್ತಿದ್ದು, ನೀರು ಸಂಗ್ರಹಿಸುವ ಮನೆಯ ಟ್ಯಾಂಕುಗಳಲ್ಲಿ ನೀರಿನಲ್ಲೇ ಧೂಳು-ಮಣ್ಣುಗಳು ಸಂಗ್ರಹವಾಗುತ್ತಿದೆ. ಮಲಿನ ನೀರನ್ನು ಪೂರೈಸಲಾಗುತ್ತಿದೆ ಎಂದು ಈ ಊರಿನ ಜನ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಮೇಲಿನಿಂದ ಹಿಡಿದು ಕೆಳಗಿನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನೀಡಿದ ಮನವಿಗಳಿಗೆ ಮಾತ್ರ ಲೆಕ್ಕವಿಲ್ಲ. ಕೊನೆಗೆ ಈ ಊರಿನ ಜನರ ಮನವಿಗೆ ಸ್ಪಂದಿಸಿದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಈ ಊರಿಗೆ ನೀರು ಪೂರೈಕೆಗಾಗಿ ಹಿಂದೆ ಇರುವ ಜಾಕ್ ವೆಲ್ ನ ಪಕ್ಕದಲ್ಲೇ ಇನ್ನೊಂದು ಟ್ಯಾಂಕಿಯನ್ನು ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಿದೆ. ಆದರೆ ಈ ಟ್ಯಾಂಕಿಯೂ ಪ್ರವಾಹದ ಸಂದರ್ಭದಲ್ಲಿ ಮುಳುಗುವ ಸಾಧ್ಯತೆಯಿದ್ದು, ಪ್ರವಾಹದ ನೀರು ಮನೆಗಳಿಗೆ ಪೂರೈಕೆಯಾಗುವ ನೀರಿನಲ್ಲಿ ಬೆರೆಯುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.  ಸುಮಾರು 28 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಾಮಗಾರಿಯೂ ಊರಿಗೆ ಮಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಹಂಝ ನಂದಾವರ.


ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನ 1 ನೇ ವಾರ್ಡ್ ಹಾಗೂ 3 ನೇ ವಾರ್ಡ್ ನಲ್ಲಿ ನೀರಿನ ಈ ಸಮಸ್ಯೆ ಹೆಚ್ಚಾಗಿದ್ದರೂ, ಪಂಚಾಯತ್ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಗ್ರಾಮದ ಜನರಿಗೆ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಶುದ್ಧ ಕುಡಿಯುವ ನೀರಿನ ಘಟಕವನ್ನೇನೋ ಈ ಗ್ರಾಮದಲ್ಲಿ ಅಳವಡಿಸಿದೆ. ಆದರೆ ಇದರಿಂದ ಊರಿನ ಜನ ಕೇವಲ ಒಂದು ದಿನ ಮಾತ್ರ ನೀರು ಕುಡಿದಿದ್ದಾರೆ. ಆ ಬಳಿಕ ಘಟಕ ನಾದುರಸ್ತಿಯಾದ ಕಾರಣ ಶುದ್ಧ ನೀರಿನ ಘಟಕದ ಯೋಜನೆಯೂ ಇಲ್ಲಿ ಹಳ್ಳ ಹಿಡಿದಿದೆ. ಮಲಿನಯುಕ್ತ ನೀರನ್ನು ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯತ್ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸಿದೆಯಾದರೂ, ಸರಿಯಾದ ನಿರ್ವಹಣೆಯಿಲ್ಲದೆ ಈ ಘಟಕವೂ ಇದೀಗ ಪಾಳು ಬಿದ್ದಿದೆ.


ಗ್ರಾಮ ಪಂಚಾಯತ್ ಈ ಗ್ರಾಮಗಳಿಗೆ ಪೂರೈಸುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರದಿಯನ್ನು ಸ್ಥಳೀಯ ನಂದಾವರ ಆರೋಗ್ಯಾಧಿಕಾರಿಗಳು ನೀಡಿದ್ದರೂ, ಯಾವೊಬ್ಬರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಣಮಿಸದಿರುವುದು ಮಾತ್ರ ವಿಪರ್ಯಾಸವೇ ಆಗಿದೆ. ಈ ಕಾರಣಕ್ಕಾಗಿಯೇ ಈ ಭಾಗದ ಜನರ ಚರ್ಮದಲ್ಲಿ ಕೆಲವು ವ್ಯತ್ಯಾಸಗಳೂ ಕಂಡು ಬರುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.


ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಮಲಿನಯುಕ್ತ ನೀರಿನ ಸಮಸ್ಯೆ ಪಂಚಾಯತ್ ನ ಗಮನಕ್ಕೆ ಬಂದಿದೆ. ಈಗಾಗಲೇ ಜಾಕ್ ವೆಲ್ ನಿರ್ಮಿಸಿ ಶುದ್ಧ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಮಾಡಿದೆ. ಇದೊಂದು ದೀರ್ಘ ಕಾಲದ ಸಮಸ್ಯೆಯಾಗಿದ್ದು, ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎನ್ನುವ ಭರವಸೆಯನ್ನು ನೀಡಿದ್ದಾರೆ.


ಇದನ್ನು ಓದಿ: ಮಸೀದಿ-ದರ್ಗಾಗಳಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು; ಅಲ್ಪಸಂಖ್ಯಾತ ಆಯೋಗ ಸೂಚನೆ


ಲಕ್ಷಾಂತರ ಜನರ ಪಾಲಿಗೆ ಜೀವಧಾರೆಯಾದ ನೇತ್ರಾವತಿಯ ಪಕ್ಕದಲ್ಲೇ ಇರುವ ನಂದಾವರದ ಈ ಗ್ರಾಮ ಮಾತ್ರ ಶುದ್ಧ ನೀರಿಗಾಗಿ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿಯಲ್ಲಿದೆ. ಈ ಜನರ ಮನವಿಗೆ ಸ್ಪಂದಿಸಲಾಗಿದೆ ಎನ್ನುವ ನಿಟ್ಟಿನಲ್ಲಿ ಇಲ್ಲಿ ಕಾಟಾಚಾರದ ಕೆಲವು ಯೋಜನೆಗಳನ್ನು ಆರಂಭಿಸಿದರೂ, ತನ್ನ ಉದ್ದೇಶ ಈಡೇರಿಸುವ ಮೊದಲೇ ಇವುಗಳು ಹಳ್ಳ ಹಿಡಿಯುತ್ತಿದೆ.


Published by:HR Ramesh
First published: