ತವರಲ್ಲಿ ದೈವಾರಾಧನೆ ಉಸ್ತುವಾರಿ ವಹಿಸಿಕೊಂಡ ನಳಿನ್ ಕುಮಾರ್ ಕಟೀಲ್; ಕೋವಿಡ್ ಮಾರ್ಗಸೂಚಿ ಪಾಲನೆಗೆ ವಿಶೇಷ ಒತ್ತು

ಏಪ್ರಿಲ್ 6 ರಿಂದ ಏಪ್ರಿಲ್ 9 ರ ವರೆಗೆ ಈ ದೈವಾರಾಧನೆ ಕಾರ್ಯಕ್ರಮವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವೂ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಗಳನ್ನು ಮಾಡಿದೆ. 

ನಳೀನ್ ಕುಮಾರ್ ಕಟೀಲ್.

ನಳೀನ್ ಕುಮಾರ್ ಕಟೀಲ್.

  • Share this:
ಪುತ್ತೂರು; ತುಳುನಾಡಿನಲ್ಲಿ ದೈವಾರಾಧನೆಗೆ ಹೆಚ್ಚಿನ ಮಹತ್ವವಿದ್ದು, ಇದೀಗ ಈ ದೈವಗಳ ಪರ್ವ ತುಳುನಾಡಿನಲ್ಲಿ ಆರಂಭಗೊಂಡಿದೆ. ಕೆಲವು ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಈ ದೈವಾರಾಧನೆಗಳು ನಡೆದರೆ, ಇನ್ನು ಕೆಲವು ಕಡೆಗಳಲ್ಲಿ ಕೊಂಚ ಕಡಿಮೆ ಮಟ್ಟದಲ್ಲಿ ನಡೆಯುತ್ತದೆ. ಇಂಥಹುದೇ ಒಂದು ವಿಶೇಷ ರೀತಿಯ ದೈವಾರಾಧನೆಗೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗ್ರಾಮವೊಂದು ಸಿದ್ಧಗೊಂಡಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ದೈವಾರಾಧನೆಯಂದು ಈ ಗ್ರಾಮದ ಜನ ತಮ್ಮ ಮನೆಯಲ್ಲಿ ಅಡುಗೆ ಮಾಡದೆ, ಇಲ್ಲೇ ಉಟೋಪಚಾರಗಳನ್ನು ಮಾಡಬೇಕಿದೆ. 60 ವರ್ಷಗಳ ಬಳಿಕ ನಡೆಯುವ ಈ ಧರ್ಮ ನೇಮೋತ್ಸವದಲ್ಲಿ ಊರಿಗೆ ಊರೇ ಸೇರಲಿದ್ದು, ಕೋವಿಡ್ ಮಾರ್ಗಸೂಚಿಗಳ ಪಾಲನೆಗೂ ಇಲ್ಲಿ ವಿಶೇಷ ಒತ್ತು ನೀಡಲಾಗಿದೆ.

ಹೌದು, ಈ ರೀತಿಯ ವಿಶೇಷ ದೈವಾರಾಧನೆ ನಡೆಯಲಿರುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ಮನೆಯಲ್ಲಿ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂಜಾಡಿಯಲ್ಲಿರುವ ನಳಿನ್ ಕುಮಾರ್ ಕಟೀಲರ ಈ ಕುಟುಂಬದಲ್ಲಿ ಹಲವಾರು ದೈವಗಳ ಆರಾಧನೆಯಿದೆ. ಸುಮಾರು 13 ಕ್ಕೂ ಮಿಕ್ಕಿದ ದೈವಗಳ ಆರಾಧನೆಯಲ್ಲಿ ಈ ಕುಟುಂಬ ಮಾಡಿಕೊಂಡು ಬರುತ್ತಿದ್ದು, ಕಳೆದ 60 ವರ್ಷಗಳಿಂದ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು. ಇದೀಗ ಈ ಬಾರಿ ಮತ್ತೆ ಈ ಆಚರಣೆಯನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಆಚರಣೆಯ ಸಂಪೂರ್ಣ ಉಸ್ತುವಾರಿಯನ್ನು ಹೊತ್ತಿದ್ದಾರೆ.

ಏಪ್ರಿಲ್ 6 ರಿಂದ ಈ ದೈವಾರಾಧನೆಯ ಆಚರಣೆಗಳು ಆರಂಭಗೊಳ್ಳಲಿದ್ದು, ಇದನ್ನು ಧರ್ಮ ನೇಮೋತ್ಸವ ಎಂದೂ ಕರೆಯಲಾಗುತ್ತಿದೆ. ಈ ದೈವಾರಾಧನೆಗೆ ಸಮಾಜದಿಂದ ಯಾವುದೇ ರೀತಿಯ ದೇಣಿಗೆಯನ್ನು ಪಡೆಯದೆ, ಇಡೀ ಸಮಾಜವನ್ನು ಈ ದೈವಾರಾಧನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಈ ದೈವಾರಾಧನೆಯಂದು ಹಲವರಿಗೆ ಧರ್ಮ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅತ್ಯಂತ ಅದ್ಧೂರಿಯಾಗಿ ಈ ಆಚರಣೆಯನ್ನು ನಡೆಸಲು ತೀರ್ಮಾನಿಸಲಾಗಿತ್ತಾದರೂ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಆಚರಣೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಕೋವಿಡ್ ನ ಎಲ್ಲಾ ಮಾರ್ಗಸೂಚಿಗಳನ್ನೂ ಪಾಲಿಸಿಕೊಂಡು ಈ ದೈವಾರಾಧನೆಯನ್ನು ನಡೆಸಲು ನಳಿನ್ ಕುಮಾರ್ ಕಟೀಲ್ ಕುಟುಂಬ ತೀರ್ಮಾನಿಸಿದೆ.

ದೈವಾರಾಧನೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಾರಣಕ್ಕಾಗಿ ಸುಮಾರು 102 ಎಕರೆ ಪ್ರದೇಶದಲ್ಲಿ ಜನರು ಆರಾಮವಾಗಿ ಸಾಮಾಜಿಕ ಅಂತರ ಪಾಲಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 5 ಸಾವಿರ ಜನ ಪಾಲ್ಗೊಳ್ಳಬೇಕಾದ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಮಿಕ್ಕಿದ ಜನ ಪಾಲ್ಗೊಳ್ಳಬಹುದಾದ ಬೃಹತ್ ಪೆಂಡಾಲ್ ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಜನ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ದೈವಾರಾಧನೆಯ ಹಿನ್ನಲೆಯಲ್ಲಿ ನಡೆಯುವ ಅನ್ನದಾನ ವ್ಯವಸ್ಥೆಯನ್ನೂ ಒಂದೇ ಕಡೆ ಮಾಡದೆ, ಬೇರೆ ಬೇರೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದೈವಾರಾಧನೆಯಲ್ಲಿ ಪಾಲ್ಗೊಳ್ಳಲು ಬರುವ ಪ್ರತಿಯೊಬ್ಬನಿಗೂ ಸ್ಯಾನಿಟೈಸರ್ ಸಿಂಪಡಿಸುವ ಯಂತ್ರಗಳು, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಇದನ್ನು ಓದಿ: ಬಂಗಾರದ ಆಭರಣಗಳಿಂದ ಶೃಂಗಾರಗೊಂಡ ರತಿ-ಕಾಮರು! ಇಷ್ಟಾರ್ಥಸಿದ್ಧಿಗೆ ಚಿನ್ನದ ಹರಕೆ ಹೊತ್ತುಕೊಳ್ಳುವ ಜನರು!

ಕುಂಜಾಡಿ ಹಾಗೂ ಸುತ್ತಮುತ್ತಲಿನ 19 ಗ್ರಾಮಗಳಿಗೆ ಈ ದೈವಾರಾಧನೆ ಆಮಂತ್ರಣ ಪತ್ರಿಕೆಯನ್ನೂ ವಿತರಿಸಲಾಗಿದೆ. ಅಲ್ಲದೆ ಕುಂಜಾಡಿ ಆಸುಪಾಸಿನ ಮೂರು ಗ್ರಾಮಗಳ ಜನರ ಮನೆಯಲ್ಲಿ ದೈವಾರಾಧನೆ ಮುಗಿಯುವ ತನಕ ಅಡುಗೆ ಮಾಡದಂತೆ ಮನವಿ ಮಾಡಲಾಗಿದೆ. ಈ ಮೂರೂ ಗ್ರಾಮದ ಜನರಿಗೆ ಕುಂಜಾಡಿಯ ಧರ್ಮ ನೇಮೋತ್ಸವದಲ್ಲೇ ತಮ್ಮ ಊಟೋಪಚಾರಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.

ಏಪ್ರಿಲ್ 6 ರಿಂದ ಏಪ್ರಿಲ್ 9 ರ ವರೆಗೆ ಈ ದೈವಾರಾಧನೆ ಕಾರ್ಯಕ್ರಮವು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವೂ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಗಳನ್ನು ಮಾಡಿದೆ.
Published by:HR Ramesh
First published: