ಒಂದು ಗುಂಡಿನಿಂದ 17 ಗುಂಡು, ಬಳಿಕ ಬಾಂಬ್, ಇದು ಕಾಂಗ್ರೆಸ್ ಕೊಡುಗೆ: ನಳಿನ್ ಕುಮಾರ್ ಕಟೀಲ್

Nalin Kumar Kateel attacks Congress- ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ ಮತ್ತು ಬಡತನ ಈ ನಾಲ್ಕು ಕೂಡ ಕಾಂಗ್ರೆಸ್ ಪಕ್ಷದ 60 ವರ್ಷ ಆಡಳಿತದಲ್ಲಿ ಬಂದ ಉಡುಗೊರೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ದೂರಿದ್ಧಾರೆ.

ನಳೀನ್ ಕುಮಾರ್ ಕಟೀಲ್

ನಳೀನ್ ಕುಮಾರ್ ಕಟೀಲ್

 • Share this:
  ಬಾಗಲಕೋಟೆ: ಭಯೋತ್ಪಾದನೆಯು ಕಾಂಗ್ರೆಸ್​ನ ಕೊಡುಗೆಯಾಗಿದೆ. ಒಂದು ಗುಂಡಿನಿಂದ 17 ಗುಂಡು, 17 ಗುಂಡಿನಿಂದ ಬಾಂಬ್​ಗೆ ಪ್ರಮೋಷನ್ ನೀಡಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಬಾಗಲಕೋಟೆ ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನಾಲ್ಕು ಕೊಡುಗೆ ಕೊಟ್ಟಿದೆ.  60 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಕೊಡುಗೆ ಅಂದರೆ ಮೊದಲನೆಯದು  ಭ್ರಷ್ಟಾಚಾರ, ಎರಡನೇಯದು  ಭಯೋತ್ಪಾದನೆ, ಮೂರನೇಯದು ನಿರುದ್ಯೋಗ, ನಾಲ್ಕನೆದು ಬಡತನ ಎಂದು ಬಣ್ಣಿಸಿ ವ್ಯಂಗ್ಯವಾಡಿದ ಕಟಿಲ್,  ಈ ನಾಲ್ಕನ್ನೂ ಮುಕ್ತ ಮಾಡಿದ್ದು ಪ್ರಧಾನ ಮಂತ್ರಿ  ನರೇಂದ್ರ ಮೋದಿ ಎಂದು ಹೊಗಳಿದರು.

  ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದನೆ ಹೇಗಿತ್ತು ಅಂತ ಸಣ್ಣ ವಿವರಣೆ ಕೊಡ್ತೇನೆ. ನೆಹರೂ ಕಾಲದಲ್ಲಿ ಒಂದು ಗುಂಡಿನಿಂದ ಗಾಂಧೀಜಿಯನ್ನ ಗೋಡ್ಸೆ ಕೊಂದರು. ಇಂದಿರಾಗಾಂಧಿ ಕಾಲದಲ್ಲಿ 17 ಗುಂಡಿನಿಂದ ಇಂದಿರಾಗಾಂಧಿಯನ್ನೇ ಕೊಂದರು. ರಾಜೀವ್ ಗಾಂಧಿ ಕಾಲದಲ್ಲಿ ಬಾಂಬ್ ಸ್ಪೋಟ ಆಯ್ತು. ಹೀಗಾಗಿ ಒಂದು ಗುಂಡಿನಿಂದ 17 ಗುಂಡಿಗೆ ಪ್ರಮೋಷನ್, 17 ಗುಂಡಿನಿಂದ ಬಾಂಬ್​ಗೆ  ಪ್ರಮೋಷನ್ ಕೊಟ್ಟಿದೆ. ಇದು ಕಾಂಗ್ರೆಸ್​ನ ಆಡಳಿತ. ಆದ್ರೆ ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಭಯೋತ್ಪಾದನೆ ಇಲ್ಲ. ಭಯೋತ್ಪಾದನೆ ಮುಕ್ತ, ನಕ್ಸಲರ ಮುಕ್ತ ಸರ್ಕಾರ ತಂದಿದ್ರೆ ಅದು ನರೇಂದ್ರ ಮೋದಿ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಅಭಿಪ್ರಾಯಪಟ್ಟರು.

  ಕಾಂಗ್ರೆಸ್​ನಿಂದ ಸುಳ್ಳು ಪ್ರಚಾರ: 

  ಕಾರ್ಯಕ್ರಮಕ್ಕೆ ಮುನ್ನ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ಮೇಲೆ ಅತಂತ್ರ ಸ್ಥಿತಿಯಲ್ಲಿ ಇದೆ. ನಿರಂತರವಾಗಿ ಅಪಪ್ರಚಾರ ಮಾಡುವುದು, ಸುಳ್ಳು ಮಾಹಿತಿ ಕೊಡುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕಾರ್ಯದಲ್ಲಿ ತೊಡಗಿದೆ. ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ. ಬಿಜೆಪಿ ಮಹಾನಗರ ಪಾಲಿಕೆ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೇ ರೀತಿ ಗೆಲುವಿನ ಅಂತರ ಜಾಸ್ತಿ ಆದ್ರೆ ನಾವು ನಿರುದ್ಯೋಗಿ ಆಗುತ್ತೇವೆ ಅಂತ ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಿ ದೂರು ಕೊಡುವ ಕೆಲಸ ಮಾಡ್ತಿದೆ ಎಂದು ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.

  ಇದನ್ನೂ ಓದಿ: Covid-19: ಎಸ್​ಡಿಎಂ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 306ಕ್ಕೆ ಏರಿಕೆ; ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ

  ಇದೆ ವೇಳೆ ಮಹಿಳೆಯರ ಜೊತೆ ಅಧಿಕಾರಿಗಳ ಅಸಭ್ಯ ವರ್ತನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಅಸಭ್ಯ ವರ್ತನೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇದರ ಬಗ್ಗೆ ನಿರ್ದಿಷ್ಟವಾದ ಕಾನೂನು ಕ್ರಮವನ್ನ ಸರ್ಕಾರ ಕೈಗೊಳ್ಳುತ್ತೆ ಎಂದರು.

  ಎಸಿಬಿ ದಾಳಿ ವಿಚಾರದ ಬಗ್ಗೆ ಮಾತನಾಡಿ, ಅಧಿಕಾರಿಗಳ ಮೇಲೆ ಬಂದ  ದೂರುಗಳ ಆಧಾರದ ಮೇಲೆ ಎಸಿಬಿ ತನಿಖೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಎಸಿಬಿ ಪಾರದರ್ಶಕವಾಗಿ ಕ್ರಮ ಕೈಗೊಳ್ಳುತ್ತಿದೆ. ಯಾರೇ ಇರಲಿ ಭ್ರಷ್ಟಾಚಾರ ಮಾಡಿದ್ರೆ ಉಳಿಗಾಲ ಇಲ್ಲ ಎನ್ನುವ ಭಯ ಸೃಷ್ಟಿ ಮಾಡುವ ಕೆಲಸ ಎಸಿಬಿಯಿಂದ ಆಗುತ್ತಿದೆ ಎಂದರು.

  ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡಲಿ: 

  40 ಪರ್ಸೆಂಟ್ ಸರ್ಕಾರ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು,  ಪಾರದರ್ಶಕ ವ್ಯವಸ್ಥೆ ಅಡಿಯಲ್ಲಿ ನಮ್ಮ ಸರಕಾರ ನಡೀತಿದೆ. ಯಾವುದೇ ದೂರು ಬಂದಾಗ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುತ್ತದೆ. ಮುಖ್ಯಮಂತ್ರಿ ಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಸುಳ್ಳು ಸುದ್ದಿಗಳನ್ನು ಎಷ್ಟೋ ಹೇಳಬಹುದು. ನಾನೂ ಕೂಡ ಯಾರ ಮೇಲಾದರೂ ಆರೋಪ ಮಾಡಬಹುದು. ವೃಥಾ ಆರೋಪ ಸರಿಯಲ್ಲ. ಆರೋಪ ಮಾಡಿದರೆ ದಾಖಲೆಗಳನ್ನ ಕೊಡಬೇಕು. ದಾಖಲೆಗಳಿಲ್ಲದೆ ಆರೋಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಸರಿಯಾಗಿ ಕ್ರಮ ಕೈಗೊಂಡಿದೆ. ಆ ದೂರನ್ನು ನಿರ್ಲಕ್ಷ್ಯ ಮಾಡದೇ ಕಾನೂನು ಕ್ರಮ ಕೈಗೊಂಡಿದೆ. ಹಿಂದೆಯೂ ಕಾಂಗ್ರೆಸ್ ಸರ್ಕಾರ ಇದ್ದಾಗ ಸರ್ಕಾರದ ಮೇಲೆ ಆರೋಪ ಬಂದಿತ್ತು. ಎಲ್ಲಿ ಕ್ರಮ ಕೈಗೊಂಡರು? ಎಲ್ಲಿ ತನಿಖೆ ಆಗಿದೆ? ಎಂದು ಕಟೀಲ್ ಪ್ರಶ್ನೆ ಮಾಡಿದರು.

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: