ಕಲಬುರ್ಗಿ; ಭೀಮಾ ನದಿ ಪ್ರವಾಹದಿಂದಾಗಿ ಕಲಬುರ್ಗಿ ಜಿಲ್ಲೆಯ ನೂರಾರು ಹಳ್ಳಿಗಳು ನಲುಗಿ ಹೋಗಿದ್ದವು. ಈಗಲೂ ಚೇತರಿಸಿಕೊಳ್ಳಲಾರದ ಸ್ಥಿತಿಯಲ್ಲಿ ಕೆಲ ಹಳ್ಳಿಗಳಿವೆ. ಅವರಿಗೆ ಮನೆ ಬಿದ್ದು ಹೋದ ಪರಿಹಾರವೂ ಸಿಕ್ಕಿಲ್ಲ. ಬೆಳೆ ಹಾಳಾದ ಪರಿಹಾರವೂ ಸಿಕ್ಕಿಲ್ಲ. ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ದೀಪಾವಳಿ ಹಬ್ಬ ಬಂದಿದೆ. ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ, ನೆರೆ ಸಂತ್ರಸ್ತರು ಮಾತ್ರ ಸೂತಕದ ಛಾಯೆಯಲ್ಲಿದ್ದಾರೆ. ಇಂಥವರ ನೋವಿಗೆ ಮಿಡಿಯುವ ಪ್ರಯತ್ನವನ್ನು ನಾಗತಿಹಳ್ಳಿ ಚಂದ್ರಶೇಖರ್ ಮಾಡಿದ್ದಾರೆ.
ಹಿರಿಯ ಸಾಹಿತಿ, ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿಯ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ನೆರೆಪೀಡಿತ ಹಳ್ಳಿಗೆ ತೆರಳಿ, ಸಂತ್ರಸ್ತರೊಂದಿಗೆ ದೀಪ ಬೆಳಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರ ನೋವಿಗೆ ಮಿಡಿದಿದ್ದಾರೆ. ದವಸ-ಧಾನ್ಯ ನೀಡಿ ಶುಭ ಕೋರಿದ್ದಾರೆ.
ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ನೆರೆಪೀಡಿತ ಪ್ರದೇಶಗಳಲ್ಲಿ ಮಾತ್ರ ಹಬ್ಬದ ಸಂಭ್ರವಿಲ್ಲ. ದೀಪದ ಹಬ್ಬದ ಸಂದರ್ಭದಲ್ಲಿಯೂ ಸಂತ್ರಸ್ತರ ಬದುಕಲ್ಲಿ ಕತ್ತಲಾವರಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿಯೇ ಸಂತ್ರಸ್ತರ ನೋವಿಗೆ ಮಿಡಿಯೋ ಪ್ರಯತ್ನವನ್ನು ಹಿರಿಯ ಸಾಹಿತಿ, ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾಡಿದ್ದಾರೆ. ನೆರೆಪೀಡಿತ ಗ್ರಾಮವೊಂದಕ್ಕೆ ತೆರಳಿ, ಅವರೊಂದಿಗೆ ಹಬ್ಬ ಆಚರಿಸಿಕೊಂಡಿದ್ದಾರೆ.
ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಟಗಾ ಗ್ರಾಮಕ್ಕೆ ತೆರಳಿದ ನಾಗತಿಹಳ್ಳಿ ನೇತೃತ್ವದ ತಂಡ, ದೀಪಾವಳಿಯನ್ನು ಅಲ್ಲಿಯೇ ಆಚರಿಸಿತು. ಇಡೀ ಗ್ರಾಮಕ್ಕೆ ದವಸ-ಧಾನ್ಯ ವಿತರಣೆ ಮಾಡಿ ಮಾನವೀಯತೆ ಮೆರೆಯಿತು. ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಟೆಂಟ್ ಸಿನೆಮಾ ಶಾಲೆಗಳ ವತಿಯಿಂದ ದವಸ-ಧಾನ್ಯ ವಿತರಣೆ ಮಾಡಲಾಗಿದೆ. ಅಕ್ಕಿ, ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆಗಳ ಜೊತೆಗೆ ದೀಪ ವಿತರಿಸುವ ಮೂಲಕ ಬದುಕಲ್ಲಿ ದೀಪ ಬೆಳಗಲಿ ಎಂದು ಹಾರೈಸಿದ್ದಾರೆ.
ಇದನ್ನು ಓದಿ: ಪಟಾಕಿ ಸಿಡಿದು ರಾಜಧಾನಿಯಲ್ಲಿ 10 ಜನರಿಗೆ ಗಾಯ; ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ
ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ನಾಗತಿಹಳ್ಳಿ, ನಮ್ಮ ಕೈಲಾದ ಸಹಾಯವನ್ನು ನಾವು ಮಾಡಿದ್ದೇವೆ. ಇದರಿಂದ ನೋವಿನಲ್ಲಿದ್ದವರಿಗೆ ಸಣ್ಣ ಅನುಕೂಲವಾದರೂ ಸಾಕು. ನಮ್ಮ ಅಭಿವೃದ್ಧಿಗೆ ನಾವೇ ಅಡಿಪಾಯ ಹಾಕಿಕೊಳ್ಳಬೇಕು. ರಾಜಕೀಯೇತರ ಸಂಘಟನೆಯನ್ನೂ ರೂಪಿಸಿಕೊಂಡು ಅಭಿವೃದ್ಧಿ ಮಾಡಿ. ನೆರೆ ಇರಲಿ, ಎಂತಹುದ್ದೆ ಸಂಕಷ್ಟ ಬಂದ್ರೂ ಎದುರಿಸೋ ಶಕ್ತಿ ಬರಲಿದೆ ಎಂದು ಇಟಗಾ ಗ್ರಾಮದ ಜನರಿಗೆ ನಾಗತಿಹಳ್ಳಿ ಚಂದ್ರಶೇಖರ್ ಧೈರ್ಯ ತುಂಬಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ