HOME » NEWS » District » MYSURU DASARA 2020 ABHIMANYU ELEPHANT TO CARRY AMBARI AT THIS YEARS MYSORE DASARA SNVS

Mysuru Dasara 2020: ಮೈಸೂರು ದಸರಾ: ಅರ್ಜುನ ಬದಲು ಅಭಿಮನ್ಯು ಮೇಲೆ ಅಂಬಾರಿ

ಹಿಂದೆಲ್ಲಾ ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ 60 ವರ್ಷ ವಯಸ್ಸಾಗಿರುವುದರಿಂದ ವಿಶ್ರಾಂತಿ ನೀಡಲಾಗಿದೆ. ಅಭಿಮನ್ಯು ಆನೆ ಈ ಬಾರಿ ಅಂಬಾರಿ ಹೊರಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯುವ ಈ ಬಾರಿಯ ದಸರಾದಲ್ಲಿ ಕೇವಲ 5 ಆನೆಗಳು ಪಾಲ್ಗೊಳ್ಳಲಿವೆ.

news18-kannada
Updated:September 11, 2020, 4:35 PM IST
Mysuru Dasara 2020: ಮೈಸೂರು ದಸರಾ: ಅರ್ಜುನ ಬದಲು ಅಭಿಮನ್ಯು ಮೇಲೆ ಅಂಬಾರಿ
ದಸರಾ ಅಂಬಾರಿ ಹೊರುವ ಆನೆ ಅಭಿಮನ್ಯು
  • Share this:
ಮೈಸೂರು(ಸೆ. 11): ವಿಶ್ವವಿಖ್ಯಾತ ಮೈಸೂರು ದಸರಾಗೆ ಆನೆಗಳ ಆಯ್ಕೆ ಅಂತಿಮವಾಗಿದೆ. ಮೈಸೂರು ಅರಣ್ಯ ಇಲಾಖೆ ತನ್ನ ಅಂತಿಮ ಪಟ್ಟಿಯನ್ನ ಕಳುಹಿಸಿದ್ದು, ಈ ಬಾರಿ ಸರಳ ದಸರಾದಲ್ಲಿ ಅಂಬಾರಿ ಹೊರುವ ಜವಬ್ದಾರಿ ಅಭಿಮನ್ಯು ಹೆಗಲಿಗೆ ಸಿಗಲಿದೆ. ಪ್ರತಿ ವರ್ಷದಂತೆ 50 ದಿನದ ಮುನ್ನವೇ ಆನೆಗಳು ಮೈಸೂರಿಗೆ ಆಗಮಿಸಿ ರಾಜಬೀದಿಗಳಲ್ಲಿ ತಾಲೀಮು ನಡೆಸುವ ದೃಶ್ಯಗಳು ಈ ಬಾರಿ ಸಿಗೋದಿಲ್ಲ. ಕಾರಣ ಈ ಬಾರಿಯ ಸರಳ ದಸರಾಗೆ 5 ಆನೆಗಳ ಆಯ್ಕೆ ಅಂತಿಮವಾಗಿದ್ದು ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿಯನ್ನ ಕೇಂದ್ರ ಅರಣ್ಯಾಧಿಕಾರಿಗೆ ರವಾನೆ ಮಾಡಿದ್ದು ಆನೆಗಳ ಹೆಸರು ಹಾಗೂ ಆನೆಗಳ ಆರೋಗ್ಯ ಸ್ಥಿತಿಯ ವರದಿ ಸಲ್ಲಿಸಲಾಗಿದೆ. ಇನ್ನೆರಡು ದಿನದಲ್ಲಿ ಕೇಂದ್ರ ಅರಣ್ಯಾಧಿಕಾರಿಯಿಂದ ಅನುಮತಿ ಸಾಧ್ಯತೆ ಇದೆ. ಈ ಬಾರಿ ಅಭಿಮನ್ಯು ಆನೆಯೇ ಅಂಬಾರಿ ಹೊರುವ ಆನೆಯಾಗಿ ಆಯ್ಕೆಯಾಗುವುದು ದೃಢಪಟ್ಟಿದೆ.

ಈ ಬಾರಿಯದಲ್ಲಿ ದಸರಾದಲ್ಲಿ ಅರ್ಜುನ ಆನೆ ಭಾಗಿಯಾಗೋದಿಲ್ಲ 60 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಅರ್ಜುನ ಆನೆಗೆ ದಸರಾದ ಯಾವುದೇ ಜವಬ್ದಾರಿ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಜಂಬೂಸವಾರಿಯಲ್ಲಿ 5 ಆನೆಗಳು ಮಾತ್ರ ಭಾಗಿಯಾಗಲಿದ್ದು, ಹೆಚ್ಚುವರಿ ಆನೆಗಳನ್ನು ಈ ಬಾರಿ ಕಾಡಿನಿಂದ ಕರೆತರುವುದಿಲ್ಲ. ಅಲ್ಲದೆ ಮೊದಲ ದಿನದಿಂದ ಕೊನೆ ದಿನದವರೆಗು ಆನೆಗಳು ಅರಮನೆ ಆವರಣದಲ್ಲೇ ವಾಸ್ತವ್ಯ ಇರಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಅಲೆಕ್ಸಾಂಡರ್‌ ಹೇಳಿದ್ದಾರೆ.

ಇದನ್ನೂ ಓದಿ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ ServeInMyLanguage; ಹಿಂದಿ ದಿವಸ್‌ಗೆ ವಿರೋಧ, ಸರ್ಕಾರದ ಸೇವೆ ಕನ್ನಡದಲ್ಲೇ ಬೇಕೆಂದು ಆಗ್ರಹ

ಈ ಬಾರಿ ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ಕೋವಿಡ್‌ ಟೆಸ್ಟ್‌ ಮಾಡುವ ಸಾಧ್ಯತೆ ದಟ್ಟವಾಗಿದೆ. ಮಾನವರಿಂದ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಆನೆಗಳಿಗೆ ಹಾಗೂ ಆನೆಗಳ ಮಾವುತ ಕಾವಾಡಿಗಳಿಗೆ ಕೋವಿಡ್ ಟೆಸ್ಟ್‌ ಮಾಡುವ ನಿರ್ಧಾರ ಮಾಡಲಾಗಿದೆ. ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಈ ಬಾರಿ ಅರಮನೆ ಒಳಗೆ ಆನೆಗಳ ಸಾರ್ವಜನಿಕ ವಿಕ್ಷಣೆ ರದ್ದು ಮಾಡುವ ಚಿಂತನೆಯಲ್ಲೂ ಅರಣ್ಯ ಇಲಾಖೆ ಇದೆ. ಮಾವುತರು ಸಹ ಪದೆ ಪದೆ ಆನೆ ಬಳಿ ತೆರಳಬಾರದು. ದಸರಾ ಮುಗಿದ ನಂತರ ಆನೆಗಳ ಆರೋಗ್ಯ ತಪಾಸಣೆ ಮಾಡಿ ಆನೆಗಳಿಗೆ ಸೋಂಕು ಇಲ್ಲ ಎಂದು ದೃಢಪಟ್ಟಮೇಲಷ್ಟೆ ಆನೆಗಳನ್ನ ಶಿಬಿರದ ಕಾಡಿಗೆ ರವಾನೆ ಮಾಡ್ತಿವಿ. ದಸರಾ ಆನೆಗಳಿಂದ ಕಾಡಿಗೆ ಸೋಂಕು ಹರಡುವಂತಾಗಬಾರದು ಎಂದು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಿವಿ ಅಂತಾರೆ ಮೈಸೂರು ವನ್ಯಜೀವಿ ಅರಣ್ಯಾಧಿಕಾರಿ ಅಲೆಕ್ಸಾಂಡರ್.

ಒಟ್ಟಾರೆ, ಮೈಸೂರಿನಲ್ಲಿ ದಸರಾ ಎಂದಾಕ್ಷಣ ರಾಜಬೀದಿಗಳಲ್ಲಿ ಸಾಗುತ್ತಿದ್ದ ಗಜರಾಜರುಗಳ ಮೆರವಣಿಗೆ ರದ್ದಾಗಿದೆ. ಅರಮನೆಗೆ ಸೀಮಿತಾಗಿರುವ ದಸರಾದಲ್ಲಿ ಆನೆಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಕೊರೋನಾದಿಂದಾಗಿ ನಡೆಯುವ ಈ ವಿಭಿನ್ನ ದಸರಾ ಆಚರಣೆ ಹೇಗೆಲ್ಲ ಇರಲಿದೆ ಅನ್ನೋದನ್ನ ದಸರಾ ಬರೋವರೆಗೂ ಕಾಯಲೇಬೇಕಾಗಿದೆ.

ವರದಿ: ಪುಟ್ಟಪ್ಪ
Published by: Vijayasarthy SN
First published: September 11, 2020, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories