• Home
  • »
  • News
  • »
  • district
  • »
  • ಕೋವಿಡ್ ಹಾವಳಿ ಮಧ್ಯೆ ಗದಗದ ಪೇಠಾಆಲೂರು ಗ್ರಾಮದಲ್ಲಿ ಮನೆ ಮನೆಯಲ್ಲೂ ನಿಗೂಢ ಜ್ವರದ ಭೀತಿ..!

ಕೋವಿಡ್ ಹಾವಳಿ ಮಧ್ಯೆ ಗದಗದ ಪೇಠಾಆಲೂರು ಗ್ರಾಮದಲ್ಲಿ ಮನೆ ಮನೆಯಲ್ಲೂ ನಿಗೂಢ ಜ್ವರದ ಭೀತಿ..!

ಮನೆ ಮನೆ ಸರ್ವೆ ನಡೆಸಿದ ಅಧಿಕಾರಿಗಳು.

ಮನೆ ಮನೆ ಸರ್ವೆ ನಡೆಸಿದ ಅಧಿಕಾರಿಗಳು.

ಈ ಬಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸಹ ಅಧಿಕಾರಿಗಳ ಜೊತೆ ಮಾತನಾಡಿ ಈ ಬಗ್ಗೆ ಸುದೀರ್ಘ ಮಾಹಿತಿ ಪಡೆದಿದ್ದಾರೆ. ಜೊತೆಗೆ ಆದಷ್ಟು ಆ ಹಳ್ಳಿಯಲ್ಲಿ ನಿಗೂಢ ಜ್ವರ ಕಣ್ಮರೆಯಾಗಬೇಕು. ಮತ್ತು ಜ್ವರದಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಬೇಕು ಅಂತ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮುಂದೆ ಓದಿ ...
  • Share this:

ಗದಗ: ಎಲ್ಲೆಡೆ ಎರಡನೇ ಅಲೆಯ ಕೋವಿಡ್ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ನಗರ ಪ್ರದೇಶಗಳ ಜೊತೆಗೆ ಹಳ್ಳಿಗಳಿಗೂ ಕೊರೋನಾ ಕಾಲಿಟ್ಟಿದ್ದು ಇಡೀ ಊರಿಗೆ ಊರೇ ಸೋಂಕಿತರಾಗುತ್ತಿದ್ದಾರೆ. ಈ ಮಧ್ಯೆ ಗದಗದ ಹಳ್ಳಿಯೊಂದರಲ್ಲಿ ಪ್ರತಿ ಮನೆ ಮನೆಗೂ ನಿಗೂಢ ಜ್ವರ ಕಾಣಿಸಿಕೊಂಡಿದೆ. ಪರಿಣಾಮ ಇಡೀ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿತ್ತು. ಆದರೂ ಆರೋಗ್ಯ ಇಲಾಖೆ ಮಾತ್ರ ಇತ್ತ ಸುಳಿದಿರಲಿಲ್ಲ‌‌. ಈ‌ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿದ ಬೆನ್ನಲ್ಲೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಆತಂಕ ದೂರ ಮಾಡಿದ್ದಾರೆ.


ಹೌದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಆಲೂರು ಗ್ರಾಮದಲ್ಲಿ ಪ್ರತಿ‌ ಮನೆಗೂ ಜ್ವರ ಪೀಡಿತ ರೋಗಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಕೊರೋನಾ ಆತಂಕ ಮನೆ ಮಾಡಿದೆ. ಇಡೀ ಊರಿಗೆ ಊರೇ ರೋಗಗ್ರಸ್ಥವಾಗಿದೆ. ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಬ್ಬರು ಇಬ್ಬರು ಜ್ವರದಿಂದ ಬಳಲುತ್ತಿರೋದು ಕಂಡು ಬಂದಿದೆ. ಗ್ರಾಮದಲ್ಲಿ 700ಕ್ಕೂ ಹೆಚ್ಚು ಜನರಲ್ಲಿ ಈ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ಮೂಡಿದೆ. ಈಗಾಗಲೇ ಈ ನಿಗೂಢ ಜ್ವರಕ್ಕೆ ಮೂರು ದಿನಗಳ ಅಂತರದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ‌ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.


ಕೊರೋನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಹಲವು ಕಾರ್ಮಿಕರು ಆಗಮಿಸಿದ್ದರು. ಹೀಗಾಗಿ ಇವರಿಂದಲೇ ಇಡೀ ಗ್ರಾಮದ ಸುತ್ತ ಜ್ವರ ಹರಡಿಕೊಂಡಿರಬಹುದು ಅಂತ ಜನರು ಹೇಳ್ತಿದ್ದಾರೆ. ಲಾಕ್ ಡೌನ್ ಹಾಗೂ ಜನತಾ ಕರ್ಫ್ಯೂ ಇದ್ದ ಕಾರಣ ಇಲ್ಲಿಯ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲೂ ಸಹ ಸಾಧ್ಯವಾಗಿಲ್ಲ. ಆದರೆ, ದಿನದಿಂದ ದಿನಕ್ಕೆ ಮಾತ್ರ ಇಡೀ ಗ್ರಾಮ ಜ್ವರದಿಂದ ಆವರಿಸುತ್ತಿದೆ. ಉಳಿದಂತೆ ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ‌ ಕುರಿತ ನ್ಯೂಸ್ 18 ಕನ್ನಡದ ವರದಿ ಪ್ರಸಾರ ಬೆನ್ನಲ್ಲೆ ಗ್ರಾಮಕ್ಕೆ ಮುಂಡರಗಿ ತಾಲೂಕಾಡಳಿತ ಸೇರಿದಂತೆ ಗದಗ ಡಿಎಚ್ಓ ಸತೀಶ್ ಬಸರಿಗಿಡದ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪ್ರತಿ ಕುಟುಂಬಸ್ಥರ ಮಾಹಿತಿ ಕಲೆ ಹಾಕಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.


ಇದನ್ನು ಓದಿ: ಶೀಘ್ರದಲ್ಲೇ 720 ತಜ್ಞರು ಸೇರಿ 2,480 ವೈದ್ಯರ ನೇರ ನೇಮಕಾತಿ; ಆರೋಗ್ಯ ಸಚಿವ ಕೆ. ಸುಧಾಕರ್


ಗದಗ ಡಿಹೆಚ್ ಓ ಸತೀಶ್ ಬಸರಿಗಿಡದ್, ತಹಸೀಲ್ದಾರ್ ಆಶಪ್ಪ ಪೂಜಾರಿ, ಕಂದಾಯ‌ ಇಲಾಖೆ ಅಧಿಕಾರಿ ಎಂ.ಎ.ನದಾಫ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಶಾ ಕಾರ್ಯಕರ್ತೆಯರಿಂದ ಸರ್ವೆ ಮಾಡಿಸಿ ಅನಾರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಿದರು. ಈ ಬಗ್ಗೆ ಮಾಹಿತಿ ನೀಡಿದ ಡಿಹೆಚ್.ಓ ಡಾ. ಸತೀಶ್ ಬಸರಗಿಡದ ಈವರೆಗೆ 50 ಮನೆಗಳ ಸರ್ವೆ ಮಾಡಲಾಗಿದೆ, ಸಾಮಾನ್ಯ ಜ್ವರದ ಪ್ರಕರಣ ಬೆಳಕಿಗೆ ಬಂದಿವೆ. ಆದರೆ ಸದ್ಯ ಕೋವಿಡ್ ಆತಂಕ ಇಲ್ಲ‌. ಗ್ರಾಮಸ್ಥರು ಆತಂಕ ಪಡುವ ಅಗತ್ಯ ಇಲ್ಲ. ಕೆಲವೇ ಕೆಲವು ಜ್ವರದ ಪ್ರಕರಣಗಳಿವೆ‌ ಎಂದು ತಿಳಿಸಿದ್ದಾರೆ. 6000 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ 600 ಮನೆಗಳಿವೆ. ಸರ್ವೆ ಪ್ರಗತಿಯಲ್ಲಿದ್ದು, ಪ್ರಾಥಮಿಕ ವರದಿ ಪ್ರಕಾರ ಆತಂಕ ಪಡಬೇಕಿಲ್ಲ. ಗ್ರಾಮದಲ್ಲಿ ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿಲ್ಲ. ಶೀಘ್ರದಲ್ಲಿಯೇ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೂ ಸಹ ಗ್ರಾಮಸ್ಥರಲ್ಲಿ ಕೋವಿಡ್ ಆತಂಕ ಮನೆ ಮಾಡಿದೆ.


ಇನ್ನು ಈ ಬಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸಹ ಅಧಿಕಾರಿಗಳ ಜೊತೆ ಮಾತನಾಡಿ ಈ ಬಗ್ಗೆ ಸುದೀರ್ಘ ಮಾಹಿತಿ ಪಡೆದಿದ್ದಾರೆ. ಜೊತೆಗೆ ಆದಷ್ಟು ಆ ಹಳ್ಳಿಯಲ್ಲಿ ನಿಗೂಢ ಜ್ವರ ಕಣ್ಮರೆಯಾಗಬೇಕು. ಮತ್ತು ಜ್ವರದಿಂದ ಬಳಲುತ್ತಿರುವವರು ಶೀಘ್ರ ಗುಣಮುಖರಾಗಬೇಕು ಅಂತ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.


ವರದಿ: ಸಂತೋಷ ಕೊಣ್ಣೂರ

Published by:HR Ramesh
First published: