ಕಂಟೈನ್ಮೆಂಟ್ ಜೋನ್​ನಲ್ಲೇ ನಿಗದಿಯಾಗಿತ್ತು SSLC ಪರೀಕ್ಷೆ; ನ್ಯೂಸ್18 ವರದಿ ಬಳಿಕ ಪರೀಕ್ಷಾ ಕೇಂದ್ರ ಸ್ಥಳಾಂತರ

ಕಂಟೈನ್ಮೆಂಟ್ ಝೋನ್​ನಲ್ಲಿರುವ ಕೃಷ್ಣವಿಲಾಸ ರಸ್ತೆಯಲ್ಲಿರುವ ಅವಿಲಾ ಕಾನ್ವೆಂಟ್​ನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. ಈ ಬಗ್ಗೆ ನ್ಯೂಸ್18 ವರದಿ ಮಾಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಮಹಾರಾಣಿ ಕಾಲೇಜಿಗೆ ಪರೀಕ್ಷಾ ಕೇಂದ್ರ ಬದಲಾಯಿಸಿದರು.

ಮೈಸೂರಿನ ಅವಿಲಾ ಕಾನ್ವೆಂಟ್

ಮೈಸೂರಿನ ಅವಿಲಾ ಕಾನ್ವೆಂಟ್

  • Share this:
ಮೈಸೂರು(ಜೂನ್ 24): ಇಡೀ ಜಿಲ್ಲೆಯಲ್ಲಿ 39 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಎಂಬ ನಾಳೆಯ ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ಧಾರೆ. ಆದರೆ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆಯೋಜನೆ ಬಗ್ಗೆ ಅಧಿಕಾರಿಗಳಲ್ಲಿ ಅಂತಿಮ ಹಂತದಲ್ಲೂ ತುಸು ಗೊಂದಲ ಮುಂದುವರಿದಿದೆ. ಮೈಸೂರಿನಲ್ಲಿ ಕಂಟೈನ್ಮೆಂಟ್ ಏರಿಯಾದಲ್ಲಿಯೇ ಪರೀಕ್ಷೆ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಿದ್ದ ಅಧಿಕಾರಿಗಳು ಕೊನೆಗೂ ನ್ಯೂಸ್‌ 18 ವರದಿಯಿಂದ ಎಚ್ಚೆತ್ತು ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡಿದ್ದಾರೆ.

ಮೈಸೂರಿನ ಕೃಷ್ಣ ವಿಲಾಸ ರಸ್ತೆ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿದೆ. ಆ ಪ್ರದೇಶದ ಅವಿಲಾ ಕಾನ್ವೆಂಟ್‌ ಶಾಲೆಯಲ್ಲಿ ಪರೀಕ್ಷಾ ಕೇಂದ್ರವಿದ್ದು, 264 ವಿದ್ಯಾರ್ಥಿಗಳು ಬರೆಯಬೇಕಿತ್ತು. ಪರೀಕ್ಷಾ ಕೇಂದ್ರದ ಎದುರಿನಲ್ಲೇ ಸೋಂಕಿತ ವ್ಯಕ್ತಿಯ ಮನೆ ಇದೆ. ಇಷ್ಟಾದರೂ ಶಿಕ್ಷಣ ಇಲಾಖೆ ಮಾತ್ರ ಪರೀಕ್ಷಾ ಕೇಂದ್ರವನ್ನ ಸ್ಥಳಾಂತರ ಮಾಡುವ ಚಿಂತನೆಯನ್ನೇ ಮಾಡಿರಲಿಲ್ಲ. ಆದರೆ, ನ್ಯೂಸ್‌18 ಕನ್ನಡ ಈ ಬಗ್ಗೆ ಇಂದು ವರದಿ ಪ್ರಸಾರ ಮಾಡುತ್ತಿದ್ದಂತೆಯೇ ಅಲರ್ಟ್ ಆದ ಅಧಿಕಾರಿಗಳು ಕೂಡಲೇ ಅದರ ಪಕ್ಕದಲ್ಲಿರುವ ಮಹಾರಾಣಿ ಕಾಲೇಜು ಹಾಗೂ ಪ್ರೌಢಶಾಲೆಯ ಕಟ್ಟಡಕ್ಕೆ ಪರೀಕ್ಷಾ ಕೇಂದ್ರವನ್ನ ಸ್ಥಳಾಂತರ ಮಾಡಿದರು. ಸ್ವತಃ ಡಿಡಿಪಿಐ ಪಾಡುರಂಗ, ಬಿಇಓ ರಾಮರಾದ್ಯ ಸ್ಥಳ ಪರಿಶೀಲನೆ ಮಾಡಿ ಪರೀಕ್ಷಾ ಕೇಂದ್ರವನ್ನ ಸ್ಥಳಾಂತರ ಮಾಡುವ ನಿರ್ಧಾರ ಮಾಡಿದರು.

ಆ ನಂತರ ಮಾತನಾಡಿದ ಡಿಡಿಪಿಐ, ಮೈಸೂರಿನ ಅವಿಲಾ‌ ಕಾನ್ವೆಂಟ್ ಶಾಲೆಯು ಕಂಟೈನ್ಮೆಂಟ್ ಜೋನ್​ನಲ್ಲಿ ಇರಲಿಲ್ಲ. ಅಲ್ಲೇ ಪರೀಕ್ಷೆ ನಡೆಸಲು ನಾವು ಸಿದ್ದರಿದ್ದೆವು. ಮಾಧ್ಯಮಗಳಲ್ಲಿ ವರದಿ ಬಂದ ಕಾರಣ ಸ್ಥಳಾಂತರ ಮಾಡಿದ್ದೇವೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: SSLC Examination - ಕೋವಿಡ್ ಸುರಕ್ಷಾತಾ ಕ್ರಮಗಳೊಂದಿಗೆ ಚಾಮರಾಜನಗರದಲ್ಲಿ SSLC ಮಾಕ್ ಟೆಸ್ಟ್

ಈಗ ಪರೀಕ್ಷಾ ಕೇಂದ್ರ ಸ್ಥಳಾಂತರವಾದ ಮಹಾರಾಣಿ ಕಾಲೇಜು‌ ಕಂಟೈನ್ಮೆಂಟ್ ಜೋನ್​ನಲ್ಲಿ ಇಲ್ಲ. ಕಂಟೈನ್ಮೆಂಟ್ ಜೋನ್‌ಗೆ ಮುಖ ಮಾಡಿರುವ ಬಾಗಿಲನ್ನು ಮುಚ್ಚಿದ್ದೇವೆ. ಅದೇ ಕಾಲೇಜಿ‌ನ ಬೇರೆ ಗೇಟ್ ಮೂಲಕ‌ ವಿದ್ಯಾರ್ಥಿಗಳನ್ನ ಒಳಗೆ ಬಿಡಲಾಗುವುದು. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಅವಶ್ಯಕತೆ ಇರುವವರು ಬಂದು ಪರೀಕ್ಷಾ ಕೇಂದ್ರಗಳನ್ನು ನೋಡಬಹುದು. ಮೈಸೂರು‌ ನಗರದಲ್ಲೂ 46 ಪರೀಕ್ಷಾ ಕೇಂದ್ರ ಇದೆ. 46 ಪರ್ಯಾಯ ಪರೀಕ್ಷಾ ಕೇಂದ್ರಗಳನ್ನು ಮಾಡಿಕೊಂಡಿದ್ದೇವೆ. ನಮಗೆ ಯಾವುದೇ ತೊಂದರೆಯಾಗದಂತೆ ಜಿಲ್ಲೆಯಾದ್ಯಂತ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ‌ ಎಂದು ಮೈಸೂರು ಡಿಡಿಪಿಐ ಪಾಂಡುರಂಗ ಹೇಳಿದರು.

ಇನ್ನು, ಎಸ್‍ಎಸ್‍ಎಲ್‍ಸಿ ಪರೀಕ್ಷಗೆ ಮೈಸೂರು ಜಿಲ್ಲಾಡಳಿತವೂ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 39,822 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ 139 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1468 ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದವರು ಮೈಸೂರಿನಲ್ಲಿ ಯಾರೊಬ್ಬರೂ ಪರೀಕ್ಷೆ ಬರೆಯುತ್ತಿಲ್ಲ. ಆದ್ರೆ ಹೊರ ಜಿಲ್ಲೆಯ 338 ವಿದ್ಯಾರ್ಥಿಗಳು ಮೈಸೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. 851 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಶಾಲೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಿರುತ್ತದೆ. ಒಂದು ಪೆನ್ನು ಪೆನ್ನಿಲ್‌ ಅನ್ನು ಸಹ ವಿದ್ಯಾರ್ಥಿಗಳು ಬದಲಾಯಿಸಿಕೊಳ್ಳಲು ಅವಕಾಶ ಇರೋಲ್ಲ ಅಂತ ಡಿಡಿಪಿಐ ಖಡಕ್ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಮತ್ತೆ ಲಾಕ್​ಡೌನ್: ಎಲ್ಲಾ ಪಕ್ಷಗಳ ಶಾಸಕರ ಒಮ್ಮತದ ಅಭಿಪ್ರಾಯ?ಒಟ್ಟಾರೆ ಇಂದು ಮೈಸೂರು ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯತನದಿಂದ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡೋಕೆ ಹೊರಟಿದ್ದರು. ನ್ಯೂಸ್‌ 18 ವರದಿಯಿಂದ ಜಿಲ್ಲಾಡಳಿತದ ಅಧಿಕಾರಿಗಳು ಎಚ್ಚೆತ್ತು  ಕಂಟೈನ್ಮೆಂಟ್ ಜೋನ್‌ನಲ್ಲಿದ್ದ ಪರೀಕ್ಷಾ ಕೇಂದ್ರ ಸ್ಥಳಾಂತರ ಮಾಡಿದ್ದು ಪೋಷಕರಲ್ಲಿದ್ದ ಆತಂಕ ದೂರ ಮಾಡಿದೆ.
First published: