ಮೈಸೂರು; ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ರುಕ್ಮಿಣಿ ಮಾದೇಗೌಡ ಆರಂಭದಲ್ಲೆ ವಿವಾದ ಸುಳಿಗೆ ಸಿಲುಕಿದ್ದಾರೆ. ತಮ್ಮ ಪಾಲಿಕೆ ಸದಸ್ಯತ್ವ ಸ್ಥಾನದ ಕುರಿತು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹಾಕಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಎದುರಾಗಿದೆ. ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನ ಅಗ್ನಿ ಪರೀಕ್ಷೆ ಎದುರಿಸುವಂತಾಗಿತ್ತು. ಕೊನೆಗೂ ವಿಚಾರಣೆ ಮುಂದೂಡಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೌದು..ಮೈಸೂರು ಪಾಲಿಕೆಯ ನೂತನ ಮೇಯರ್‌ಗೆ ಮೊದಲ ದಿನವೇ ಅಗ್ನಿ ಪರೀಕ್ಷೆ ಎದುರಾಗಿತ್ತು, ವಿವಾದ ಸುಳಿಗೆ ಸಿಲುಕಿದ ನೂತನ ಮೇಯರ್ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದಿದೆ.
ವಾರ್ಡ್ ನಂಬರ್ 36 ರ ಸದಸ್ಯೆ ಆಗಿರುವ ರುಕ್ಮಿಣಿ ಮಾದೇಗೌಡ, ಚುನಾವಣೆ ವೇಳೆ ಕ್ಯಾಟಗರಿ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಬಿಸಿಎಂ(ಬಿ)ಗೆ ನಿಗದಿಯಾಗಿದ್ದ ವಾರ್ಡ್‌ನಲ್ಲಿ ತೆರಿಗೆ ಪಾವತಿದಾರರಾಗಿರುವ ರುಕ್ಮಿಣಿ ಮಾದೇಗೌಡ ಸ್ಪರ್ಧೆ ಮಾಡಿದ್ದರು, ಇದು ಚುನಾವಣೆ ಆಯೋಗದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಇವರು ನಗರ ಪ್ರದೇಶದ ನಿವಾಸಿ ಅಲ್ಲ ಅನ್ನೋ ಆರೋಪವು ರುಕ್ಮಿಣಿ ಮಾದೇಗೌಡ ಮೇಲೆ ಇದೆ. ಈ ಎಲ್ಲಾ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ ರಜಿನಿ ಅಣ್ಣಯ್ಯ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಮಾಡುವಂತೆ ಮನವಿ ಮಾಡಿದ್ದರು.
ಕೆಳಹಂತದ ನ್ಯಾಯಾಲಯದಲ್ಲಿ ರುಕ್ಮಿಣಿ ಮಾದೇಗೌಡ ಪರ ತೀರ್ಪು ಬಂದಿತ್ತು. ಇದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದಾಗ ರುಕ್ಮಿಣಿ ಮಾದೇಗೌಡ ವಿರುದ್ದ ತೀರ್ಪು ಬಂದಿತ್ತು. ಜೊತೆಗೆ ಜಿಲ್ಲಾ ನ್ಯಾಯಾಲಯ ಡಿಸೆಂಬರ್ 14, 2020ರಲ್ಲಿ ರುಕ್ಮಿಣಿ ಸದಸ್ಯತ್ವ ರದ್ದು ಮಾಡಿಲು ನ್ಯಾಯಾಲಯ ನಿರ್ದೇಶನ ಮಾಡಿತ್ತು. ರುಕ್ಮಿಣಿ ಮಾದೇಗೌಡ ಬದಲಾಗಿ ರಜಿನಿ ಅಣಯ್ಯ ಚುನಾಯಿತ ಸದಸ್ಯೆ ಎಂದು ಘೋಷಿಸಲು ಆದೇಶಿಸಿತ್ತು. ಅದರಂತೆ ರಜಿನಿಗೆ ಪ್ರಮಾಣ ಪತ್ರ ನೀಡುವಂತೆಯೂ ಆದೇಶಿಸಿತ್ತು. ಆ ನಂತರ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರ ಹೋಗಿದ್ದ ರುಕ್ಮಿಣಿ ಮಾದೇಗೌಡ ಈ ಆದೇಶಕ್ಕೆ ತಡೆ ತಂದಿದ್ದರು.
ಇಂದು ನಡೆದ ವಿಚಾರಣೆಯಲ್ಲಿ ಮೈಸೂರು ನೂತನ ಮೇಯರ್ ರುಕ್ಮಿಣಿ ಮಾದೇಗೌಡರಿಗೆ ಕೊಂಚ ರಿಲೀಫ್ ಆಗಿದ್ದು, ಪಾಲಿಕೆ ಸದಸ್ಯತ್ವ ಪ್ರಶ್ನಿಸಿ ಹೈಕೋರ್ಟ್‌ನಲ್ಲಿದ್ದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಬಿಸಿಎಂ(ಬಿ) ಮಿಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ಹಾಗೂ ನಗರವಾಸಿ ಅಲ್ಲ ಎಂಬ ಆರೋಪದ ಮೇಲೆ ಹಾಕಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್ಜಿ ಜಿಲ್ಲಾ ನ್ಯಾಯಾಲಯದಲ್ಲಿನ ತೀರ್ಪಿನ್ನ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಹಾಕಲಾಗಿದ್ದ ಅರ್ಜಿಯನ್ನ ದಿನಾಂಕ ನಿಗಧಿ ಪಡಿಸದೆ ಮುಂದೂಡಿದ ಹೈಕೋರ್ಟ್ ಹೊಸ ಮೇಯರ್‌ಗೆ ಸ್ವಲ್ಪ ನೆಮ್ಮದಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ