news18-kannada Updated:September 22, 2020, 6:21 PM IST
ಸಾಂದರ್ಭಿಕ ಚಿತ್ರ
ಮೈಸೂರು (ಸೆ.22): ಕೊರೋನಾ ಸಂಕಷ್ಟ ಈ ಬಾರಿ ನಾಡ ಹಬ್ಬ ದಸರಾ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆ ಸರಳವಾಗಿ ಈ ವರ್ಷ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ. ವಿಶ್ವವಿಖ್ಯಾತ ಜಂಬೂಸವಾರಿ ವೀಕ್ಷಣೆಗೂ ಸೀಮಿತ ಸಂಖ್ಯೆಯಲ್ಲಿ ಜನರು ಸೇರಲು ಅನುಮತಿ ನೀಡಲಾಗಿದೆ. ಕೊರೋನಾದಿಂದಾಗಿ ದಸರಾ ಕೇವಲ 5 ಆನೆಗಳು ಮಾತ್ರ ಜಂಬೂಸವಾರಿಯಲ್ಲಿ ಭಾಗಿಯಾಗಲು ಸರ್ಕಾರ ಅನುಮತಿ ನೀಡಿದೆ. ದಸರಾ ವೇಳೆ ಭಾಗಿಯಾಗುವ ಆನೆಗಳು ಅಕ್ಟೋಬರ್ 1ರಂದು ಅರಮನೆ ತಲುಪಲಿದೆ. ಪ್ರತಿಬಾರಿ ಜಂಬೂಸವಾರಿ ಆನೆಗಳ ಜೊತೆ ಮಾವುತರು, ಕಾವಾಡಿಗರ ಕುಟುಂಬಕ್ಕೂ ದಸರಾಕ್ಕೆ ಸರ್ಕಾರ ಆಹ್ವಾನ ನೀಡುತ್ತಿತ್ತು. ಅಲ್ಲದೇ ಅವರಿಗಾಗಿ ಅರಮನೆ ಮೈದಾನದಲ್ಲಿ ತಾತ್ಕಲಿಕ ಶೆಡ್ ನಿರ್ಮಾಣ ಮಾಡಿ, ಅವರ ಮಕ್ಕಳಿಗೆ ಶಾಲೆ, ಆರೋಗ್ಯ ಕೇಂದ್ರ ಸೇರಿದಂತೆ ಮೂಲಭೂತ ವ್ಯವಸ್ಥೆಯನ್ನು ಏರ್ಪಡಿಸಲಾಗುತ್ತಿತ್ತು. ಆದರೆ, ಕೊರೋನಾ ಹಿನ್ನಲೆ ಆರೋಗ್ಯದ ದೃಷ್ಟಿಕೋನದಿಂದ ಈ ಬಾರಿ ಮಾವುತರ ಕುಟುಂಬಕ್ಕೆ ಆಹ್ವಾನ ನೀಡಿಲ್ಲ. ಹೀಗಾಗಿ, ದಸರೆ ವೇಳೆ ಅರಮನೆಯ ವೈಭವದ ಕಣ್ತುಂಬಿಕೊಳ್ಳುತ್ತಿದ್ದ ಮಕ್ಕಳು ನಿರಾಶೆಗೊಳ್ಳುವಂತೆ ಆಗಿದೆ.
ಈಗಾಗಲೇ ಆನೆಗಳ ಆಯ್ಕೆ ಮಾಡಿರುವ ಆಯೋಗ್ಯ ಇಲಾಖೆ ಮಾವುತರಿಗೆ, ಕಾವಾಡಿಗರು ಅರಮನೆ ಆವರಣ ಬಂದು ಸೇರುವಂತೆ ಸೂಚನೆ ನೀಡಿದೆ. ಅಭಿಮನ್ಯು ಈ ಬಾರಿ ಅಂಬಾರಿ ಹೊರಲಿದ್ದು, ಆತನಿಗೆ ವಿಕ್ರಮ, ಗೋಪಿ, ವಿಜಯ ಹಾಗೂ ಕಾವೇರಿ ಆನೆಗಳು ಜೊತೆಯಾಗಲಿವೆ.
ಅರಮನೆ ಆವರಣ ಬಂದು ಸೇರುವ ಮಾವುತರು ಹಾಗೂ ಕಾವಾಡಿಗರನ್ನು ಜನರ ಸಂಪರ್ಕ ಇಲ್ಲದಂತೆ ಇರಲು ಸೂಚನೆ ನೀಡಲಾಗಿದ್ದು, ಆನೆಗಳಷ್ಟೇ ಮಾವುತರ ಆರೋಗ್ಯ ಕೂಡ ಮುಖ್ಯ ಎಂದು ಡಿಸಿಎಫ್ ಅಲೆಗ್ಸಾಂಡರ್ ತಿಳಿಸಿದ್ದಾರೆ.
ಇದನ್ನು ಓದಿ: ದಸರೆಗೆ ಆನೆಗಳ ಆಯ್ಕೆ ಅಂತಿಮ; ಅಕ್ಟೋಬರ್ 2ಕ್ಕೆ ಅರಮನೆ ಅಂಗಳ ಸೇರಲಿರುವ 5 ಆನೆಗಳು
ಈ ಹಿಂದೆ ಆನೆಗಳ ಜೊತೆ ಮಾವುತರು ಮತ್ತು ಕಾವಾಡಿಗರ ಕುಟುಂಬ ಕೂಡ ಸರಿಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ಬೀಡು ಬಿಡುತ್ತಿದ್ದರು. ಇವರಿಗೆ ಮೂಲ ಸೌಲಭ್ಯವನ್ನು ನೀಡುತ್ತಿದ್ದ ಸರ್ಕಾರ ಅವರಿಗೆ ವಾಸ್ತವ್ಯಕ್ಕೆ ಟೆಂಟ್ ನಿರ್ಮಿಸುತ್ತಿತ್ತು . ಅಲ್ಲದೇ ಮಕ್ಕಳಿಗೆ ತಾತ್ಕಲಿಕವಾಗಿ ಶಾಲೆ ಆರಂಭಿಸಲಾಗುತ್ತಿತ್ತು. ಇನ್ನು ಮಾವುತರ ಕುಟುಂಬಕ್ಕೆ ವಿಶೇಷವಾಗಿ ಭೋಜನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಸದ್ಯ ಇದಕ್ಕೆಲ್ಲಾ ಕೊರೋನಾ ಬ್ರೇಕ್ ನೀಡಿದ್ದು, ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ಮಾವುತರ,
ಕಾವಾಡಿಗರ ಕುಟುಂಬ ಈ ಬಾರಿ ಕಾಡಿನಲ್ಲಿಯೇ ಉಳಿದುಕೊಳ್ಳಲಿದೆ
Published by:
Seema R
First published:
September 22, 2020, 3:18 PM IST