Mysore Dasara 2020 - ಕೊರೋನಾ ಸಂಕಟದ ಮಧ್ಯೆ ಸರಳ ದಸರಾ ಮಹೋತ್ಸವ ಅಂತ್ಯ

Jamboo Savari 2020 - ಐತಿಹಾಸಿಕ ಮೈಸೂರು ದಸರಾದ ಅಂತಿಮ ದಿನದಂದು ಬನ್ನಿ ಪೂಜೆ, ವಿಜಯಯಾತ್ರೆ, ಉತ್ತರ ಪೂಜೆ, ಜಂಬೂ ಸವಾರಿ ನಡೆಯಿತು. ಸೆಕ್ಷನ್ 144 ಜಾರಿ ಮಾಡಿದರೂ ಜನರು ಗುಂಪುಗುಂಪಾಗಿ ಬಂದು ಜಂಬೂ ಸವಾರಿ ವೀಕ್ಷಿಸಿದರು.

news18-kannada
Updated:October 26, 2020, 6:29 PM IST
Mysore Dasara 2020 - ಕೊರೋನಾ ಸಂಕಟದ ಮಧ್ಯೆ ಸರಳ ದಸರಾ ಮಹೋತ್ಸವ ಅಂತ್ಯ
ಮೈಸೂರು ದಸರಾಗೆ ಸಿದ್ಧಗೊಂಡಿದ್ದ ಕಂಚಿನ ರಥ
  • Share this:
ಮೈಸೂರು(ಅ. 26): ವಿಶ್ವ ವಿಖ್ಯಾತ ಮೈಸೂರು ದಸರಾ ಈ ವರ್ಷ ಸರಳವಾಗಿ ಆಚರಿಸಲಾಗಿದೆ. ಪ್ರತಿ ವರ್ಷ ಒಂಬತ್ತು ದಿನಗಳ ಕಾಲ ವೈಭವೋಪೇತವಾಗಿ ನಡೆಯುತ್ತಿದ್ದ ಇಲ್ಲಿಯ ದಸರಾ ಈ ವರ್ಷ ಬಹಳ ವಿಭಿನ್ನವಾಗಿ ನಡೆದಿದೆ. ಒಂಬತ್ತನೇ ಹಾಗೂ ಕೊನೆಯ ದಿನವಾದ ಇಂದು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯುವುದರೊಂದಿಗೆ ದಸರಾ ಮಹೋತ್ಸವಕ್ಕೆ ತೆರೆಬಿದ್ದಿತು. 750 ಕಿಲೋ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ಮೆರವಣಿಗೆಯಲ್ಲಿ ಸಾಗಿತು. ವಿಕ್ರಮ್ ಮತ್ತು ಗೋಪಿ ಆನೆಗಳು ಮೆರವಣಿಗೆಯ ಮೊದಲ ಸಾಲಿನಲ್ಲಿ ಹೆಜ್ಜೆ ಹಾಕಿದರು. ಮಧ್ಯಾಹ್ನ 3:21ಕ್ಕೆ ಪ್ರಾರಂಭವಾದ ಅಂಬಾರಿ ಮೆರವಣಿಗೆ 23 ನಿಮಿಷ ಕಾಲ ಸಾಗಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 3:54ಕ್ಕೆ ಅಂತಿಮವಾಗಿ ಅಂಬಾರಿ ಮೇಲೆ ಪುಷ್ಪಾರ್ಚನೆ ಮಾಡಿದರು. ಸ್ತಬ್ಧಚಿತ್ರ ಹಾಗೂ ಕಲಾ ತಂಡಗಳ ಮೆರವಣಿಗೆ 33 ನಿಮಿಷ ನಡೆಯಿತು. ಒಟ್ಟು 56 ನಿಮಿಷ ಕಾಲ ದಸರಾ ಜಂಬೂ ಸವಾರಿ ನಡೆಯಿತು.

ಮುಖ್ಯಮಂತ್ರಿಗಳ ಜೊತೆಗೆ ಮಹಾರಾಜ ಯದುವೀರ್ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಂಬೂ ಸವಾರಿಯನ್ನು ವೀಕ್ಷಿಸಿದರು. ಜಂಬೂ ಸವಾರಿ ವೀಕ್ಷಣೆಗೆ ಮಾಮೂಲಿಯ ಸಂದರ್ಭದಲ್ಲಿ 24,400 ಮಂದಿ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಈಗ ಕೇವಲ 300 ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: Jamboo Savari 2020: ಮೈಸೂರು ದಸರಾ: ಸರಳ ಹಾಗೂ ಅರ್ಥಪೂರ್ಣವಾಗಿ ನಡೆದ ಜಂಬೂ ಸವಾರಿ

ಇದಕ್ಕೆ ಮುನ್ನ ಇವತ್ತಿನ ಜಂಬೂ ಸವಾರಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದ ಸುತ್ತ ಸೆಕ್ಷನ್ 144 ಹೇರಲಾಗಿತ್ತು. ಸಾರ್ವಜನಿಕರು ಗುಂಪುಗೂಡದಂತೆ ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೂ ಕೂಡ ಜನರು ಗುಂಪು ಗುಂಪಾಗಿ ಬಂದು ದೂರದಿಂದಲೇ ದಸರಾ ವೀಕ್ಷಣೆಗೆ ನಿಂತಿದ್ದರು. ಜಂಬೂ ಸವಾರಿ ಅರಮನೆ ಆವರಣ ಪ್ರವೇಶಿಸುತ್ತಿದ್ದಂತೆ ಸಾರ್ವಜನಿಕರು ಜೈಕಾರ ಹಾಕಿದರು. ದೂರದಿಂದಲೇ ನಿಂತು ದೇವಿಗೆ ಕೈಮುಗಿದರು. ಜಂಬೂ ಸವಾರಿ ಮುಗಿಯುತ್ತಿದ್ದಂತೆಯೇ ಪೊಲೀಸರು ಬಂದು ಜನರ ಗುಂಪುಗಳನ್ನ ಚದುರಿಸಿ ಕಳುಹಿಸಿದರು. ಜಂಬೂ ಸವಾರಿ ಮುಕ್ತಾಯವಾದರೂ ಅರಮನೆಯತ್ತ ಜನರು ನಡೆದು ಬರುವುದು ನಿಲ್ಲಲಿಲ್ಲ. ಜಂಬೂ ಸವಾರಿ ನಿಂತ ಹಿನ್ನೆಲೆಯಲ್ಲಿ ದೂರದಿಂದಲೇ ಜನರು ಅರಮನೆಯನ್ನು ವೀಕ್ಷಿಸಿ ವಾಪಸ್ ಹೋದರು.

ಇದನ್ನೂ ಓದಿ: ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ರೌಡಿ ಕಾಳಗ; ಗೂಂಡಾ ಕಾಯ್ದೆ ಹೇರಲು ಪೋಲೀಸ್ ಸಿದ್ಧತೆ

ದಸರಾ ಕೊನೆಯ ದಿನವಾದ ಇಂದು ಜಂಬೂ ಸವಾರಿಗೆ ಮುಂಚೆ ಬೆಳಗ್ಗೆ ಭುವನೇಶ್ವರಿ ದೇವಾಲಯದಲ್ಲಿ ಬನ್ನಿಪೂಜೆ ನಡೆಯಿತು. ಮಹಾರಾಜ ಯದುವೀರ್ ಒಡೆಯರ್ ಬನ್ನಿಪೂಜೆ ನೆರವೇರಿಸಿದರು. ಬೆಳ್ಳಿ ರಥದ ಬದಲು ಈ ಬಾರಿ ಕಾರಿನಲ್ಲಿ ವಿಜಯಯಾತ್ರೆ ನಡೆಯಿತು. ಪಟ್ಟದ ಆನೆ, ಕುದುರೆ, ಒಂಟೆ ಮತ್ತು ಹಸುವನ್ನು ಅರಮನೆ ಬಾಗಿಲಿಗೆ ಕರೆತರಲಾಯಿತು.

ಕಂಚಿನ ರಥದಲ್ಲಿ ಉತ್ತರ ಪೂಜೆ ನಡೆಯಿತು. ನಂತರ ಪಟ್ಟದ ಕತ್ತಿಯನ್ನು ಭುವನೇಶ್ವರಿ ದೇವಾಲಯಕ್ಕೆ ರವಾನೆ ಮಾಡಲಾಯಿತು. ಪ್ರತೀ ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದ ವಜ್ರಮುಷ್ಠಿ ಕಾಳಗವನ್ನು ಈ ಬಾರಿ ರದ್ದುಗೊಳಿಸಲಾಗಿತ್ತು.ವರದಿ: ಪುಟ್ಟಪ್ಪ / ಕೃಷ್ಣ ಜಿ.ವಿ.
Published by: Vijayasarthy SN
First published: October 26, 2020, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading