• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೊನೆಗೂ ದೋಸ್ತಿಯಲ್ಲಿ ಮುಗಿದ ಮೈಸೂರು ಪಾಲಿಕೆ ಮೇಯರ್​ ಸ್ಥಾನ; ಡಿ.ಕೆ. ಶಿವಕುಮಾರ್​ ಎಂಟ್ರಿಯಿಂದ ಮೆಗಾ ಟ್ವಿಸ್ಟ್​!

ಕೊನೆಗೂ ದೋಸ್ತಿಯಲ್ಲಿ ಮುಗಿದ ಮೈಸೂರು ಪಾಲಿಕೆ ಮೇಯರ್​ ಸ್ಥಾನ; ಡಿ.ಕೆ. ಶಿವಕುಮಾರ್​ ಎಂಟ್ರಿಯಿಂದ ಮೆಗಾ ಟ್ವಿಸ್ಟ್​!

ಮೇಯರ್​ ಆಗಿ ಆಯ್ಕೆಯಾಗಿರುವ ಜೆಡಿಎಸ್ ಪಕ್ಷದ ರುಕ್ಮಿಣಿ.

ಮೇಯರ್​ ಆಗಿ ಆಯ್ಕೆಯಾಗಿರುವ ಜೆಡಿಎಸ್ ಪಕ್ಷದ ರುಕ್ಮಿಣಿ.

ಹೆಚ್ಚು ಮತ ಪಡೆದ ಜೆಡಿಎಸ್​ ಪಕ್ಷದ ರುಕ್ಮಿಣಿ ಅವರು ಮೇಯರ್ ಆದ್ರೆ, ಕಾಂಗ್ರೆಸ್‌ನ ಅನ್ವರ್ ಬೇಗ್ 43 ಮತ ಪಡೆದು ಉಪಮೇಯರ್ ಆಗಿ ಮೈಸೂರು ಪಾಲಿಕೆಯಲ್ಲಿ ದೋಸ್ತಿ ಆಡಳಿತ ಮುಂದುವರೆಸಿದ್ದಾರೆ.

  • Share this:

ಮೈಸೂರು: ಬಿಜೆಪಿ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಮೈಸೂರು‌ ಪಾಲಿಕೆ ಗದ್ದುಗೆ ಕೊನೆಗೂ ಹಳೆ ದೋಸ್ತಿಗಳ ಪಾಲಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಪಾಲಿಕೆ ಗದ್ದುಗೆ ರಾಜಕೀಯಕ್ಕೆ ಕಡೆ ಕ್ಷಣದಲ್ಲಿ ಎಂಟ್ರಿ ಆದ ಡಿಕೆಶಿ, ಎಲ್ಲರಿಗೂ ಮಾಸ್ಟರ್‌ ಸ್ಟ್ರೋಕ್ ನೀಡಿದ್ದಾರೆ.  ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೇಯರ್ ಸ್ಥಾನದ ಕನಸು ಕಂಡಿದ್ದ ಬಿಜೆಪಿಗೆ ಹಿನ್ನಡೆಯಾಗಿದ್ದು,  ಅತ್ತ ಮೈತ್ರಿಯಿಂದ ಗೆದ್ದ ಸಿದ್ದರಾಮಯ್ಯರು ಪರೋಕ್ಷವಾಗಿ ಸೋತಂತೆ ಕಾಣುತ್ತಿದೆ. ಹಾಗಾದ್ರೆ ಮೈಸೂರು ಪಾಲಿಕೆ ಅಧಿಕಾರದಲ್ಲಿ ನಿಜಕ್ಕೂ ಗೆದ್ದದ್ದು ಯಾರು? ಮೇಯರ್​ ಸ್ಥಾನ ಒಲಿದದ್ದು ಯಾರಿಗೆ? ಇಲ್ಲಿದೆ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿದ್ದ ಮೈಸೂರು ಪಾಲಿಕೆ ಮೇಯರ್ ಚುನಾವಣೆಯ ಸಂಪೂರ್ಣ ವಿವರ..!


ರಾಜಕೀಯ ಮುಖಂಡರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ. ಜೆಡಿಎಸ್‌-ಬಿಜೆಪಿ, ಬಿಜೆಪಿ-ಜೆಡಿಎಸ್‌, ಯಾರು ಅಧಿಕಾರ ಹಿಡಿಯಲಿದ್ದಾರೆ?. ಕೊನೆಗೆ ಅಧಿಕಾರ ಸ್ವತಂತ್ರ್ಯ ಅಭ್ಯರ್ಥಿಗಳ ಪಾಲಾಗುತ್ತಾ? ಹೀಗೆ ನಾನಾ ಪ್ರಶ್ನೆಗಳು ಮೂಡಿದ್ದವು. ಕೊನೆಗೆ ಇದೀಗ ಈ ಎಲ್ಲಾ ಕಸರತ್ತುಗಳೂ ಮುಗಿದಿದ್ದು ಈ ಬಾರಿಯೂ ಜೆಡಿಎಸ್-‌ಕಾಂಗ್ರೆಸ್ ಜಂಟಿಯಾಗಿ ಅಧಿಕಾರ ನಡೆಸಲಿರುವುದು ಖಚಿತವಾಗಿದೆ.


ಹೌದು, ಈ ಬಾರಿ ಮೈತ್ರಿ ಇಲ್ಲ ಎನ್ನುತ್ತಿದ್ದ ಜೆಡಿಎಸ್ ನಾವು ಯಾರ ಜೊತೆಯು ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದಿದ್ದರು. ಅಲ್ಲದೆ ನಮ್ಮದು ಒಂದು ಪಕ್ಷವೇ ಅಲ್ಲ ಎಂದವರ ಜೊತೆ ನಾವ್ಯಾಕೆ ಹೋಗಬೇಕು? ಬೇಕಿದ್ದಲ್ಲಿ ಅವರೇ ಬರಲಿ. ಆದರೆ ನಾವು ಮೈತ್ರಿಗೆ ಒಪ್ಪೋದಿಲ್ಲ ಅಂತ ಕುಮಾರಸ್ವಾಮಿ ಮೈತ್ರಿಗೆ ತಿಲಾಂಜಲಿ ಇಟ್ಟಿದ್ದರು. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರು ಸಹ ಇದರ ಲಾಭ ಪಡೆಯೋದಕ್ಕೆ ಮುಂದಾಗಿದ್ದರು.


ಅದರಂತೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮುಖಾಂತರ ನಮಗೆ ಮೇಯರ್ ಸ್ಥಾನ ಕೊಟ್ಟು, ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ಎಂಬ ಲೆಕ್ಕಾಚಾರ ಇತ್ತು. ಆದರೆ, ಇದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದ ಕುಮಾರಸ್ವಾಮಿ, ನಾವು ದೇವೇಗೌಡರ ಮಾತು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದಿದ್ದರು. ಆದರೆ, ಚುನಾವಣೆ ಕೆಲವೇ ಕ್ಷಣಗಳು ಇರುವಾಗ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ನಾವು ಯಾರ ಜೊತೆ ಹೊಂದಾಣಿಕೆ ಇಲ್ಲ, ಸ್ವತಂತ್ರವಾಗಿ ಸ್ಪರ್ಧೆ ಮಾಡ್ತಿವಿ ಎಂದು ಅಚ್ಚರಿ ಮೂಡಿಸಿದ್ದರು.


ಈ ನಡುವೆ ಉಮೇಧುವಾರಿಕೆ ಸಲ್ಲಿಸಿದ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ  ವಾಪಸ್ ಪಡೆಯಲೇ ಇಲ್ಲ. ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಅಧಿಕಾರಿಗಳು ಮತದಾನಕ್ಕೆ ಅವಕಾಶ ಕಲ್ಪಿಸಿದ್ರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿ ಎಂದಾಗ ಯಾರೊಬ್ಬರು ಕೈ ಎತ್ತದೆ ತಟಸ್ಥರಾದರು. ಬಳಿಕ ಜೆಡಿಎಸ್ ಮೇಯರ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಅವರ ಸರದಿ ಬಂದಾಗ ಕಾಂಗ್ರೆಸ್ ಜೆಡಿಎಸ್- ಇಬ್ಬರು ಸಹ ಕೈ ಎತ್ತಿ ಸಹಕಾರ ನೀಡಿ 43 ಮತಗಳನ್ನ ಚಲಾಯಿಸಿದರು. ಈ ಬೆಳವಣಿಗೆ ಕಂಡು ಬಿಜೆಪಿ ಸದಸ್ಯರು ಹಾಗೂ ನಾಯಕರು ಅಚ್ಚರಿಗೊಳಗಾದರು.


ಬಳಿಕ ಹೆಚ್ಚು ಮತ ಪಡೆದ ರುಕ್ಮಿಣಿ ಅವರು ಮೇಯರ್ ಆದ್ರೆ, ಕಾಂಗ್ರೆಸ್‌ನ ಅನ್ವರ್ ಬೇಗ್ 43 ಮತ ಪಡೆದು ಉಪಮೇಯರ್ ಆಗಿ ಮೈಸೂರು ಪಾಲಿಕೆಯಲ್ಲಿ ದೋಸ್ತಿ ಆಡಳಿತ ಮುಂದುವರೆಸಿದ್ದಾರೆ. ಇದೆ ರೀತಿ ಉಪಮೇಯರ್‌ ಆಯ್ಕೆ ಸಹ ಆಗಿದ್ದು, ಕಾಂಗ್ರೆಸ್‌ನ ಅನ್ವರ್ ಬೇಗ್‌ ಉಪಮೇಯರ್ ಆಗಿ ಆಯ್ಕೆಯಾದರು. ನಾವು ಹಳೆ ಮೈತ್ರಿ ಮುಂದುರೆಸಿದ್ದೇವೆ, ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವ ಪ್ರಯತ್ನ ಯಶ್ವಸ್ವಿಯಾಗಿದೆ ಎಂದು ಶಾಸಕ ತನ್ವೀರ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿ: ಮತ್ತೊಂದು ಐಎಮ್​ಎ ಹಗರಣಕ್ಕೆ ಸಜ್ಜಾಗಿದೆಯಾ ಬೆಳಗಾವಿಯ ಈ ಕಂಪನಿ: ಪರವಾನಗಿ ಇಲ್ಲದೆ ಹಣ ಪಡೆಯುತ್ತಿರುವುದೇಕೆ?


ಇನ್ನೂ ಇಷ್ಟೇಲ್ಲಾ ಹೈ ಡ್ರಾಮಾದ ಮಧ್ಯೆಯೇ ಬಿಜೆಪಿ ಮೊದಲ ಬಾರಿಯ ಮೇಯರ್ ಕನಸು ಭಗ್ನವಾಗಿ ಬೇಸರ ಹೊರಹಾಕಿದ್ದಾರೆ. ಅಲ್ಲದೆ ಸಿದ್ದರಾಮಯ್ಯರನ್ನು ನಾವು ಹುಲಿ ಎಂದುಕೊಂಡಿದ್ದೆವು, ಆ ಹುಲಿಯನ್ನ ಕುಮಾರಸ್ವಾಮಿ ಅವರು ಹಿಡಿದು ಬೋನಿಗೆ ಹಾಕಿದ್ದಾರೆಂದು ಸಂಸದ ಪ್ರತಾಪ್ ‌ಸಿಂಹ ವ್ಯಂಗ್ಯವಾಡಿದರು. ಜೊತೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ ಹಾಗಾಗಿ ಈ ರೀತಿಯ ಮೈತ್ರಿಯು ನಿಮಗೆ ಬೇಕಿತ್ತಾ? ಎಂದು ಪ್ರತಾಪ್‌ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.


ಇದೆಲ್ಲದರ ನಡುವೆ ಮೇಯರ್ ಆಗಿ ಹೊರಹೊಮ್ಮಿದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದು, ಉತ್ತಮ ಕಾರ್ಯ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಒಟ್ಟಾರೆ, ಕ್ಷಣಕ್ಷಣಕ್ಕು ಕುತೂಹಲ ಮೂಡಿಸಿದ್ದ ಮೇಯರ್ ಚುನಾವಣೆ ಎಂದಿನಂತೆ ದೋಸ್ತಿಯಾಗಿ ಮುಗಿದಿದೆ. ಆದರೆ, ಬಿಜೆಪಿ ಗೆಲುವಿನ ಲೆಕ್ಕಾಚಾರದಲ್ಲಿ ಡಿಕೆಶಿ ಎಂಟ್ರಿ, ಪಾಲಿಕೆ ಚುನಾವಣೆಗೆ ಕೊಟ್ಟ ಮೆಗಾ ಟ್ವಿಸ್ಟ್ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಂತು ಸುಳ್ಳಲ್ಲ.

First published: